ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್: ಸುಭದ್ರ ಸ್ಥಿತಿಯತ್ತ ಭಾರತ
ಹೊಸದಿಲ್ಲಿ: ಸ್ಟಾರ್ ಬ್ಯಾಟ್ಸ್ ಮ ನ್ ವಿರಾಟ್ ಕೊಹ್ಲಿ ತಮ್ಮ 500ನೇ ಅಂತಾರಾಷ್ಟ್ರೀಯ ಪಂದ್ಯವನ್ನು ಶತಕದೊಂದಿಗೆ ಸ್ಮರಣೀಯವಾಗಿಸುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿದ್ದು, ಅತಿಥೇಯ ವೆಸ್ಟ್ಇಂಡೀಸ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಮೊದಲನೇ ದಿನವೇ ಭಾರತ ಸುಭದ್ರ ಸ್ಥಿತಿ ತಲುಪಿದೆ. ಟ್ರಿನಿಡಾಡ್ ನಲ್ಲಿ ಗುರುವಾರ ಆರಂಭವಾದ ಟೆಸ್ಟ್ ನ ಮೊದಲ ದಿನದ ಆಟದ ಮುಕ್ತಾಯದ ವೇಳೆಗೆ ಭಾರತ 4 ವಿಕೆಟ್ ನಷ್ಟಕ್ಕೆ 288 ರನ್ ಗಳನ್ನು ಕಲೆ ಹಾಕಿದೆ.
ಮೊದಲ ಟೆಸ್ಟ್ ನ ನೀರಸ ಪ್ರದರ್ಶದ ಬಳಿಕ ಎರಡನೇ ಟೆಸ್ಟ್ ನ ಮೊದಲ ದಿನ ಆರಂಭದಲ್ಲಿ ವೆಸ್ಟ್ಇಂಡೀಸ್ ಬೌಲರ್ ಗಳು ಉತ್ತಮ ಹೋರಾಟ ತೋರಿದರು. ಆದರೆ ಕೊಹ್ಲಿಯವರ ಅಜೇಯ 87 ರನ್ ಗಳೊಂದಿಗೆ ಭಾರತ ಮೊದಲ ದಿನ ನಿಯಂತ್ರಣ ಸಾಧಿಸುವಲ್ಲಿ ಯಶಸ್ವಿಯಾಯಿತು.
ಭಾರತದ ಆರಂಭಿಕ ಜೋಡಿಯಾದ ರೋಹಿತ್ ಶರ್ಮಾ (80) ಹಾಗೂ ಯಶಸ್ವಿ ಜೈಸ್ವಾಲ್ (57) ಮೊದಲ ವಿಕೆಟ್ಗೆ 139 ರನ್ ಗಳ ಭರ್ಜರಿ ಜತೆಯಾಟ ನೀಡಿ ಭಾರತೀಯ ಇನಿಂಗ್ಸ್ ಗೆ ಭದ್ರ ಬುನಾದಿ ಹಾಕಿಕೊಟ್ಟರು. ಆದರೆ ಮಧ್ಯಾಹ್ನದ ಬಳಿಕ ನಾಲ್ಕು ವಿಕೆಟ್ ಗಳನ್ನು ಕಬಳಿಸುವ ಮೂಲಕ ವಿಂಡೀಸ್ ಬೌಲರ್ ಗಳು ಭಾರತದ ನಾಗಲೋಟಕ್ಕೆ ತಡೆ ಹಾಕಿದರು.
ಕೊನೆಯ ಅವಧಿಯಲ್ಲಿ ಕೊಹ್ಲಿ ಹಾಗೂ ರವೀಂದ್ರ ಜಡೇಜಾ (36 ನಾಟೌಟ್) ಆಕರ್ಷಕ ಹೊಡೆತಗಳೊಂದಿಗೆ 33.2 ಓವರ್ ಗಳಲ್ಲಿ 106 ರನ್ ಸೇರಿಸಿದರು. ಮೊದಲ ದಿನ 84 ಓವರ್ ಗಳ ಆಟ ಸಾಧ್ಯವಾಯಿತು. 20 ಎಸೆತಗಳಲ್ಲಿ ಯಾವುದೇ ರನ್ ಗಳಿಸದ ಕೊಹ್ಲಿ ದಿನದ ಆಟದ ಅಂತ್ಯದ ವೇಳೆಗೆ 86 ರನ್ ಗಳಿಸಿದ್ದು, 2018ರ ಡಿಸೆಂಬರ್ ಬಳಿಕ ವಿದೇಶಿ ನೆಲದಲ್ಲಿ ಮೊದಲ ಶತಕ ಸಾಧಿಸಲು ಕೇವಲ 14 ರನ್ ಗಳಷ್ಟು ಹಿಂದಿದ್ದಾರೆ.
ರೋಹಿತ್ ಶರ್ಮಾ, ಜೈಸ್ವಾಲ್ ಭರ್ಜರಿ ಆರಂಭದ ಬಳಿಕ ಇಬ್ಬರೂ ಪೆವಿಲಿಯನ್ ಗೆ ವಾಪಸ್ಸಾಗುತ್ತಿದ್ದಂತೆ, ಶುಭ್ ಮ ನ್ ಗಿಲ್ (10) ಹಾಗೂ ಅಜಿಂಕ್ಯಾ ರೆಹಾನೆ (8) ಕೂಡಾ ಹೆಚ್ಚಿನ ಪ್ರತಿರೋಧ ತೀರಲಿಲ್ಲ. ಚಹಾ ವಿರಾಮದ ವೇಳೆಗೆ ವೆಸ್ಟ್ಇಂಡೀಸ್ ಬೌಲರ್ಗಳು ಶಿಸ್ತಿನ ಬೌಲಿಂಗ್ ಪ್ರದರ್ಶಿಸಿ ಗಮನ ಸೆಳೆದರು. ವೆಸ್ಟ್ಇಂಡೀಸ್ ಪರವಾಗಿ ಕೆಮರ್ ರೂಚ್ (64ಕ್ಕೆ 1), ಶಾನನ್ ಗ್ಯಾಬ್ರಿಯಲ್ (50ಕ್ಕೆ 1), ಜೊಮೆಲ್ ವೆರ್ರಿಕಾನ್ (55ಕ್ಕೆ 1) ಮತ್ತು ಜೇಸನ್ ಹೋಲ್ಡರ್ (30ಕ್ಕೆ 1) ವಿಕೆಟ್ ಪಡೆದರು.