ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ಮುಜೀಬ್ ಉರ್ ರೆಹ್ಮಾನ್ ವಿಶ್ವಕಪ್‌ನಿಂದ ಹೊರಕ್ಕೆ
ಕಾಬೂಲ್ : ಐಪಿಎಲ್ ವೇಳೆ ಬೆರಳಿನ ಗಾಯಕ್ಕೆ ಒಳಗಾಗಿರುವ ಅಫ್ಘಾನಿಸ್ತಾನದ ಸ್ಟಾರ್ ಸ್ಪಿನ್ನರ್ ಮುಜೀಬ್ ಉರ್ ರೆಹಮಾನ್ ಟಿ20 ವಿಶ್ವಕಪ್ ಟೂರ್ನಿಯ ಇನ್ನುಳಿದ ಪಂದ್ಯಗಳಿಂದ ಹೊರಗುಳಿದಿದ್ದಾರೆ.
ರೆಹಮಾನ್ ಗಾಯದಿಂದ ಚೇತರಿಸಿಕೊಳ್ಳದ ಕಾರಣ ಸ್ಫೋಟಕ ಆರಂಭಿಕ ಬ್ಯಾಟರ್ ಹಝ್ರತುಲ್ಲಾ ಝಝೈ ಅವರನ್ನು ಅಫ್ಘಾನಿಸ್ತಾನ ತನ್ನ ತೆಕ್ಕೆಗೆ ಸೇರಿಸಿಕೊಂಡಿತ್ತು.
ಅಫ್ಘಾನಿಸ್ತಾನ ತಂಡ ಪಪುವಾ ನ್ಯೂ ಗಿನಿ ವಿರುದ್ಧ ಸೋತ ಕೆಲವೇ ಗಂಟೆಗಳ ನಂತರ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್(ಐಸಿಸಿ)ಬದಲಾವಣೆಯ ಬಗ್ಗೆ ದೃಢಪಡಿಸಿದೆ. ಐಸಿಸಿಯ ಇವೆಂಟ್ ಟೆಕ್ನಿಕಲ್ ಕಮಿಟಿಯು ತಂಡಕ್ಕೆ ಝಝೈ ಸೇರ್ಪಡೆಗೆ ಅನುಮತಿ ನೀಡಿದೆ.
ಮುಜೀಬ್ ಉರ್ ರೆಹಮಾನ್ ಬದಲಿಗೆ ಹಝ್ರತುಲ್ಲಾ ಝಝೈ ಅವರನ್ನು ಐಸಿಸಿ ಪುರುಷರ ಟಿ20 ವಿಶ್ವಕಪ್ ತಂಡಕ್ಕೆ ಸೇರಿಸಿಕೊಳ್ಳಲು ಇವೆಂಟ್ ಟೆಕ್ನಿಕಲ್ ಕಮಿಟಿ ಅನುಮತಿ ನೀಡಿದೆ ಎಂದು ಐಸಿಸಿ ಶನಿವಾರ ಹೇಳಿಕೆಯೊಂದರಲ್ಲಿ ತಿಳಿಸಿದೆ.
ಬಲ ತೋರು ಬೆರಳಿನ ಗಾಯಕ್ಕೆ ಒಳಗಾಗಿರುವ ಮುಜೀಬ್ ವಿಶ್ವಕಪ್ ಟೂರ್ನಿಯಿಂದ ಹೊರಗುಳಿದಿದ್ದು ಅವರ ಬದಲಿಗೆ 43 ಟಿ20 ಪಂದ್ಯಗಳನ್ನು ಆಡಿರುವ ಹಝ್ರತುಲ್ಲಾ ತಂಡವನ್ನು ಸೇರಿಕೊಳ್ಳಲಿದ್ದಾರೆ ಎಂದು ಐಸಿಸಿ ತಿಳಿಸಿದೆ.
ಮಜೀಬ್ ಉಗಾಂಡ ವಿರುದ್ಧ ಅಫ್ಘಾನಿಸ್ತಾನ ಆಡಿರುವ ಆರಂಭಿಕ ಪಂದ್ಯದಲ್ಲಿ ಅಡಿದ್ದರು. ಆ ನಂತರ ಅವರು ಯಾವುದೇ ಪಂದ್ಯದಲ್ಲಿ ಆಡಿಲ್ಲ.