ಆಸ್ಟ್ರೇಲಿಯ ವಿರುದ್ಧ ಟ್ವೆಂಟಿ-20 ಸರಣಿ: ಭಾರತ ಕ್ರಿಕೆಟ್ ತಂಡ ಪ್ರಕಟ
ಹೊಸದಿಲ್ಲಿ : ಆಸ್ಟ್ರೇಲಿಯ ವಿರುದ್ಧ ಐದು ಪಂದ್ಯಗಳ ಟ್ವೆಂಟಿ-20 ಸರಣಿಗಾಗಿ ಪ್ರಕಟಿಸಲಾಗಿರುವ ಸೂರ್ಯಕುಮಾರ್ ಯಾದವ್ ನೇತೃತ್ವದ ಭಾರತೀಯ ಕ್ರಿಕೆಟ್ ತಂಡದಲ್ಲಿ ವಿಶ್ವಕಪ್ ಫೈನಲ್ನಲ್ಲಿ ಸೋತ ತಂಡದಲ್ಲಿದ್ದ ಕೇವಲ ಮೂವರು ಆಟಗಾರರು ಸ್ಥಾನ ಪಡೆದಿದ್ದಾರೆ.
ಟೂರ್ನಮೆಂಟ್ನಲ್ಲಿ ಅಜೇಯವಾಗುಳಿದಿದ್ದ ಭಾರತವು ಈ ಬಾರಿ ಏಕದಿನ ವಿಶ್ವಕಪ್ ಗೆಲ್ಲುವ ಫೇವರಿಟ್ ತಂಡವಾಗಿ ಗುರುತಿಸಿತ್ತು. ರವಿವಾರ ಸುಮಾರು 1 ಲಕ್ಷಕ್ಕೂ ಅಧಿಕ ಪ್ರೇಕ್ಷಕರ ಎದುರು ಫೈನಲ್ ಪಂದ್ಯವನ್ನು ಆಡಿತ್ತು. ಆದರೆ, ಪ್ಯಾಟ್ ಕಮಿನ್ಸ್ ನೇತೃತ್ವದ ಆಸ್ಟ್ರೇಲಿಯ ತಂಡವು ರೋಹಿತ್ ಶರ್ಮಾ ನೇತೃತ್ವದ ತಂಡವನ್ನು 6 ವಿಕೆಟ್ ಅಂತರದಿಂದ ಸೋಲಿಸಿ ದೇಶದ ಕೋಟ್ಯಂತರ ಜನರ ಹೃದಯವನ್ನು ನುಚ್ಚುನೂರು ಮಾಡಿತು.
ಸೂರ್ಯಕುಮಾರ್ ಇದೇ ಮೊದಲ ಬಾರಿ ಟಿ-20 ಕ್ರಿಕೆಟ್ನಲ್ಲಿ ಭಾರತ ತಂಡವನ್ನು ನಾಯಕನಾಗಿ ಮುನ್ನಡೆಸುತ್ತಿದ್ದಾರೆ. ಐದು ಪಂದ್ಯಗಳ ಸರಣಿಗೆ ಐಪಿಎಲ್ನಲ್ಲಿ ಮಿಂಚಿರುವ ರಿಂಕು ಸಿಂಗ್, ಜಿತೇಶ್ ಶರ್ಮಾ, ಶಿವಂ ದುಬೆಗೆ ಬಿಸಿಸಿಐ ಮಣೆ ಹಾಕಿದೆ. ಯಜುವೇಂದ್ರ ಚಹಾಲ್, ಭುವನೇಶ್ವರ ಕುಮಾರ್ ಹಾಗೂ ಸಂಜು ಸ್ಯಾಮ್ಸನ್ರಂತಹ ಆಟಗಾರರನ್ನು ನಿರ್ಲಕ್ಷಿಸಲಾಗಿದೆ.
ವಿಶ್ವಕಪ್ಗಿಂತ ಮೊದಲು ಸೆಪ್ಟಂಬರ್ನಲ್ಲಿ ಭಾರತವು ಆಸ್ಟ್ರೇಲಿಯ ವಿರುದ್ಧ 3 ಪಂದ್ಯಗಳ ಸರಣಿಯ ಆತಿಥ್ಯ ವಹಿಸಿತ್ತು. ಆತಿಥೇಯ ತಂಡ ಭಾರತವು 2-1 ಅಂತರದಿಂದ ಸರಣಿ ಜಯಿಸಿತ್ತು.
ಟ್ವೆಂಟಿ-20 ಸರಣಿಯು ಗುರುವಾರ ಆಂಧ್ರಪ್ರದೇಶದ ವಿಶಾಖಪಟ್ಟಣದಲ್ಲಿ ಆರಂಭವಾಗಲಿದೆ. ಕ್ರಮವಾಗಿ ನವೆಂಬರ್ 26 ಹಾಗೂ 28ರಂದು ತಿರುವನಂತಪುರ ಹಾಗೂ ಗುವಾಹಟಿಯಲ್ಲಿ ಇನ್ನೆೆರಡು ಪಂದ್ಯಗಳು ನಡೆಯಲಿವೆ.
ಶ್ರೇಯಸ್ ಅಯ್ಯರ್ ಅವರು ಕೊನೆಯ ಎರಡು ಟ್ವೆಂಟಿ-20 ಪಂದ್ಯಗಳಲ್ಲಿ ಉಪನಾಯಕನಾಗಿ ತಂಡವನ್ನು ಸೇರಿಕೊಳ್ಳಲಿದ್ದಾರೆ. ಈ ಎರಡು ಪಂದ್ಯಗಳು ಡಿಸೆಂಬರ್ 1 ಹಾಗೂ 5ರಂದು ರಾಯ್ಪುರ ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ಬಿಸಿಸಿಐ ತಿಳಿಸಿದೆ.
ಭಾರತದ ಟ್ವೆಂಟಿ-20 ತಂಡ: ಸೂರ್ಯಕುಮಾರ್ ಯಾದವ್(ನಾಯಕ),ಋತುರಾಜ್ ಗಾಯಕ್ವಾಡ್(ಉಪ ನಾಯಕ), ಇಶಾನ್ ಕಿಶನ್, ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ರಿಂಕು ಸಿಂಗ್, ಜಿತೇಶ್ ಶರ್ಮಾ(ವಿಕೆಟ್ಕೀಪರ್), ವಾಶಿಂಗ್ಟನ್ ಸುಂದರ್, ಅಕ್ಷರ್ ಪಟೇಲ್, ಶಿವಂ ದುಬೆ, ರವಿ ಬಿಷ್ಣೋಯ್, ಅರ್ಷದೀಪ್ ಸಿಂಗ್, ಪ್ರಸಿದ್ಧ ಕೃಷ್ಣ, ಅವೇಶ್ ಖಾನ್ ಹಾಗೂ ಮುಕೇಶ್ ಕುಮಾರ್.