ಕೋಚಿಂಗ್ ಆಫರ್‌ನೊಂದಿಗೆ ಯಾವುದೇ ಆಸ್ಟ್ರೇಲಿಯ ಕ್ರಿಕೆಟರನ್ನು ಬಿಸಿಸಿಐ ಸಂಪರ್ಕಿಸಿಲ್ಲ : ಜಯ್ ಶಾ
ಹೊಸದಿಲ್ಲಿ: ಭಾರತೀಯ ಹಿರಿಯರ ಪುರುಷರ ತಂಡದ ಕೋಚ್ ಹುದ್ದೆಯ ಆಫರ್‌ನ್ನು ಆಸ್ಟ್ರೇಲಿಯದ ಮಾಜಿ ಕ್ರಿಕೆಟಿಗರಾದ ರಿಕಿ ಪಾಂಟಿಂಗ್ ಹಾಗೂ ಜಸ್ಟಿನ್ ಲ್ಯಾಂಗರ್ ನಿರಾಕರಿಸಿದ್ದಾರೆ ಎಂಬ ವರದಿಯನ್ನು ನಿರಾಕರಿಸಿದ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ, ಕೋಚಿಂಗ್ ಆಫರ್‌ನೊಂದಿಗೆ ಯಾವುದೇ ಆಸ್ಟ್ರೇಲಿಯ ಕ್ರಿಕೆಟಿಗರನ್ನು ಕ್ರಿಕೆಟ್ ಮಂಡಳಿಯು ಸಂಪರ್ಕಿಸಿಲ್ಲ ಎಂದು ಹೇಳಿದ್ದಾರೆ.
ನಾವು ಅಂತರ್‌ರಾಷ್ಟ್ರೀಯ ಕ್ರಿಕೆಟ್ ಬಗ್ಗೆ ಮಾತನಾಡುವಾಗ ಭಾರತೀಯ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಗಿಂತ ಮಿಗಿಲಾದ ಪ್ರತಿಷ್ಠಿತ ಹುದ್ದೆ ಯಾವುದು ಇರಲಾರದು. ಟೀಮ್ ಇಂಡಿಯಾ ಜಾಗತಿಕ ಮಟ್ಟದಲ್ಲಿ ಅತಿದೊಡ್ಡ ಅಭಿಮಾನಿಗಳನ್ನು ಹೊಂದಿದ್ದು, ನಿಜವಾಗಿಯೂ ಭಾರೀ ಬೆಂಬಲವನ್ನು ಹೊಂದಿದೆ. ಒಂದು ಶತಕೋಟಿ ಅಭಿಮಾನಿಗಳ ಆಕಾಂಕ್ಷೆಗಳನ್ನು ಈಡೇರಿಸುವುದು ಒಂದು ದೊಡ್ಡ ಗೌರವವಾಗಿದೆ. ಭಾರತೀಯ ಕ್ರಿಕೆಟ್ ಅನ್ನು ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿರುವ ಸೂಕ್ತ ಅಭ್ಯರ್ಥಿಯನ್ನು ಬಿಸಿಸಿಐ ಆಯ್ಕೆ ಮಾಡುತ್ತದೆ ಎಂದು ಶುಕ್ರವಾರ ಹೇಳಿಕೆಯೊಂದರಲ್ಲಿ ಜಯ್ ಶಾ ತಿಳಿಸಿದ್ದಾರೆ.
ನಾನಾಗಲಿ, ಬಿಸಿಸಿಐಯಾಗಲಿ ಕೋಚಿಂಗ್ ಆಫರ್‌ನೊಂದಿಗೆ ಯಾವುದೇ ಮಾಜಿ ಆಸ್ಟ್ರೇಲಿಯ ಕ್ರಿಕೆಟಿಗರನ್ನು ಸಂಪರ್ಕಿಸಿಲ್ಲ. ನಿರ್ದಿಷ್ಟ ಮಾಧ್ಯಮ ವಿಭಾಗದಲ್ಲಿ ಹರಿದಾಡುತ್ತಿರುವ ವರದಿಗಳು ಸಂಪೂರ್ಣ ಸುಳ್ಳು. ನಮ್ಮ ರಾಷ್ಟ್ರೀಯ ತಂಡಕ್ಕೆ ಸರಿಯಾದ ತರಬೇತುದಾರನನ್ನು ಹುಡುಕುವುದು ಒಂದು ನಿಖರವಾದ ಹಾಗೂ ಸಂಪೂರ್ಣ ಪ್ರಕ್ರಿಯೆಯಾಗಿದೆ. ಟೀಮ್ ಇಂಡಿಯಾವನ್ನು ಮುಂದಿನ ಹಂತಕ್ಕೆ ಒಯ್ಯಲು ನಮ್ಮ ದೇಶೀಯ ಕ್ರಿಕೆಟ್ ಚೌಕಟ್ಟಿನ ಬಗ್ಗೆ ನಮ್ಮ ಕೋಚ್ ಆಳವಾದ ಜ್ಞಾನವನ್ನು ಹೊಂದಿರುವುದು ಅತ್ಯಂತ ಮುಖ್ಯ ಎಂದು ಶಾ ಹೇಳಿದ್ದಾರೆ.
ಭಾರತದ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳುವ ಕುರಿತು ನನ್ನನ್ನು ಸಂಪರ್ಕಿಸಲಾಗಿದೆ. ಕೋಚ್ ಹುದ್ದೆ ನನ್ನ ಜೀವನಶೈಲಿಗೆ ಹೊಂದಿಕೆಯಾಗದ ಕಾರಣ ಆ ಪ್ರಸ್ತಾವವನ್ನು ನಾನು ತಿರಸ್ಕರಿಸಿದ್ದೇನೆ ಎಂದು ಆಸ್ಟ್ರೇಲಿಯದ ದಿಗ್ಗಜ ಆಟಗಾರ ರಿಕಿ ಪಾಂಟಿಂಗ್ ಅವರು ಗುರುವಾರ ಬಹಿರಂಗಪಡಿಸಿದ್ದಾರೆ.
ಭಾರತದ ಮುಖ್ಯ ಕೋಚ್ ಹುದ್ದೆ ಮೇಲೆ ಲಕ್ನೊ ಸೂಪರ್ ಜಯಂಟ್ಸ್ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಆಸಕ್ತಿ ಹೊಂದಿದ್ದರು. ಆದರೆ ನಾಯಕ ಕೆ.ಎಲ್.ರಾಹುಲ್‌ರ ಸಲಹೆಯು ಅವರು ಒಂದು ಹೆಜ್ಜೆ ಹಿಂದೆ ಸರಿಯುವಂತೆ ಮಾಡಿತು ಎಂದು ಗುರುವಾರ ವರದಿಯಾಗಿತ್ತು.
ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಲು ಮೇ 27 ಕೊನೆಯ ದಿನವಾಗಿದೆ ಎಂದು ಬಿಸಿಸಿಐ ತಿಳಿಸಿದೆ.