ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ | ರಬಾಡಗೆ ಆರು ವಿಕೆಟ್ ಗೊಂಚಲು, ದಕ್ಷಿಣ ಆಫ್ರಿಕಾ ತಂಡಕ್ಕೆ ಗೆಲುವು

Update: 2024-10-24 15:41 GMT

ಕಾಗಿಸೊ ರಬಾಡ |  PC : X  \ @ABsay_ek

ಢಾಕಾ: ವೇಗದ ಬೌಲರ್ ಕಾಗಿಸೊ ರಬಾಡ ಅವರ ಅಮೋಘ ಬೌಲಿಂಗ್(6-39)ದಾಳಿಯ ನೆರವಿನಿಂದ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡವು 7 ವಿಕೆಟ್‌ಗಳ ಅಂತರದಿಂದ ಗೆಲುವು ದಾಖಲಿಸಿದೆ. ಈ ಮೂಲಕ 2 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

ರಬಾಡ ಅವರು ಬಾಂಗ್ಲಾದೇಶ ತಂಡವನ್ನು ಎರಡನೇ ಇನಿಂಗ್ಸ್‌ನಲ್ಲಿ 307 ರನ್‌ಗೆ ನಿಯಂತ್ರಿಸಲು ನೆರವಾದರು. ಈ ಹಿನ್ನೆಲೆಯಲ್ಲಿ ದಕ್ಷಿಣ ಆಫ್ರಿಕಾ ತಂಡವು ಗೆಲುವಿಗೆ 106 ರನ್ ಗುರಿ ಪಡೆಯಿತು.

4ನೇ ದಿನದಾಟವಾದ ಗುರುವಾರ ಭೋಜನ ವಿರಾಮಕ್ಕೆ ಮೊದಲು 22 ಓವರ್‌ಗಳಲ್ಲಿ 3 ವಿಕೆಟ್‌ಗಳ ನಷ್ಟಕ್ಕೆ 103 ರನ್ ಗಳಿಸಿ ಗೆಲುವಿನ ನಗೆ ಬೀರಿತು. ಮೊದಲ ಇನಿಂಗ್ಸ್‌ನಲ್ಲಿ ಐದು ವಿಕೆಟ್ ಗೊಂಚಲು ಪಡೆದಿದ್ದ ಎಡಗೈ ಸ್ಪಿನ್ನರ್ ತೈಜುಲ್ ಇಸ್ಲಾಮ್ ಎರಡನೇ ಇನಿಂಗ್ಸ್‌ನಲ್ಲಿ ದಕ್ಷಿಣ ಆಫ್ರಿಕಾದ 3 ವಿಕೆಟ್‌ಗಳನ್ನು ಉರುಳಿಸಿದರು.

ಬಾಂಗ್ಲಾದೇಶ ತಂಡ ತನ್ನ ಮೊದಲ ಇನಿಂಗ್ಸ್‌ನಲ್ಲಿ 106 ರನ್‌ಗೆ ಆಲೌಟಾಯಿತು. ಇದಕ್ಕೆ ಉತ್ತರವಾಗಿ ದಕ್ಷಿಣ ಆಫ್ರಿಕಾ ತಂಡವು 308 ರನ್‌ಗೆ ಆಲೌಟಾಗಿ, 202 ರನ್ ಮುನ್ನಡೆ ಪಡೆಯಿತು.

7 ವಿಕೆಟ್‌ಗಳ ನಷ್ಟಕ್ಕೆ 283 ರನ್‌ನಿಂದ 81 ರನ್‌ಗಳ ಮುನ್ನಡೆಯೊಂದಿಗೆ ಗುರುವಾರ ದಿನದಾಟ ಆರಂಭಿಸಿದ ಬಾಂಗ್ಲಾದೇಶ ತಂಡಕ್ಕೆ ರಬಾಡ ಹಾಗೂ ವಿಯಾನ್ ಮುಲ್ದರ್ 2ನೇ ಹೊಸ ಚೆಂಡಿನ ಮೂಲಕ ಕಾಡಿದರು.

ದಿನದಾಟದ ಮೊದಲ ಓವರ್‌ನಲ್ಲಿ ನಯೀಮ್ ಹಸನ್‌ರನ್ನು ಎಲ್ಬಿಡಬ್ಲ್ಯು ಬಲೆಗೆ ಬೀಳಿಸಿದ ರಬಾಡ ಟೆಸ್ಟ್ ಕ್ರಿಕೆಟ್‌ನಲ್ಲಿ ತನ್ನ 15ನೇ ಐದು ವಿಕೆಟ್ ಗೊಂಚಲು ಪೂರೈಸಿದರು.

ಎರಡನೇ ಹಾಗೂ ಅಂತಿಮ ಟೆಸ್ಟ್ ಪಂದ್ಯವು ಮುಂದಿನ ಮಂಗಳವಾರ ಚಟ್ಟೊಗ್ರಾಮ್‌ನಲ್ಲಿ ನಡೆಯಲಿದೆ.

►ಸಂಕ್ಷಿಪ್ತ ಸ್ಕೋರ್

ಬಾಂಗ್ಲಾದೇಶ ಮೊದಲ ಇನಿಂಗ್ಸ್: 106 ರನ್

ದಕ್ಷಿಣ ಆಫ್ರಿಕಾ ಮೊದಲ ಇನಿಂಗ್ಸ್: 308 ರನ್

ಬಾಂಗ್ಲಾದೇಶ ಎರಡನೇ ಇನಿಂಗ್ಸ್: 307 ರನ್

ದಕ್ಷಿಣ ಆಫ್ರಿಕಾ ಎರಡನೇ ಇನಿಂಗ್ಸ್: 106/3

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News