ಬಾಕ್ಸಿಂಗ್: ಸೆಮಿ ಫೈನಲ್‌ನಲ್ಲಿ ಸೋಲು, ಕಂಚಿಗೆ ತೃಪ್ತಿಪಟ್ಟ ನಿಖಾತ್ ಝರೀನಾ
ಹಾಂಗ್‌ಝೌ, ಅ.1: ಭಾರತದ ಸ್ಟಾರ್ ಬಾಕ್ಸರ್ ನಿಖಾತ್ ಝರೀನಾ ಏಶ್ಯನ್ ಗೇಮ್ಸ್‌ನಲ್ಲಿ ರವಿವಾರ ನಡೆದ ಸೆಮಿ ಫೈನಲ್‌ನಲ್ಲಿ ಸೋಲುಂಡಿದ್ದಾರೆ. ಕಂಚಿನ ಪದಕಕ್ಕೆ ತೃಪ್ತಿಪಟ್ಟಿದ್ದಾರೆ.
ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದ ಝರೀನಾ ಮಹಿಳೆಯರ 50 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್ ಸ್ಪರ್ಧೆಯಲ್ಲಿ ಥಾಯ್ಲೆಂಡ್‌ನ ಬಾಕ್ಸರ್ ರಕಾಸ್ತ್ ಚುತಮಾತ್ ವಿರುದ್ಧ 1-2 ಅಂತರದಿಂದ ಸೋತಿದ್ದಾರೆ.
ಝರೀನಾ ಮೊದಲ ಸುತ್ತಿನಲ್ಲಿ ಜಯಶಾಲಿಯಾಗಿದ್ದರು. ಆದರೆ ಮುಂದಿನ ಎರಡು ಸುತ್ತಿನಲ್ಲಿ ಥಾಯ್ಲೆಂಡ್ ಆಟಗಾರ್ತಿ ಮೇಲುಗೈ ಸಾಧಿಸಿದರು.
ಪ್ರವೀಣ್ ಹೂಡಾಗೆ ಪದಕ ಖಚಿತ:
ಇದಕ್ಕೂ ಮೊದಲು ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ವಿಜೇತೆ ಪ್ರವೀಣ್ ಹೂಡಾ ಅವರು ವನಿತೆಯರ 57 ಕೆಜಿ ವಿಭಾಗದಲ್ಲಿ ಸೆಮಿ ಫೈನಲ್‌ಗೆ ಪ್ರವೇಶಿಸುವ ಮೂಲಕ ಏಶ್ಯನ್ ಗೇಮ್ಸ್‌ನಲ್ಲಿ ಪದಕವನ್ನು ಖಚಿತಪಡಿಸಿದ್ದಲ್ಲದೆ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.
2022ರ ವಿಶ್ವ ಬಾಕ್ಸಿಂಗ್ ಚಾಂಪಿಯನ್‌ಶಿಪ್‌ನಲ್ಲಿ 63 ಕೆಜಿ ವಿಭಾಗದಲ್ಲಿ ಕಂಚು ಜಯಿಸಿದ್ದ ಪ್ರವೀಣ್ ರವಿವಾರ ನಡೆದ ಕ್ವಾರ್ಟರ್ ಫೈನಲ್‌ನಲ್ಲಿ ಉಝ್ಬೇಕಿಸ್ತಾನದ ಸಿಟೋರಾ ತುರ್ಡಿಬೆಕೋವಾರನ್ನು ಒಮ್ಮತದ ತೀರ್ಪಿನಲ್ಲಿ ಸೋಲಿಸಿದರು. ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಕಂಚಿನ ಪದಕ ವಿಜೇತೆ ಜೈಸ್ಮೈನ್ ಲ್ಯಾಂಬೋರಿಯಾ 2ನೇ ಸುತ್ತಿನಲ್ಲಿ ಉತ್ತರ ಕೊರಿಯಾದ ಬಾಕ್ಸರ್ ವನ್ ಯುಂಗ್‌ಯಂಗ್ ವಿರುದ್ಧ ಶರಣಾಗಿ 60 ಕೆಜಿ ವಿಭಾಗದ ಸ್ಪರ್ಧೆಯಿಂದ ಹೊರ ನಡೆದರು.
ನಿಖಾತ್ ಝರೀನಾ(50ಕೆಜಿ), ಪ್ರೀತಿ ಪವಾರ್(54 ಕೆಜಿ), ಲವ್ಲೀನಾ ಬೋರ್ಗೊಹೈನ್(75 ಕೆಜಿ) ಹಾಗೂ ನರೇಂದರ್ ಬೆರ್ವಾಲ್(+92ಕೆಜಿ)ಈಗಾಗಲೇ ತಮ್ಮ ಕೆಜಿ ವಿಭಾಗಗಳಲ್ಲಿ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದ್ದಾರೆ.