ವಿವಿಎಸ್ ಲಕ್ಷ್ಮಣ್ ಗೆ ಮುಖ್ಯ ಕೋಚ್ ಹುದ್ದೆ ವಹಿಸಿಕೊಳ್ಳಲು ಬಿಸಿಸಿಐ ಮನವೊಲಿಕೆ?
ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮುಖ್ಯ ಕೋಚ್ ಹುದ್ದೆಯನ್ನು ವಹಿಸಿಕೊಳ್ಳಲು ವಿವಿಎಸ್ ಲಕ್ಷ್ಮಣ್ ಹಿಂಜರಿಯುತ್ತಿರುವ ವಿಚಾರ ಗುಟ್ಟಾಗಿ ಉಳಿದಿಲ್ಲ. ಎನ್‌ಸಿಎಯಲ್ಲಿ ಕ್ರಿಕೆಟ್ ಮುಖ್ಯಸ್ಥನಾಗಿರುವ ಲಕ್ಷ್ಮಣ್ ಅವರ ಅಧಿಕಾರಾವಧಿಯು ಸೆಪ್ಟಂಬರ್‌ನಲ್ಲಿ ಮುಕ್ತಾಯವಾಗಲಿದೆ. ಲಕ್ಷ್ಮಣ್‌ರನ್ನು ತನ್ನ ವ್ಯವಸ್ಥೆಯೊಳಗೆ ಉಳಿಸಿಕೊಳ್ಳಲು ಬಿಸಿಸಿಐ ಹೇಗೆ ಯೋಚಿಸುತ್ತಿದೆ ಎಂಬ ಕುತೂಹಲವಿದೆ.
ಕೋಲ್ಕತಾ ನೈಟ್ ರೈಡರ್ಸ್‌ನ ಮೆಂಟರ್ ಆಗಿರುವ ಗೌತಮ್ ಗಂಭೀರ್ ಕೋಚ್ ಹುದ್ದೆಯ ರೇಸ್‌ನಲ್ಲಿ ಮುಂಚೂಣಿಯಲ್ಲಿದ್ದು, ಗಂಭೀರ್‌ರನ್ನು ಕೋಚ್ ಆಗಿ ನೇಮಿಸುವ ಕುರಿತು ಹಿರಿಯ ಆಟಗಾರರೊಂದಿಗೆ ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಸಮಾಲೋಚನೆ ನಡೆಸಿದ್ದಾರೆಯೇ ಎಂಬುದು ಸ್ಪಷ್ಟವಾಗಿಲ್ಲ.
ಕ್ರಿಕೆಟ್ ಬಗ್ಗೆ ಆಳವಾದ ತಿಳುವಳಿಕೆಯನ್ನು ಹೊಂದಿರುವ ಭಾರತೀಯ ಕೋಚ್‌ನತ್ತ ಬಿಸಿಸಿಐ ಒಲವು ತೋರುತ್ತಿದೆ. ಹಂತಹಂತವಾಗಿ ಏರಿ ಬಂದಿರುವ ಯಾವುದೇ ಮಾಜಿ ಆಟಗಾರರಿಗೆ ಆದ್ಯತೆ ನೀಡುವ ಕುರಿತು ಶಾ ಇತ್ತೀಚೆಗೆ ಸುಳಿವು ನೀಡಿದ್ದರು.
ಎನ್‌ಸಿಎಯಲ್ಲಿದ್ದಾಗ ಹಂಗಾಮಿ ಕೋಚ್ ಆಗಿದ್ದ ಲಕ್ಷ್ಮಣ್ ನೈಜ ಅಭ್ಯರ್ಥಿಯಾಗಿದ್ದಾರೆ. ಆದರೆ ಅವರು ಮೂರೂವರೆ ವರ್ಷಗಳ ಕೋಚ್ ಹುದ್ದೆಗೆ ಅರ್ಜಿ ಸಲ್ಲಿಸಿಲ್ಲ. 49ರ ಹರೆಯದ ಲಕ್ಷ್ಮಣ್‌ರನ್ನು ಉನ್ನತ ಕೋಚ್ ಹುದ್ದೆ ವಹಿಸಿಕೊಳ್ಳಲು ಬಿಸಿಸಿಐ ಮನವೊಲಿಸುವ ಸಾಧ್ಯತೆಯಿದೆ.
ಇದು ಸಂಪೂರ್ಣವಾಗಿ ಜಯ್ ಶಾಗೆ ಬಿಟ್ಟ ವಿಚಾರ. ವಿವಿಎಸ್‌ರನ್ನು ಭಾರತೀಯ ಕ್ರಿಕೆಟ್ ಭಾಗವಾಗಲು ಮನವೊಲಿಸಬೇಕು. ವಿವಿಎಸ್ ಪೂರ್ಣಾವಧಿ ಕೋಚ್ ಆಗಿ ಕೆಲಸ ಮಾಡಲು ಸಿದ್ಧರಿಲ್ಲದಿದ್ದರೆ ಭಾರತ ಈ ವರ್ಷ ಆಸ್ಟ್ರೇಲಿಯ ಹಾಗೂ ಮುಂದಿನ ವರ್ಷ ಇಂಗ್ಲೆಂಡ್‌ನಲ್ಲಿ ಟೆಸ್ಟ್ ಸರಣಿ ಆಡುವಾಗ ಸಲಹೆಗಾರರಾಗಬಹುದು ಎಂದು ಮಾಜಿ ಬಿಸಿಸಿಐ ಪದಾಧಿಕಾರಿಯೊಬ್ಬರು ಹೇಳಿದ್ದಾರೆ.
ಎನ್‌ಸಿಎಯಲ್ಲಿ ತನ್ನ ಅಧಿಕಾರವಧಿ ಪೂರೈಸಿದ ನಂತರ ಲಕ್ಷ್ಮಣ್ ಐಪಿಎಲ್‌ಗೆ ವಾಪಸಾಗಲು ಯಾವುದೇ ಸವಾಲು ಎದುರಿಸಲಾರರು. ಅವರಿಗೆ ಕನಿಷ್ಠ ಒಂದು ಫ್ರಾಂಚೈಸಿಯಿಂದ ಆಫರ್ ಬರಬಹುದು. ಕ್ರಿಕೆಟ್ ಜಗತ್ತಿನಲ್ಲಿ ಅವರು ವೀಕ್ಷಕವಿವರಣೆಗಾರನಾಗಿ ಹಾಗೂ ವಿಶ್ಲೇಷಕನಾಗಿ ಖ್ಯಾತಿ ಪಡೆದಿದ್ದಾರೆ.