ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಇತಿಹಾಸದಲ್ಲಿ ಗರಿಷ್ಠ ವಿಕೆಟ್ ಪಡೆದ ಅಶ್ವಿನ್
ಪುಣೆ : ಭಾರತದ ಆಲ್‌ರೌಂಡರ್ ಆರ್.ಅಶ್ವಿನ್ ನ್ಯೂಝಿಲ್ಯಾಂಡ್ ವಿರುದ್ಧ ಪುಣೆಯ ಎಂಸಿಎ ಕ್ರೀಡಾಂಗಣದಲ್ಲಿ ಗುರುವಾರ ಆರಂಭವಾದ ದ್ವಿತೀಯ ಟೆಸ್ಟ್ ಪಂದ್ಯದ ವೇಳೆ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನಲ್ಲಿ (ಡಬ್ಲ್ಯುಟಿಸಿ) ಗರಿಷ್ಠ ವಿಕೆಟ್ ಪಡೆದ ಗೌರವಕ್ಕೆ ಪಾತ್ರರಾದರು.
ಮೊದಲ ದಿನದಾಟದ ಮೊದಲ ಅವಧಿಯಲ್ಲಿ ಟಾಮ್ ಲ್ಯಾಥಮ್ ಹಾಗೂ ವಿಲ್ ಯಂಗ್ ವಿಕೆಟ್‌ಗಳನ್ನು ಉರುಳಿಸಿದ ಆಫ್ ಸ್ಪಿನ್ನರ್ ಅಶ್ವಿನ್ ಅವರು ಡಬ್ಲ್ಯುಟಿಸಿಯಲ್ಲಿ ಗರಿಷ್ಠ ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಅಗ್ರ ಸ್ಥಾನಕ್ಕೇರಿದ್ದಾರೆ.
39 ಪಂದ್ಯಗಳಲ್ಲಿ 188 ವಿಕೆಟ್‌ಗಳನ್ನು ಉರುಳಿಸಿದ ಅಶ್ವಿನ್ ಅವರು ಆಸ್ಟ್ರೇಲಿಯದ ಆಫ್ ಸ್ಪಿನ್ನರ್ ನಾಥನ್ ಲಿಯೊನ್‌ರನ್ನು ಹಿಂದಿಕ್ಕಿದರು. ಲಿಯೊನ್ 43 ಟೆಸ್ಟ್ ಪಂದ್ಯಗಳಲ್ಲಿ 187 ವಿಕೆಟ್‌ಗಳನ್ನು ಉರುಳಿಸಿದ್ದಾರೆ.
ಆಸ್ಟ್ರೇಲಿಯ ಕ್ರಿಕೆಟ್ ತಂಡದ ನಾಯಕ ಪ್ಯಾಟ್ ಕಮಿನ್ಸ್(42 ಪಂದ್ಯಗಳು, 175 ವಿಕೆಟ್‌ಗಳು)ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದಾರೆ.
30 ಪಂದ್ಯಗಳಲ್ಲಿ 124 ವಿಕೆಟ್‌ಗಳನ್ನು ಪಡೆದಿರುವ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ 7ನೇ ಸ್ಥಾನದಲ್ಲಿದ್ದಾರೆ.
ಅಶ್ವಿನ್ ತನ್ನ ವೃತ್ತಿಬದುಕಿನಲ್ಲಿ 104 ಪಂದ್ಯಗಳಲ್ಲಿ 530 ವಿಕೆಟ್‌ಗಳನ್ನು ಪಡೆದಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅನಿಲ್ ಕುಂಬ್ಳೆ ನಂತರ ಭಾರತದ ಎರಡನೇ ಗರಿಷ್ಠ ವಿಕೆಟ್ ಸರದಾರನಾಗಿದ್ದಾರೆ. ಚೆನ್ನೈ ಕ್ರಿಕೆಟಿಗ ಅಶ್ವಿನ್ 26.44ರ ಸರಾಸರಿಯಲ್ಲಿ ಆರು ಶತಕಗಳು ಹಾಗೂ 14 ಅರ್ಧಶತಕಗಳ ಸಹಿತ 3,438 ರನ್ ಗಳಿಸಿದ್ದಾರೆ.