ತಾನಾಡಿದ 5ನೇ ಟೆಸ್ಟ್‌ನಲ್ಲೇ ಅಶ್ವಿನ್ ದಾಖಲೆ ಸರಿಗಟ್ಟಿದ ಸುಂದರ್

Update: 2024-10-24 15:24 GMT

PC : PTI 

ಪುಣೆ : ಮೂರೂವರೆ ವರ್ಷಗಳಿಗೂ ಅಧಿಕ ಸಮಯದ ನಂತರ ಟೆಸ್ಟ್ ತಂಡಕ್ಕೆ ವಾಪಸಾಗಿರುವ ಭಾರತೀಯ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ತನಗೆ ಲಭಿಸಿರುವ ಅವಕಾಶವನ್ನು ಎರಡೂ ಕೈಗಳಿಂದ ಬಾಚಿಕೊಂಡಿದ್ದಾರೆ. ಪುಣೆ ನಗರಿಯಲ್ಲಿ ಗುರುವಾರ ಆರಂಭವಾದ ಎರಡನೇ ಟೆಸ್ಟ್‌ನ ಮೊದಲ ದಿನದಾಟದಲ್ಲಿ ತನ್ನ ಸ್ಪಿನ್ ಮೋಡಿಯ ಮೂಲಕ ನ್ಯೂಝಿಲ್ಯಾಂಡ್ ಬ್ಯಾಟರ್‌ಗಳನ್ನು ಇನ್ನಿಲ್ಲದಂತೆ ಕಾಡಿದರು.

ದಿನದ ಕೊನೆಯ ಅವಧಿಯ ಆಟದಲ್ಲಿ ಕಿವೀಸ್ ತಂಡ ಬ್ಯಾಟಿಂಗ್ ಸರದಿಯನ್ನು ಚಿಂದಿ ಉಡಾಯಿಸಿದ ಸುಂದರ್ ಜೀವನಶ್ರೇಷ್ಠ ಬೌಲಿಂಗ್(7-59) ಮಾಡಿದರು. ಈ ಮೂಲಕ ಭಾರತ ತಂಡವು ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದ ಕಿವೀಸ್ ಪಡೆಯನ್ನು 259 ರನ್‌ಗೆ ನಿಯಂತ್ರಿಸುವಲ್ಲಿ ನೆರವಾದರು.

ಈ ಅಮೋಘ ಪ್ರದರ್ಶನದ ಮೂಲಕ ಸುಂದರ್ ಅವರು ತನ್ನ ಹಿರಿಯ ಸಹ ಆಟಗಾರ ರವಿಚಂದ್ರನ್ ಅಶ್ವಿನ್‌ರ ದಾಖಲೆಯನ್ನು ಸರಿಗಟ್ಟಿದರು. ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ನ್ಯೂಝಿಲ್ಯಾಂಡ್‌ನ ವಿರುದ್ಧ 59 ರನ್‌ಗೆ 7 ವಿಕೆಟ್‌ಗಳನ್ನು ಉರುಳಿಸಿದ್ದರು. ಸುಂದರ್ ತನ್ನ ಐದನೇ ಟೆಸ್ಟ್ ಪಂದ್ಯದಲ್ಲಿ ಈ ಸಾಧನೆ ಮಾಡಿದ್ದು ವಿಶೇಷವಾಗಿದೆ.

ಪುರುಷರ ಟೆಸ್ಟ್ ಕ್ರಿಕೆಟ್ ಇನಿಂಗ್ಸ್‌ವೊಂದರಲ್ಲಿ ಭಾರತದ ಪರ ಬಲಗೈ ಆಫ್ ಸ್ಪಿನ್ ಬೌಲರ್‌ಗಳು ಎಲ್ಲ 10 ವಿಕೆಟ್‌ಗಳನ್ನು ಉಡಾಯಿಸಿದ ಮೊದಲ ನಿದರ್ಶನ ಇದಾಗಿದೆ. ಅಶ್ವಿನ್ ಕಿವೀಸ್‌ನ ವಿಕೆಟ್ ಪತನಕ್ಕೆ ನಾಂದಿ ಹಾಡಿದರೆ, ಸುಂದರ್ ಅಂತಿಮ ಸ್ಪರ್ಶ ನೀಡಿದರು.

ಒಂದು ಹಂತದಲ್ಲಿ 197 ರನ್‌ಗೆ 3 ವಿಕೆಟ್‌ಗಳನ್ನು ಕಳೆದುಕೊಂಡಿದ್ದ ನ್ಯೂಝಿಲ್ಯಾಂಡ್ ತಂಡ ಡೆವೊನ್ ಕಾನ್ವೆ, ರಚಿನ್ ರವೀಂದ್ರ ಹಾಗೂ ಡ್ಯಾರಿಲ್ ಮಿಚೆಲ್ ಉತ್ತಮ ಕೊಡುಗೆಯ ಹೊರತಾಗಿಯೂ 300 ರನ್ ಗಳಿಸಲು ವಿಫಲವಾಯಿತು.

ಶಿಸ್ತುಬದ್ಧ ಬೌಲಿಂಗ್ ಪ್ರದರ್ಶಿಸಿದ ಸುಂದರ್ ನ್ಯೂಝಿಲ್ಯಾಂಡ್ ತಂಡದ ನಾಟಕೀಯ ಕುಸಿತಕ್ಕೆ ಕಾರಣರಾದರು. ಕೇವಲ 62 ರನ್‌ಗೆ ಏಳು ವಿಕೆಟ್‌ಗಳನ್ನು ಕಳೆದುಕೊಂಡಿರುವ ಕಿವೀಸ್ 259 ರನ್‌ಗೆ ಆಲೌಟಾಯಿತು.

►ಭಾರತದಲ್ಲಿ ಮೊದಲ ದಿನದಾಟದಲ್ಲಿ ಎಲ್ಲ 10 ವಿಕೆಟ್‌ಗಳು ಸ್ಪಿನ್ನರ್‌ಗಳ ಪಾಲಾದ ಪಂದ್ಯಗಳು

ಭಾರತ-ನ್ಯೂಝಿಲ್ಯಾಂಡ್, ಪುಣೆ, 2024

ಭಾರತ-ಇಂಗ್ಲೆಂಡ್, ಧರ್ಮಶಾಲಾ, 2024

ಭಾರತ-ಇಂಗ್ಲೆಂಡ್, ಚೆನ್ನೈ, 1973

ಭಾರತ-ಆಸ್ಟ್ರೇಲಿಯ, ಚೆನ್ನೈ, 1964

ಭಾರತ-ಆಸ್ಟ್ರೇಲಿಯ, ಕೋಲ್ಕತಾ, 1956

ಇಂಗ್ಲೆಂಡ್-ಭಾರತ, ಕಾನ್ಪುರ, 1952

► ಭಾರತ-ನ್ಯೂಝಿಲ್ಯಾಂಡ್ ಟೆಸ್ಟ್‌ನಲ್ಲಿ ಶ್ರೇಷ್ಠ ಬೌಲಿಂಗ್

8/72: ಎಸ್. ವೆಂಕಟರಾಘವನ್, ಹೊಸದಿಲ್ಲಿ, 1965

8/76: ಇಎಎಸ್ ಪ್ರಸನ್ನ, ಆಕ್ಲಂಡ್, 1975

7/59: ಆರ್.ಅಶ್ವಿನ್, ಇಂದೋರ್, 2017

7/59: ವಾಶಿಂಗ್ಟನ್ ಸುಂದರ್, ಪುಣೆ, 2024

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News