ಧೋನಿ ವಿರುದ್ಧ ವಾಗ್ದಾಳಿ: ಇದೀಗ ಮನೋಜ್ ತಿವಾರಿ ಸರದಿ!

Update: 2024-10-24 08:26 GMT

ಮಹೇಂದ್ರ ಸಿಂಗ್ ಧೋನಿ | PC : NDTV  

ಹೊಸದಿಲ್ಲಿ: ನಾನು ನನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ನನ್ನನ್ನು ರಾಷ್ಟ್ರೀಯ ತಂಡದಿಂದ ಕೈಬಿಡಲಾಯಿತು ಎಂದು ಮಾಜಿ ಭಾರತೀಯ ಆಟಗಾರ ಮನೋಜ್ ತಿವಾರಿ ಆರೋಪಿಸಿದ್ದಾರೆ. ರಾಷ್ಟ್ರೀಯ ತಂಡದಿಂದ ನನ್ನನ್ನು ಕೈಬಿಡಲು ಆಗ ತಂಡದ ನಾಯಕರಾಗಿದ್ದ ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಅವರು ಪರೋಕ್ಷ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

2011ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಮನೋಜ್ ತಿವಾರಿ ಶತಕ ಬಾರಿಸಿದ್ದರು. ಅದರ ಮರು ಪಂದ್ಯದಲ್ಲೇ ಅವರನ್ನು ತಂಡದಿಂದ ಕೈಬಿಡಲಾಗಿತ್ತು. ಇದಾದ ನಂತರ, ಅವರು ತಂಡಕ್ಕೆ ಮರಳಿದ್ದರಾದರೂ, ಅದಕ್ಕಾಗಿ ಅವರು ಎಂಟು ತಿಂಗಳ ಕಾಲ ಕಾಯಬೇಕಾಗಿ ಬಂದಿತ್ತು.

ಈ ಕುರಿತು ಇತ್ತೀಚೆಗೆ ಸಂದರ್ಶನವೊಂದರಲ್ಲಿ ಮಾತನಾಡಿರುವ ಮನೋಜ್ ತಿವಾರಿ, ನಾನು ಈ ಕುರಿತು ಮುಂದಿನ ದಿನಗಳಲ್ಲಿ ಮಾತನಾಡಲಿದ್ದೇನೆ. ನಾನು ನನ್ನ ವೃತ್ತಿ ಜೀವನದ ಉತ್ತುಂಗದಲ್ಲಿದ್ದಾಗ ನನ್ನನ್ನು ತಂಡದಿಂದ ಕೈಬಿಟ್ಟಿದ್ದರಿಂದ ನನ್ನ ಆತ್ಮವಿಶ್ವಾಸವು ಸಂಪೂರ್ಣವಾಗಿ ಕುಗ್ಗಿ ಹೋಯಿತು ಎಂದು ಆರೋಪಿಸಿದ್ದಾರೆ.

“ಇದು ಬಹಳ ಹಿಂದೆ ಆಗಿದೆ. ಇದು ಹಿಂದಿನ ಸಂಗತಿಯಾಗಿದ್ದರೂ, ದುಃಖವಂತೂ ಆಗುತ್ತದೆ. ದುಃಖವಾಗಲಿಲ್ಲ ಎಂದು ನಾನು ಹೇಳಿದರೆ, ಅದು ಸುಳ್ಳಾಗುತ್ತದೆ. ನಾವೇನು ಮಾಡಲು ಸಾಧ್ಯ? ಇದು ಜೀವನ. ನಾವು ಮುಂದೆ ಸಾಗುತ್ತಲೇ ಇರಬೇಕಾಗುತ್ತದೆ. ಒಂದು ವೇಳೆ ನಾನು ನನ್ನ ಆತ್ಮಕತೆ ರಚಿಸಿದರೆ ಅಥವಾ ನಾನೇ ಸ್ವತಃ ಪಾಡ್ ಕಾಸ್ಟ್ ಮಾಡಿದರೆ, ಈ ಸಂಗತಿಗಳನ್ನು ಬಯಲುಗೊಳಿಸುತ್ತೇನೆ. ಆದರಿದು ಸುಲಭವಲ್ಲ. ಆಟಗಾರನೊಬ್ಬ ಉತ್ತುಂಗದಲ್ಲಿದ್ದಾಗ, ಆತನ ಆತ್ಮವಿಶ್ವಾಸವನ್ನು ಕುಗ್ಗಿಸಿದರೆ, ಅದು ಆತನ ಮನಸ್ಸಿನ ಮೇಲೆ ಪರಿಣಾಮ ಬೀರುತ್ತದೆ” ಎಂದು Cricket Addictor ಸುದ್ದಿ ಸಂಸ್ಥೆಗೆ ಮನೋಜ್ ತಿವಾರಿ ತಿಳಿಸಿದ್ದಾರೆ.

ಇದಕ್ಕೂ ಮುನ್ನ, ಭಾರತ ತಂಡದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಅವರ ತಂದೆ ಯೋಗರಾಜ್ ಸಿಂಗ್ ಕೂಡಾ ತಮ್ಮ ಪುತ್ರನ ವೃತ್ತಿ ಜೀವನದ ಅಂತ್ಯಕ್ಕೆ ಮಹೇಂದ್ರ ಸಿಂಗ್ ಧೋನಿ ಕಾರಣ ಎಂದು ಆರೋಪಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News