ರಣಜಿ ಕ್ರಿಕೆಟ್ | ಇನಿಂಗ್ಸ್‌ನ ಎಲ್ಲಾ 10 ವಿಕೆಟ್ ಕಬಳಿಸಿ ಇತಿಹಾಸ ನಿರ್ಮಿಸಿದ ಅನ್ಶುಲ್ ಕಾಂಬೋಜ್
ಹೊಸದಿಲ್ಲಿ: ಪಂದ್ಯದ ಇನಿಂಗ್ಸ್ ಒಂದರ ಎಲ್ಲ ಹತ್ತು ವಿಕೆಟ್ ಗಳನ್ನು ಕಬಳಿಸುವ ಮೂಲಕ ಇತಿಹಾಸ ನಿರ್ಮಿಸಿರುವ ಹರ್ಯಾಣ ಬೌಲರ್ ಅನ್ಶುಲ್ ಕಾಂಬೋಜ್, ರಣಜಿಯಲ್ಲಿ ಈ ಸಾಧನೆ ಮಾಡಿದ ಮೂರನೇ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅನ್ಶುಲ್ ಅವರ ಈ ಅದ್ಭುತ ಪ್ರದರ್ಶನವು ಲಾಹ್ಲಿಯ ಚೌಧರಿ ಬನ್ಸಿ ಲಾಲ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಹರ್ಯಾಣ ಮತ್ತು ಕೇರಳ ನಡುವಿನ ರಣಜಿ ಪಂದ್ಯದಲ್ಲಿ ಬಂದಿದೆ.
ಕೇರಳದ ಬ್ಯಾಟಿಂಗ್ ಕ್ರಮಾಂಕವನ್ನು ಧೂಳೀಪಟ ಮಾಡಿದ ಹರ್ಯಾಣದ ವೇಗದ ಬೌಲರ್, ಕೇವಲ 49 ರನ್ ಗಳನ್ನು ನೀಡಿ ಎಲ್ಲ 10 ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು. ಆ ಮೂಲಕ ಮೊದಲ ಇನಿಂಗ್ಸ್ ನಲ್ಲಿ ಕೇರಳ ತಂಡದ ಮೊತ್ತವನ್ನು ಕೇವಲ 291 ರನ್ ಗಳಿಗೆ ನಿಯಂತ್ರಿಸಿದರು.
ಇತ್ತೀಚೆಗೆ ಮುಕ್ತಾಯಗೊಂಡಿದ್ದ ಕ್ರಿಕೆಟ್ ಋತುವಿನಲ್ಲಿ ಮೂರು ಪಂದ್ಯಗಳಿಂದ ಕೇವಲ ನಾಲ್ಕು ವಿಕೆಟ್ ಗಳಿಸಲಷ್ಟೆ ಶಕ್ತವಾಗಿದ್ದ ಅನ್ಶುಲ್, ಕೇರಳ ವಿರುದ್ಧದ ಪಂದ್ಯದಲ್ಲಿ ಅದ್ವಿತೀಯ ಪ್ರದರ್ಶನ ತೋರುವ ಮೂಲಕ, ಭಾರತೀಯ ದೇಶೀಯ ಕ್ರಿಕೆಟ್ ನಲ್ಲಿ ಈ ಸಾಧನೆ ಮಾಡಿದ ಮೂರನೆಯ ಬೌಲರ್ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ಪಶ್ಚಿಮ ಬಂಗಾಳದ ಪ್ರೇಮಾಂಗ್ಶು ಚಟರ್ಜಿ ಮತ್ತು ರಾಜಸ್ಥಾನದ ಪ್ರದೀಪ್ ಸುಂದರಂ ಈ ಹಿಂದೆ ಇನಿಂಗ್ಸ್ ಒಂದರ ಎಲ್ಲ ಹತ್ತು ವಿಕೆಟ್ ಗಳನ್ನು ಪಡೆದು ದಾಖಲೆ ಬರೆದಿದ್ದರು.