ಡಬ್ಲ್ಯುಟಿಎ ಫೈನಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡ ಕೊಕೊ ಗೌಫ್
ರಿಯಾದ್ : ಒಲಿಂಪಿಕ್ಸ್ ಚಾಂಪಿಯನ್ ಝೆಂಗ್ ಕ್ವಿನ್ವೆನ್ರನ್ನು ಮಣಿಸಿದ ಕೊಕೊ ಗೌಫ್ 20 ವರ್ಷಗಳಲ್ಲಿ ಮೊದಲ ಬಾರಿ ಡಬ್ಲ್ಯುಟಿಎ ಫೈನಲ್ಸ್ ಮುಡಿಗೇರಿಸಿಕೊಂಡ ಕಿರಿಯ ವಯಸ್ಸಿನ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಮಹಿಳೆಯರ ಸಿಂಗಲ್ಸ್ ವಿಭಾಗದ ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಅಮೆರಿಕದ ಆಟಗಾರ್ತಿ ಗೌಫ್ ಅವರು ಚೀನಾದ ಆಟಗಾರ್ತಿ ಝೆಂಗ್ರನ್ನು 3-6, 6-4, 7-6(7/2) ಸೆಟ್ಗಳ ಅಂತರದಿಂದ ಮಣಿಸಿದರು.
20ರ ಹರೆಯದ ಗೌಫ್ ಮೂರು ಗಂಟೆ ಹಾಗೂ 4 ನಿಮಿಷಗಳ ಕಾಲ ನಡೆದ ಫೈನಲ್ ಪಂದ್ಯದಲ್ಲಿ ಮೊದಲ ಸೆಟ್ನ್ನು 3-6ರಿಂದ ಸೋತಿದ್ದರು. ಎರಡನೇ ಸೆಟ್ನಲ್ಲಿ 1-3 ಹಿನ್ನಡೆಯಲ್ಲಿದ್ದರೂ, ಆ ನಂತರ ಪುಟಿದೆದ್ದ ಗೌಫ್ ಎರಡನೇ ಸೆಟ್ಟನ್ನು 6-4 ಅಂತರದಿಂದ ಗೆದ್ದುಕೊಂಡರು. ಮೂರನೇ ಸೆಟ್ ನ್ನು ಟೈ ಬ್ರೇಕರ್ನಲ್ಲಿ 7-6(7/2) ಅಂತರದಿಂದ ಜಯಿಸಿದರು.
ಇದು ಸೌದಿ ಅರೇಬಿಯದಲ್ಲಿ ನಡೆದಿರುವ ಮೊದಲ ವೃತ್ತಿಪರ ಮಹಿಳೆಯರ ಟೆನಿಸ್ ಸ್ಪರ್ಧೆಯಾಗಿದ್ದು, ಆ ಮಾನದಂಡದಲ್ಲಿ ನಾನು ಇತಿಹಾಸ ಪುಟಕ್ಕೆ ಸೇರಿದ್ದೇನೆ. ನಮ್ಮ ಕ್ರೀಡೆಯಲ್ಲಿ ಇದು ಎರಡನೇ ಅತಿದೊಡ್ಡ ಪ್ರಶಸ್ತಿಯಾಗಿದೆ. ಇದು ನನ್ನ ಪಾಲಿಗೆ ಮಹತ್ವದ್ದಾಗಿದೆ ಎಂದು ಗೌಫ್ ಹೇಳಿದ್ದಾರೆ.
ಗೌಫ್ ಅವರು ಟ್ರೋಫಿಯ ಜೊತೆಗೆ 4,805,000 ಯುಎಸ್ ಡಾಲರ್ ಬಹುಮಾನವನ್ನು ಪಡೆದರು.
ಗೌಫ್ ಅವರು ಫೈನಲ್ ಹಾದಿಯಲ್ಲಿ ವಿಶ್ವದ ಇಬ್ಬರು ಅಗ್ರಮಾನ್ಯ ಆಟಗಾರ್ತಿಯರಾದ ಅರ್ಯನಾ ಸಬಲೆಂಕಾ ಹಾಗೂ ಇಗಾ ಸ್ವಿಯಾಟೆಕ್ಗೆ ಸೋಲುಣಿಸಿದ್ದರು.
ಝೆಂಗ್ ಅವರು ಲೀ ನಾ ನಂತರ ಡಬ್ಲ್ಯುಟಿಎ ಫೈನಲ್ಸ್ನಲ್ಲಿ ಸಿಂಗಲ್ಸ್ ಚಾಂಪಿಯನ್ ಶಿಪ್ ಪಂದ್ಯವನ್ನಾಡಿದ ಚೀನಾದ ಎರಡನೇ ಆಟಗಾರ್ತಿಯಾಗಿದ್ದಾರೆ. 2013ರಲ್ಲಿ ಲೀ ನಾ ಈ ಸಾಧನೆ ಮಾಡಿದ್ದರು.
ಚೀನಾದ ಸ್ಟಾರ್ ಆಟಗಾರ್ತಿ ಝೆಂಗ್ ಅವರು 2024ರಲ್ಲಿ ಹಿಂದಿನ 37 ಪಂದ್ಯಗಳಲ್ಲಿ 31ರಲ್ಲಿ ಜಯ ಸಾಧಿಸುವ ಮೂಲಕ ಸೋಮವಾರ ಬಿಡುಗಡೆಯಾಗಿರುವ ಡಬ್ಲ್ಯುಟಿಎ ರ‍್ಯಾಂಕಿಂಗ್ ನಲ್ಲಿ ಜೀವನಶ್ರೇಷ್ಠ 5ನೇ ಸ್ಥಾನ ತಲುಪಿದರು.