ಬಾರ್ಡರ್-ಗಾವಸ್ಕರ್ ಟ್ರೋಫಿ | ಕುತೂಹಲಕಾರಿ ಘಟ್ಟದಲ್ಲಿ ಬಾಕ್ಸಿಂಗ್ ಡೇ ಟೆಸ್ಟ್
ಮೆಲ್ಬರ್ನ್: ಇಲ್ಲಿನ ಎಂಸಿಜಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಭಾರತ ಮತ್ತು ಆಸ್ಟ್ರೇಲಿಯ ತಂಡಗಳ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಕುತೂಹಲಕರ ಘಟ್ಟ ತಲುಪಿದೆ. ಇತ್ತೀಚಿನ ವರದಿಗಳ ಪ್ರಕಾರ, ಭಾರತ ತಂಡ ತನ್ನ ಎರಡನೆ ಇನಿಂಗ್ಸ್ ನಲ್ಲಿ 6 ವಿಕೆಟ್ ಕಳೆದುಕೊಂಡು 132 ರನ್ ಗಳಸಿದೆ
ನಿನ್ನೆ ದಿನದಾಟದಂತ್ಯಕ್ಕೆ 9 ವಿಕೆಟ್ ನಷ್ಟಕ್ಕೆ 228 ರನ್ ಗಳಿಸಿದ್ದ ಆಸ್ಟ್ರೇಲಿಯ ತಂಡ, ಇಂದು ಕೇವಲ 6 ರನ್ ಸೇರಿಸಿ ಆಲೌಟಾಯಿತು. ಜಸ್ಟ್ರೀತ್ ಬುಮ್ರಾ ಬೌಲಿಂಗ್ ನಲ್ಲಿ ನಥಾನ್ ಲಯಾನ್ (41) ಕ್ಲೀನ್ ಬೌಲ್ಡ್ ಆದರು. ಮತ್ತೊಬ್ಬ ಬ್ಯಾಟರ್ ಸ್ಕಾಟ್ ಬೋಲಂಡ್ 15 ರನ್ ಗಳಿಸಿ ಅಜೇಯರಾಗಿ ಉಳಿದರು. ಈ ವಿಕೆಟ್ ನೊಂದಿಗೆ ಜಸ್ಪ್ರೀತ್ ಬುಮ್ರಾ ಎರಡನೇ ಇನಿಂಗ್ಸ್ ನಲ್ಲಿ ಐದು ವಿಕೆಟ್ ಗೊಂಚಲು ಪಡೆದರೆ, ಒಟ್ಟಾರೆ ಪಂದ್ಯದಲ್ಲಿ 9 ವಿಕೆಟ್ ಗಳನ್ನು ತಮ್ಮ ಬುಟ್ಟಿಗೆ ಹಾಕಿಕೊಂಡರು.
ನಂತರ, ಬ್ಯಾಟಿಂಗ್ ಪ್ರಾರಂಭಿಸಿದ ಭಾರತ ತಂಡಕ್ಕೆ ಆಸ್ಟ್ರೇಲಿಯ ತಂಡದ ನಾಯಕ ಪ್ಯಾಟ್ ಕಮಿನ್ಸ್ ಒಂದೇ ಓವರ್ ನಲ್ಲಿ ಎರಡು ವಿಕೆಟ್ ಕಿತ್ತು ಆಘಾತ ನೀಡಿದರು. ತಂಡದ ಮೊತ್ತ 25 ರನ್ ಆಗಿದ್ದಾಗ ಭಾರತ ತಂಡದ ನಾಯಕ ರೋಹಿತ್ ಶರ್ಮ (9) ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಮಿಚೆಲ್ ಮಾರ್ಷ್ ಗೆ ಕ್ಯಾಚಿತ್ತು ನಿರ್ಗಮಿಸಿದರು. ಇದರ ಬೆನ್ನಿಗೇ, ರೋಹಿತ್ ಶರ್ಮ ನಿರ್ಗಮನದ ನಂತರ ಬಂದ ಕೆ.ಎಲ್.ರಾಹುಲ್ ಕೂಡಾ ಯಾವುದೇ ರನ್ ಗಳಿಸದೆ ಪ್ಯಾಟ್ ಕಮಿನ್ಸ್ ಬೌಲಿಂಗ್ ನಲ್ಲಿ ಉಸ್ಮಾನ್ ಖ್ವಾಜಾಗೆ ಕ್ಯಾಚಿತ್ತು ಪೆವಿಲಿಯನ್ ಗೆ ಹೆಜ್ಜೆ ಹಾಕಿದರು.
ನಾಲ್ಕನೆಯವರಾಗಿ ಬ್ಯಾಟಿಂಗ್ ಗೆ ಬಂದ ವಿರಾಟ್ ಕೊಹ್ಲಿ ಎರಡನೆ ಇನಿಂಗ್ಸ್ ನಲ್ಲೂ ವಿಫಲಗೊಂಡರು. ಐದು ರನ್ ಗಳಿಸಿದ್ದಾಗ ಮಿಚೆಲ್ ಸ್ಟಾರ್ಕ್ ಬೌಲಿಂಗ್ ನಲ್ಲಿ ಉಸ್ಮಾನ್ ಖ್ವಾಜಾಗೆ ಕ್ಯಾಚಿತ್ತು ನಿರ್ಗಮಿಸಿದರು. ಆಗ ತಂಡದ ಮೊತ್ತ ಕೇವಲ 33 ರನ್ ಆಗಿತ್ತು. ಈ ಹಂತದಲ್ಲಿ ಯಶಸ್ವಿ ಜೈಸ್ವಾಲ್ ರೊಂದಿಗೆ ಜೊತೆಗೂಡಿದ ರಿಷಭ್ ಪಂತ್, ತಾಳ್ಮೆಯ ಬ್ಯಾಟಿಂಗ್ ಪ್ರದರ್ಶಿಸಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ ಅಮೂಲ್ಯ 88 ರನ್ ಸೇರಿಸಿ ಭಾರತದ ಆತಂಕವನ್ನು ದೂರ ಮಾಡಿದರು. ಆದರೆ, ಟ್ರಾವಿಸ್ ಹೆಡ್ ಬೌಲಿಂಗ್ ನಲ್ಲಿ ಮತ್ತೆ ಅನಗತ್ಯ ಹೊಡೆತಕ್ಕೆ ಕೈಹಾಕಿದ ರಿಷಭ್ ಪಂತ್, ಮಿಚೆಲ್ ಮಾರ್ಷ್ ಗೆ ಕ್ಯಾಚಿತ್ತು ಔಟಾದರು. ನಂತರ ಬಂದ ರವೀಂದ್ರ ಜಡೇಜಾ ಕೂಡಾ ಹೆಚ್ಚು ಹೊತ್ತು ನಿಲ್ಲದೆ, ಸ್ಕಾಟ್ ಬೋಲಂಡ್ ಬೌಲಿಂಗ್ ನಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿಗೆ ಕ್ಯಾಚಿತ್ತು ನಿರ್ಗಮಿಸಿದರು.
ಮೊದಲ ಇನಿಂಗ್ಸ್‌ನ ಹೀರೋ ನಿತೀಶ್ ಕುಮಾರ್ ರೆಡ್ಡಿ ಕೇವಲ 1 ರನ್ ಗಳಿಸಿ ಸ್ಟೀವ್ ಸ್ಮಿತ್ ಗೆ ಕ್ಯಾಚಿತ್ತು ನಾತನ್ ಲಿಯೊನ್ ಗೆ ವಿಕೆಟ್ ಒಪ್ಪಿಸಿದರು.
ಒಂದು ಕಡೆ ವಿಕೆಟ್ ಗಳು ಪತನವಾಗುತ್ತಿದ್ದರೂ ತಾಳ್ಮೆಯ 76 ರನ್ ಗಳಿಸಿರುವ ಯಶಸ್ವಿ ಜೈಸ್ವಾಲ್ ಹಾಗೂ 2 ರನ್ ಗಳಿಸಿರುವ ವಾಶಿಂಗ್ಟನ್ ಸುಂದರ್ ಸದ್ಯ ಕ್ರೀಸಿನಲ್ಲಿದ್ದಾರೆ.