ಎಸಿಸಿ ಅಂಡರ್-19 ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್ ; ಅಫ್ಘಾನಿಸ್ತಾನ ವಿರುದ್ಧ ಅಭಿಯಾನ ಆರಂಭಿಸಲಿರುವ ಭಾರತ

Update: 2023-12-06 14:57 GMT

Photo: X

ದುಬೈ: ಎಸಿಸಿ ಪುರುಷರ ಅಂಡರ್-19 ಏಶ್ಯಕಪ್ ಕ್ರಿಕೆಟ್ ಟೂರ್ನಮೆಂಟ್‌ನಲ್ಲಿ ಶುಕ್ರವಾರ ನಡೆಯುವ ಆರಂಭಿಕ ಪಂದ್ಯದಲ್ಲಿ ಭಾರತ ತಂಡವು ಅಫ್ಘಾನಿಸ್ತಾನವನ್ನು ಎದುರಿಸಲಿದೆ.

ಮೊದಲ ದಿನದ ಮತ್ತೊಂದು ಪಂದ್ಯದಲ್ಲಿ ಪಾಕಿಸ್ತಾನ ತಂಡ ನೇಪಾಳದ ವಿರುದ್ಧ ಸೆಣಸಾಡಲಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಭಾರತ ಹಾಗೂ ಪಾಕಿಸ್ತಾನ ರವಿವಾರ ಪರಸ್ಪರ ಮುಖಾಮುಖಿಯಾಗಲಿವೆ.

50 ಓವರ್‌ಗಳ ಸ್ಪರ್ಧಾವಳಿಯಲ್ಲಿ ಪ್ರಮುಖ ಪ್ರಶಸ್ತಿಗಾಗಿ 8 ತಂಡಗಳು ಸೆಣಸಾಡಲಿವೆ. ಏಶ್ಯಕಪ್ ಟೂರ್ನಿಯನ್ನು ಎಮಿರೇಟ್ಸ್ ಕ್ರಿಕೆಟ್ ಮಂಡಳಿ ಆತಿಥ್ಯ ವಹಿಸುತ್ತಿದೆ.

ತಲಾ ನಾಲ್ಕರಂತೆ ತಂಡಗಳನ್ನು ಎರಡು ಗುಂಪುಗಳಾಗಿ ವಿಭಜಿಸಲಾಗಿದೆ. ಭಾರತ, ಅಫ್ಘಾನಿಸ್ತಾನ, ನೇಪಾಳ ಹಾಗೂ ಪಾಕಿಸ್ತಾನ ಎ ಗುಂಪಿನಲ್ಲಿ ಸ್ಥಾನ ಪಡೆದಿವೆ.

ಬಿ ಗುಂಪಿನಲ್ಲಿ ಬಾಂಗ್ಲಾದೇಶ, ಜಪಾನ್, ಶ್ರೀಲಂಕಾ ಹಾಗೂ ಆತಿಥೇಯ ಯುಎಇ ತಂಡಗಳಿವೆ.

ಪ್ರತಿ ಗುಂಪಿನ ಅಗ್ರ ಎರಡು ತಂಡಗಳು ಸೆಮಿ ಫೈನಲ್‌ಗೆ ತೇರ್ಗಡೆಯಾಗಲಿವೆ. ಡಿಸೆಂಬರ್ 15ರಂದು ಸೆಮಿ ಫೈನಲ್ ಆಡಲಾಗುತ್ತದೆ.

ಟೂರ್ನಮೆಂಟ್‌ನ ಫೈನಲ್ ಪಂದ್ಯವನ್ನು ಡಿಸೆಂಬರ್ 17ರಂದು ದುಬೈ ಇಂಟರ್‌ನ್ಯಾಶನಲ್ ಸ್ಟೇಡಿಯಮ್‌ನಲ್ಲಿ ಆಡಲಾಗುತ್ತದೆ.

ಎಲ್ಲ ಗ್ರೂಪ್ ಪಂದ್ಯಗಳು ಹಾಗೂ ಸೆಮಿ ಫೈನಲ್ ಪಂದ್ಯಗಳನ್ನು ಐಸಿಸಿ ಅಕಾಡಮಿ ಓವಲ್ಸ್ 1 ಹಾಗೂ 2ರಲ್ಲಿ ಆಡಲಾಗುವುದು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News