ಬಾಲಂಗೋಚಿ ಬ್ಯಾಟರ್ ಗಳ ಪ್ರತಿರೋಧ: ಆಸ್ಟ್ರೇಲಿಯ 9 ವಿಕೆಟ್ ನಷ್ಟಕ್ಕೆ 228
ಮೆಲ್ಬರ್ನ್: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಪಂದ್ಯದ ಎರಡನೆ ಇನಿಂಗ್ಸ್ ನಲ್ಲಿ ಬಾಲಂಗೋಚಿ ಬ್ಯಾಟರ್ ಗಳಾದ ನಥಾನ್ ಲಯಾನ್ (ಅಜೇಯ 41) ಹಾಗೂ ಸ್ಕಾಟ್ ಬೋಲಂಡ್ (ಅಜೇಯ 10) ತೋರಿದ ಪ್ರತಿರೋಧದಿಂದ ನಾಲ್ಕನೆ ದಿನದಾಟದಂತ್ಯಕ್ಕೆ ಆಸ್ಟ್ರೇಲಿಯ ತಂಡ 9 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದ್ದು, ಒಟ್ಟಾರೆ 333 ರನ್ ಗಳ ಮುನ್ನಡೆ ಸಾಧಿಸಿದೆ.
105 ರನ್ ಗಳ ಮೊದಲ ಇನಿಂಗ್ಸ್ ಮುನ್ನಡೆಯೊಂದಿಗೆ ಎರಡನೆ ಇನಿಂಗ್ಸ್ ಪ್ರಾರಂಭಿಸಿದ ಆಸ್ಟ್ರೇಲಿಯ ತಂಡ, ಭಾರತದ ವೇಗಿಗಳಾದ ಜಸ್ಪ್ರೀತ್ ಬುಮ್ರಾ ಹಾಗೂ ಮುಹಮ್ಮದ್ ಸಿರಾಜ್ ರ ಸಂಘಟಿತ ದಾಳಿ ಎದುರು ಮುಗ್ಗರಿಸಿತು. ಕೇವಲ 91 ರನ್ ಗಳಾಗುವಷ್ಟರ ಹೊತ್ತಿಗೆ ಪ್ರಮುಖ 6 ವಿಕೆಟ್ ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಆಸ್ಟ್ರೇಲಿಯ ತಂಡಕ್ಕೆ ಮಾರ್ನಸ್ ಲಾಬುಶೇನ್ (70) ಹಾಗೂ ನಾಯಕ ಪ್ಯಾಟ್ ಕಮಿನ್ಸ್ (41) ನಡುವಿನ 57 ರನ್ ಗಳ ಮಹತ್ವದ ಜೊತೆಯಾಟ ಕೊಂಚ ಚೇತರಿಕೆ ನೀಡಿತು.
ಈ ಹಂತದಲ್ಲಿ ದಾಳಿಗೆ ಇಳಿದ ಮುಹಮ್ಮದ್ ಸಿರಾಜ್ ಮಾರ್ನಸ್ ಲಾಬುಶೇನ್ ರನ್ನು ಎಲ್ಬಿಡಬ್ಲ್ಯೂ ಬಲೆಗೆ ಕೆಡವುವ ಮೂಲಕ ಮತ್ತೆ ಭಾರತ ತಂಡಕ್ಕೆ ಮೇಲುಗೈ ತಂದಿತ್ತರು. ಇದರ ಬೆನ್ನಿಗೇ, ತಂಡದ ಮೊತ್ತ 156 ರನ್ ಆಗಿದ್ದಾಗ ಮಿಚೆಲ್ ಸ್ಟಾರ್ಕ್ ರನ್ ಔಟಾದರು. ನಂತರ, ರವೀಂದ್ರ ಜಡೇಜಾರ ಬೌಲಿಂಗ್ ನಲ್ಲಿ ನಾಯಕ ಪ್ಯಾಟ್ ಕಮಿನ್ಸ್ ಸ್ಲಿಪ್ ನಲ್ಲಿದ್ದ ರೋಹಿತ್ ಶರ್ಮಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ತಂಡದ ಮೊತ್ತ 173 ರನ್ ಆಗಿತ್ತು. ಈ ಹಂತದಲ್ಲಿ ಜೊತೆಯಾದ ನಥಾನ್ ಲಯಾನ್ ಹಾಗೂ ಸ್ಕಾಟ್ ಬೋಲಂಡ್ ಮುರಿಯದ 10ನೇ ವಿಕೆಟ್ ಜೊತೆಯಾಟದಲ್ಲಿ ಅಮೂಲ್ಯ 55 ರನ್ ಕಲೆ ಹಾಕಿದರು.
ಭಾರತ ತಂಡದ ಪರ ಜಸ್ಪ್ರೀತ್ ಬುಮ್ರಾ 4 ವಿಕೆಟ್, ಮುಹಮ್ಮದ್ ಸಿರಾಜ್ 3 ವಿಕೆಟ್ ಹಾಗೂ ರವೀಂದ್ರ ಜಡೇಜಾ ಒಂದು ವಿಕೆಟ್ ಪಡೆದರು.