ವಾಶಿಂಗ್ಟನ್ ಸುಂದರ್ ಗೆ ಕ್ಲೀನ್ ಬೌಲ್ಡ್ ಆದ ಕಿವೀಸ್ | 259ಕ್ಕೆ ಆಲೌಟ್
ಪುಣೆ: ಆಫ್ ಸ್ಪಿನ್ನರ್ ವಾಶಿಂಗ್ಟನ್ ಸುಂದರ್ ಜೀವನಶ್ರೇಷ್ಠ ಬೌಲಿಂಗ್(7-59)ನೆರವಿನಿಂದ ಗುರುವಾರ ಆರಂಭವಾದ ಎರಡನೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಭಾರತ ಕ್ರಿಕೆಟ್ ತಂಡವು ನ್ಯೂಝಿಲ್ಯಾಂಡ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 259 ರನ್‌ಗೆ ಆಲೌಟ್ ಮಾಡಿದೆ.
ಮೊದಲ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು ದಿನದಾಟದಂತ್ಯಕ್ಕೆ ನಾಯಕ ರೋಹಿತ್ ಶರ್ಮಾ ವಿಕೆಟ್‌ನ್ನು ಕಳೆದುಕೊಂಡು 11 ಓವರ್‌ಗಳಲ್ಲಿ 16 ರನ್ ಗಳಿಸಿದೆ. ಯಶಸ್ವಿ ಜೈಸ್ವಾಲ್(ಔಟಾಗದೆ 6)ಹಾಗೂ ಶುಭಮನ್ ಗಿಲ್(ಔಟಾಗದೆ 10)ಕ್ರೀಸ್ ಕಾಯ್ದುಕೊಂಡಿದ್ದಾರೆ. ನ್ಯೂಝಿಲ್ಯಾಂಡ್‌ನ ಮೊದಲ ಇನಿಂಗ್ಸ್ ಮೊತ್ತಕ್ಕಿಂತ 243 ರನ್ ಹಿನ್ನಡೆಯಲ್ಲಿದೆ.
ಟಿಮ್ ಸೌಥಿ ಅವರು ರೋಹಿತ್ ಶರ್ಮಾರನ್ನು ಬೇಗನೆ ಔಟ್ ಮಾಡಿದರು. ರೋಹಿತ್ 9 ಎಸೆತಗಳನ್ನು ಎದುರಿಸಿ ಶೂನ್ಯಕ್ಕೆ ಔಟಾದ ನಂತರ ಬೆಂಗಳೂರಿನಲ್ಲಿ ಮೊದಲ ಇನಿಂಗ್ಸ್‌ನಲಿ ಕಳಪೆ ಪ್ರದರ್ಶನ ನೀಡಿದ್ದ ಭಾರತ ತಂಡವು ಎಚ್ಚರಿಕೆಯ ಹೆಜ್ಜೆ ಇಟ್ಟಿದೆ. ರೋಹಿತ್ ಸರಣಿಯಲ್ಲಿ 3ನೇ ಬಾರಿ ಕ್ಲೀನ್‌ಬೌಲ್ಡಾದರು. ಸೌಥಿಗೆ ಎರಡನೇ ಬಾರಿ ವಿಕೆಟ್ ಒಪ್ಪಿಸಿದರು.
ಸೌಥಿ ಪ್ರಸಕ್ತ ಟೆಸ್ಟ್ ಪಂದ್ಯದಲ್ಲಿ ವಿಕೆಟ್ ಪಡೆದ ಮೊದಲ ವೇಗದ ಬೌಲರ್ ಎನಿಸಿಕೊಂಡರು. ಭಾರತದ ಅವಳಿ ಸ್ಪಿನ್ನರ್‌ಗಳಾದ ಸುಂದರ್(7-59) ಹಾಗೂ ಆರ್.ಅಶ್ವಿನ್(3-64)ನ್ಯೂಝಿಲ್ಯಾಂಡ್ ಇನಿಂಗ್ಸ್‌ನಲ್ಲಿ ಎಲ್ಲ 10 ವಿಕೆಟ್‌ಗಳನ್ನು ಉರುಳಿಸಿ ಪ್ರಾಬಲ್ಯ ಮೆರೆದಿದ್ದಾರೆ.
2021ರ ಮಾರ್ಚ್ ನಂತರ ಭಾರತದ ಪರ ಮೊದಲ ಟೆಸ್ಟ್ ಪಂದ್ಯವನ್ನಾಡಿದ ಸುಂದರ್ ಅವರು ಅಶ್ವಿನ್ ಮೊದಲ ಮೂರು ವಿಕೆಟ್‌ಗಳನ್ನು ಉರುಳಿಸಿದ ನಂತರ ತನ್ನ ಕೈಚಳಕ ಪ್ರದರ್ಶಿಸಿದರು.
ನ್ಯೂಝಿಲ್ಯಾಂಡ್ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಆದರೆ ನಾಯಕ ಟಾಮ್ ಲ್ಯಾಥಮ್(15 ರನ್)ವಿಕೆಟನ್ನು ಉರುಳಿಸಿದ ಅಶ್ವಿನ್ ಭಾರತದ ವಿಕೆಟ್ ಬೇಟೆಗೆ ಚಾಲನೆ ನೀಡಿದರು. ಮೊದಲ ಸೆಶನ್‌ನಲ್ಲಿ ವಿಲ್ ಯಂಗ್(18 ರನ್)ವಿಕೆಟನ್ನು ಪಡೆಯುವಲ್ಲಿಯೂ ಯಶಸ್ವಿಯಾದರು. ಎರಡನೇ ಸೆಶನ್‌ನ ಅಂತ್ಯದಲ್ಲಿ ಸುಂದರ್ ಕಿವೀಸ್ ಪಾಳಯಕ್ಕೆ ದುಸ್ವಪ್ನರಾದರು.
ಸುಂದರ್ ಆರಂಭದಲ್ಲಿ ಮಿತವ್ಯಯಿ ಎನಿಸಿಕೊಂಡರು. 2ನೇ ಸೆಶನ್‌ನಲ್ಲಿ ಫಾರ್ಮ್‌ನಲ್ಲಿರುವ ರಚಿನ್ ರವೀಂದ್ರ ಸಹಿತ ಎರಡು ವಿಕೆಟ್‌ಗಳನ್ನು ಪಡೆದರು. ಆಗ ನ್ಯೂಝಿಲ್ಯಾಂಡ್ ಟೀ ವಿರಾಮದ ವೇಳೆಗೆ 201 ರನ್‌ಗೆ 5ನೇ ವಿಕೆಟ್ ಕಳೆದುಕೊಂಡಿತು.
ರವೀಂದ್ರ ಟೀ ವಿರಾಮಕ್ಕೆ ಮೊದಲೇ ಔಟಾದ ಹಿನ್ನೆಲೆಯಲ್ಲಿ ನ್ಯೂಝಿಲ್ಯಾಂಡ್ ಚೇತರಿಸಿಕೊಳ್ಳುವಲ್ಲಿ ವಿಫಲವಾಯಿತು. ಕೊನೆಯ ಸೆಶನ್‌ನಲ್ಲಿ ಪ್ರತಿರೋಧ ಒಡ್ಡುವಲ್ಲಿ ಎಡವಿತು. ಮತ್ತೊಂದು ಮಹತ್ವದ ಇನಿಂಗ್ಸ್‌ನತ್ತ ಚಿತ್ತ ಹರಿಸಿದ್ದ ರಚಿನ್ ರವೀಂದ್ರಗೆ ಸುಂದರ್ ಕಡಿವಾಣ ಹಾಕಿದರು.
ಸುಂದರ್ ಉರುಳಿಸಿರುವ 7 ವಿಕೆಟ್‌ಗಳ ಪೈಕಿ ಐದನ್ನು ಕ್ಲೀನ್‌ಬೌಲ್ಡ್ ಮೂಲಕ ಪಡೆದರೆ, ಒಂದು ವಿಕೆಟನ್ನು ಎಲ್ಬಿಡಬ್ಲ್ಯು ಹಾಗೂ ಮತ್ತೊಂದನ್ನು ಕ್ಯಾಚ್ ಮೂಲಕ ಪಡೆದರು.
ರವೀಂದ್ರ(65 ರನ್, 105 ಎಸೆತ, 5 ಬೌಂಡರಿ, 1 ಸಿಕ್ಸರ್), ಟಾಮ್ ಬ್ಲಂಡೆಲ್(3 ರನ್), ಮಿಚೆಲ್ ಸ್ಯಾಂಟ್ನರ್(33 ರನ್,51 ಎಸೆತ), ಟಿಮ್ ಸೌಥಿ(5 ರನ್)ಹಾಗೂ ಅಜಾಝ್ ಪಟೇಲ್(4 ರನ್)ಕ್ಲೀನ್‌ಬೌಲ್ಡಾದರು.
ಆರಂಭಿಕ ಬ್ಯಾಟರ್ ಡೆವೊನ್ ಕಾನ್ವೆ(76 ರನ್, 141 ಎಸೆತ, 11 ಬೌಂಡರಿ)ಟಾಪ್ ಸ್ಕೋರರ್ ಎನಿಸಿಕೊಂಡರು. ಆದರೆ, ಅಶ್ವಿನ್ ಅಗ್ರ ಸರದಿಯಲ್ಲಿ ಉರುಳಿಸಿದ ಮೂರು ವಿಕೆಟ್‌ಗಳ ಪೈಕಿ ಕಾನ್ವೆ ಕೂಡ ಒಬ್ಬರು.
ಸ್ಪಿನ್ನರ್‌ಗಳ ವಿರುದ್ಧ ರಿವರ್ಸ್ ಸ್ವೀಪ್ ಹಾಗೂ ವೇಗಿಗಳ ಎದುರು ಡ್ರೈವ್ಸ್‌ಗಳನ್ನು ಸಮರ್ಥವಾಗಿ ಬಳಸಿದ ಕಾನ್ವೆ ರನ್ ಕಲೆ ಹಾಕಿದರು. ಆದರೆ, ಅಶ್ವಿನ್ ಬೌಲಿಂಗ್‌ನಲ್ಲಿ ವಿಕೆಟ್‌ಕೀಪರ್ ಪಂತ್‌ಗೆ ಕ್ಯಾಚ್ ನೀಡಿ ಶತಕ ವಂಚಿತರಾದರು.
ಒಂದು ಹಂತದಲ್ಲಿ 3 ವಿಕೆಟ್‌ಗೆ 138 ರನ್ ಗಳಿಸಿದ್ದ ನ್ಯೂಝಿಲ್ಯಾಂಡ್ 259 ರನ್ ಗಳಿಸುವಷ್ಟರಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.
ನಾಯಕ ಲ್ಯಾಥಮ್ ಹಾಗೂ ಮಿಚೆಲ್ ಕ್ರೀಸ್‌ನಲ್ಲಿ ಸಾಕಷ್ಟು ಸಮಯ ಕಳೆದರೂ ಫಾರ್ಮ್ ಕಂಡುಕೊಳ್ಳುವಲ್ಲಿ ಅಸಮರ್ಥರಾಗಿರುವುದು ನ್ಯೂಝಿಲ್ಯಾಂಡ್ ಅನ್ನು ಸಮಸ್ಯೆಗೆ ಸಿಲುಕಿಸಿತು.