ವಿಶ್ವಕಪ್: ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯಕ್ಕೆ ರೋಚಕ ಜಯ
ಧರ್ಮಶಾಲ: ಇಲ್ಲಿನ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ನ್ಯೂಝಿಲ್ಯಾಂಡ್ ವಿರುದ್ಧ ಆಸ್ಟ್ರೇಲಿಯ 5 ರನ್ ಗಳಿಂದ ರೋಚಕ ಗೆಲುವು ಸಾಧಿಸಿದೆ.
ಆಸ್ಟ್ರೇಲಿಯ ನೀಡಿದ 389 ರನ್ ಕಠಿಣ ಗುರಿ ಬೆನ್ನಟ್ಟಿದ ನ್ಯೂಝಿಲ್ಯಾಂಡ್ ಗೆ ಆರಂಭಿಕರು ಭದ್ರ ಬುನಾದಿ ಹಾಕುವಲ್ಲಿ ವಿಫಲರಾದರು. ಪರಿಣಾಮ ಡೆವೋನ್ ಕಾನ್ವೆ 28 ರನ್ ಗಳಿಸಿದರೆ ವಿಲ್ ಯಂಗ್ 32 ರನ್ ಬಾರಿಸಿ ಕ್ರಮವಾಗಿ ಜೋಸ್ ಹೇಝಲ್ ವುಡ್ ಗೆ ವಿಕೆಟ್ ಒಪ್ಪಿಸಿದರು. ಆರಂಭಿಕ ಎರಡು ವಿಕೆಟ್ ಬೇಗ ಕಳೆದುಕೊಂಡ ಹೊರತಾಗಿಯೂ ರಚಿನ್ ರವೀಂದ್ರ ಹಾಗೂ ಡ್ಯಾರಿಲ್ ಮಿಚೆಲ್ ಜೋಡಿಯ ಜೊತೆಯಾಟ ತಂಡ ಚೇತರಿಸಿಕೊಳ್ಳುವಂತೆ ಮಾಡಿತು. ಡ್ಯಾರಿಲ್ ಮಿಚೆಲ್ 6 ಬೌಂಡರಿ 1 ಸಿಕ್ಸರ್ 54 ರನ್ ಬಾರಿಸಿ ಝಾಂಪ ಬೌಲಿಂಗ್ ನಲ್ಲಿ ಮಿಚೆಲ್ ಸ್ಟಾರ್ಕ್ ಗೆ ಕ್ಯಾಚಿತ್ತು ಔಟ್ ಆದರು. ತಂಡದ ಪರ ಆಕರ್ಷಕ ಶತಕ ಸಿಡಿಸಿದ ರಚಿನ್ ರವೀಂದ್ರ 89 ಎಸೆತಗಳಲ್ಲಿ 9 ಬೌಂಡರಿ 5 ಸಿಕ್ಸರ್ ಸಹಿತ 116 ರನ್ ಬಾರಿಸಿ ತಂಡವನ್ನು ಗೆಲುವಿನ ಹತ್ತಿರಕ್ಕೆ ಕೊಂಡೊಯ್ಯುವ ಪ್ರಯತ್ನದಲ್ಲಿದ್ದರು ಆದರೆ ಪ್ಯಾಟ್ ಕಮ್ಮಿನ್ಸ್ ಬೌಲಿಂಗ್ ನಲ್ಲಿ ದೊಡ್ಡ ಮೊತ್ತ ಬಾರಿಸಿಸುವ ಯತ್ನ ದಲ್ಲಿ ಔಟ್ ಆದರು. ಆದರೆ ಬಳಿಕ ಬ್ಯಾಟಿಂಗ್ ಬಂದ ಜಿಮ್ಮಿ ನೀಶಮ್ ಸ್ಟೋಟಕ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನ ದಡ ಸೇರಿಸುವಲ್ಲಿದ್ದರು . ಕೊನೆ ಓವರ್ ನ ಕಡೇ ಎರಡು ಬಾಲ್ ಗಳಲ್ಲಿ 7 ರನ್ ಬೇಕಿದ್ದ ಸಂದರ್ಭ ಸಿಕ್ಸ್ ಬಾರಿಸುವ ಯತ್ನದಲ್ಲಿ ನೀಶಮ್ ವಿಕೆಟ್ ಕಳೆದುಕೊಂಡರು. ಇದರಿಂದ ನ್ಯೂಝಿಲ್ಯಾಂಡ್ ಗೆ ಗೆಲುವಿನ ಆಸೆ ಕೂಡ ಕಮರಿ ಹೋಗಿ ಆಸ್ಟ್ರೇಲಿಯ ಪಂದ್ಯದಲ್ಲಿ ರೋಚಕ ಗೆಲುವು ಸಾಧಿಸಿತು. ಲ್ಯಾಥಮ್ 21 , ಗ್ಲೇನ್ ಫಿಲಿಪ್ಸ್ 12 ,ಮ್ಯಾಟ್ ಹೆನ್ರಿ 9 ಹಾಗೂ ಟ್ರೆಂಟ್ ಬೌಲ್ಟ್ 12 ರನ್ ಗಳಿಸಿದರು.
ಆಸ್ಟ್ರೇಲಿಯ ಪರ ಆಡಂ ಝಾಂಪ 3 ವಿಕೆಟ್ ಪಡೆದರೆ ಜೋಸ್ ಹೇಝಲ್ ವುಡ್ ಹಾಗೂ ಪ್ಯಾಟ್ ಕಮ್ಮಿನ್ಸ್ 2 , ಗ್ಲೇನ್ ಮಾಕ್ಸ್ ವೆಲ್ ಒಂದು ವಿಕೆಟ್ ಕಬಳಿಸಿದರು.