ಪ್ಯಾರಿಸ್ ಮಾಸ್ಟರ್ಸ್ | ಹಾಲಿ ಚಾಂಪಿಯನ್ ಜೊಕೊವಿಕ್ ಅಲಭ್ಯ
Update: 2024-10-24 16:02 GMT
ಹೊಸದಿಲ್ಲಿ : ಏಳು ಬಾರಿ ಪ್ರಶಸ್ತಿ ಗೆದ್ದಿರುವ ಪ್ಯಾರಿಸ್ ಮಾಸ್ಟರ್ಸ್ ಟೆನಿಸ್ ಟೂರ್ನಿಯಲ್ಲಿ ನಾನು ಭಾಗವಹಿಸುವುದಿಲ್ಲ ಎಂದು ಸರ್ಬಿಯದ ಆಟಗಾರ ನೊವಾಕ್ ಜೊಕೊವಿಕ್ ಬುಧವಾರ ಪ್ರಕಟಿಸಿದ್ದಾರೆ.
37ರ ಹರೆಯದ ಜೊಕೊವಿಕ್ ಇನ್‌ಸ್ಟಾಗ್ರಾಮ್ ಮೂಲಕ ಈ ಘೋಷಣೆ ಮಾಡಿದ್ದಾರೆ.
ದುರದೃಷ್ಟವಶಾತ್ ಈ ವರ್ಷದ ಪ್ಯಾರಿಸ್ ಮಾಸ್ಟರ್ಸ್‌ನಲ್ಲಿ ನಾನು ಆಡುವುದಿಲ್ಲ. ಮುಂದಿನ ವರ್ಷ ಆಡುವ ವಿಶ್ವಾಸದಲ್ಲಿದ್ದೇನೆ ಎಂದು ಜೊಕೊವಿಕ್ ಹೇಳಿದ್ದಾರೆ.
ದಾಖಲೆಯ 40 ಮಾಸ್ಟರ್ಸ್ ಪ್ರಶಸ್ತಿಗಳು ಹಾಗೂ 24 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಜೊಕೊವಿಕ್ ಈ ವರ್ಷ ಸವಾಲನ್ನು ಎದುರಿಸಿದ್ದರು. ಈ ವರ್ಷ ಒಲಿಂಪಿಕ್ಸ್ ಚಿನ್ನದ ಪದಕ ಮಾತ್ರ ಗೆದ್ದಿದ್ದಾರೆ.
ಈ ವರ್ಷದ ಪ್ಯಾರಿಸ್ ಮಾಸ್ಟರ್ಸ್ ಟೂರ್ನಿಯು ಅ.28ರಿಂದ ನ.3ರ ತನಕ ನಡೆಯಲಿದೆ.