ಡೋಪಿಂಗ್ | ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾ ನಾಲ್ಕು ವರ್ಷ ಅಮಾನತು
ಹೊಸದಿಲ್ಲಿ: ಮಾರ್ಚ್ 10ರಂದು ನಡೆದ ರಾಷ್ಟ್ರೀಯ ತಂಡದ ಆಯ್ಕೆ ಟ್ರಯಲ್ಸ್ ಸಂದರ್ಭದಲ್ಲಿ ತಮ್ಮ ಮೂತ್ರದ ಮಾದರಿಯನ್ನು ಸಲ್ಲಿಸಲು ನಿರಾಕರಿಸಿದ ಆರೋಪದ ಮೇಲೆ ಒಲಿಂಪಿಕ್ ಪದಕ ವಿಜೇತ ಕುಸ್ತಿಪಟು ಬಜರಂಗ್ ಪೂನಿಯಾರನ್ನು ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳ(NADA)ವು ನಾಲ್ಕು ವರ್ಷಗಳ ಕಾಲ ಅಮಾನತುಗೊಳಿಸಿದೆ. ಟೋಕಿಯೊ ಒಲಿಂಪಿಕ್ಸ್ ನಲ್ಲಿ ಕಂಚಿನ ಪದಕ ಜಯಿಸಿದ್ದ ಬಜರಂಗ್ ಪುನಿಯಾ ವಿರುದ್ಧ ಸಂಯುಕ್ತ ವಿಶ್ವ ಕುಸ್ತಿ ಒಕ್ಕೂಟವೂ ನಿಷೇಧ ಹೇರಿದೆ.
ತಮ್ಮ ವಿರುದ್ಧ ಹೇರಲಾಗಿದ್ದ ತಾತ್ಕಾಲಿಕ ಅಮಾನತು ಶಿಕ್ಷೆಯ ವಿರುದ್ಧ ಬಜರಂಗ್ ಪುನಿಯಾ ಮೇಲ್ಮನವಿ ಸಲ್ಲಿಸಿದ ನಂತರ, ರಾಷ್ಟ್ರೀಯ ಉದ್ದೀಪನ ಮದ್ದು ನಿಗ್ರಹ ದಳದ ಶಿಸ್ತುಕ್ರಮ ವಿರೋಧಿ ಉದ್ದೀಪನ ಮದ್ದು ಸಮಿತಿಯು 31ರಂದು ದೋಷಾರೋಪದ ಅಧಿಕೃತ ನೋಟಿಸ್ ಅನ್ನು ಬಾಕಿ ಇರಿಸಿ, ಅವರ ಮೇಲಿನ ವಿಧಿಸಲಾಗಿದ್ದ ಅಮಾನತನ್ನು ತಾತ್ಕಾಲಿಕವಾಗಿ ತೆರವುಗೊಳಿಸಿತ್ತು.
“ಹಾಲಿ ಪ್ರಕರಣದಲ್ಲಿ ಕ್ರೀಡಾಪಟುವನ್ನು ತಾತ್ಕಾಲಿಕವಾಗಿ ಅಮಾನತುಗೊಳಿಸಲಾಗಿದ್ದು, ಅದರಂತೆ ಸಮಿತಿಯು ಕ್ರೀಡಾಪಟುವಿನ ಅನರ್ಹತೆಯನ್ನು ನಾಲ್ಕು ವರ್ಷಗಳ ಕಾಲ ಎತ್ತಿ ಹಿಡಿದಿದೆ. ಈ ಅಮಾನತು ನಾವು ಅಧಿಸೂಚನೆ ಹೊರಡಿಸಿರುವ ದಿನದಿಂದ, ಅರ್ಥಾತ್, ಎಪ್ರಿಲ್ 23, 2024ರಿಂದ ಅನುಷ್ಠಾನಕ್ಕೆ ಬಂದಿದೆ” ಎಂದು ಶಿಸ್ತುಕ್ರಮ ವಿರೋಧಿ ಉದ್ದೀಪನ ಮದ್ದು ಸಮಿತಿಯು ತನ್ನ ಆದೇಶದಲ್ಲಿ ಹೇಳಿದೆ.
ಇತ್ತೀಚೆಗೆ ತಮ್ಮ ಸಹ ಕುಸ್ತಿಪಟು ವಿನೇಶ್ ಪೋಗಟ್ ರೊಂದಿಗೆ ಕಾಂಗ್ರೆಸ್ ಸೇರ್ಪೆಡಯಾಗಿ, ಅಖಿಲ ಭಾರತ ಕಿಸಾನ್ ಕಾಂಗ್ರೆಸ್ ಘಟಕದ ಮುಖ್ಯಸ್ಥ ಹುದ್ದೆ ಹೊಂದಿರುವ ಬಜರಂಗ್ ಪುನಿಯಾ, ತಮ್ಮ ವಿರುದ್ಧದ ಆರೋಪಗಳನ್ನು ಪ್ರಶ್ನಿಸಿ, ಜುಲೈ 11ರಂದು ಲಿಖಿತ ಮೇಲ್ಮನವಿ ಸಲ್ಲಿಸಿದ್ದರು. ಇದರ ನಂತರ, ಸೆಪ್ಟೆಂಬರ್ 20 ಹಾಗೂ ಅಕ್ಟೋಬರ್ 4ರಂದು ಈ ಮೇಲ್ಮನವಿಯ ವಿಚಾರಣೆ ನಡೆದಿತ್ತು.