ಶ್ರೇಷ್ಠ ಇಕಾನಮಿ ರೇಟ್, ಗರಿಷ್ಠ ವಿಕೆಟ್: ಅಗ್ರ ಸ್ಥಾನದಲ್ಲಿ ಭಾರತದ ಬೌಲರ್‌ಗಳು
ಹೊಸದಿಲ್ಲಿ: ಈಗ ನಡೆಯುತ್ತಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತ ಕ್ರಿಕೆಟ್ ತಂಡವು ಅಜೇಯ ಗೆಲುವಿನ ಓಟದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಉಳಿಸಿಕೊಂಡಿರುವುದರೊಂದಿಗೆ ಬೌಲಿಂಗ್ ವಿಭಾಗದಲ್ಲೂ ಪ್ರಾಬಲ್ಯ ಸಾಧಿಸಿದೆ.
ಮೂರು ಪಂದ್ಯಗಳಲ್ಲಿ ಮೂರು ಗೆಲುವು ದಾಖಲಿಸಿರುವ ಭಾರತವು ಆರು ಅಂಕ ಗಳಿಸಿ ಅಂಕಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಆಸ್ಟ್ರೇಲಿಯ, ಅಫ್ಘಾನಿಸ್ತಾನ ಹಾಗೂ ಪಾಕಿಸ್ತಾನ ತಂಡಗಳಿಗೆ ಸೋಲಿನ ರುಚಿ ಉಣಿಸಿದೆ. ಅತ್ಯಂತ ಮಿತವ್ಯಯಿ ಬೌಲರ್‌ಗಳ ಪಟ್ಟಿಯಲ್ಲಿ ಭಾರತ ಅಗ್ರ ಸ್ಥಾನ ಪಡೆದಿರುವುದಕ್ಕೆ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಹಾಗೂ ಅವರ ಸಹಾಯಕ ಸಿಬ್ಬಂದಿ ವರ್ಗ ಖುಷಿಯಾಗಿದ್ದಾರೆ.
ಪ್ರಸಕ್ತ ವಿಶ್ವಕಪ್‌ನಲ್ಲಿ ಸೋಮವಾರದ ತನಕ 14 ಪಂದ್ಯಗಳು ನಡೆದಿವೆ. ಮೂರು ಪಂದ್ಯಗಳಲ್ಲಿ ಭಾರತೀಯ ಬೌಲರ್‌ಗಳು 142.2 ಓವರ್ ಬೌಲಿಂಗ್ ಮಾಡಿದ್ದು, 4.55ರ ಇಕಾನಮಿ ರೇಟ್‌ನಲ್ಲಿ 648 ರನ್ ಬಿಟ್ಟುಕೊಟ್ಟಿದ್ದಾರೆ. ಭಾರತದ ಬೌಲರ್‌ಗಳು 28 ವಿಕೆಟ್‌ಗಳನ್ನು ಕಬಳಿಸಿದ್ದು, ಇದು ಟೂರ್ನಮೆಂಟ್‌ನಲ್ಲಿ ಬೌಲರ್‌ಗಳ ಶ್ರೇಷ್ಠ ಪ್ರದರ್ಶನವಾಗಿದೆ.
ಮೂರು ಪಂದ್ಯಗಳಲ್ಲಿ 5.10ರ ಇಕಾನಮಿ ರೇಟ್‌ನಲ್ಲಿ 748 ರನ್ ಬಿಟ್ಟುಕೊಟ್ಟು 27 ವಿಕೆಟ್‌ಗಳನ್ನು ಪಡೆದಿರುವ ನ್ಯೂಝಿಲ್ಯಾಂಡ್ ತಂಡದ ಬೌಲರ್‌ಗಳು ಉತ್ತಮ ಇಕಾನಮಿ ರೇಟ್ ಹೊಂದಿರುವ ಅಗ್ರ-6 ತಂಡಗಳ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದ್ದಾರೆ.
ಐದು ಬಾರಿಯ ಚಾಂಪಿಯನ್ ಆಸ್ಟ್ರೇಲಿಯ ತಂಡದ ಬೌಲರ್‌ಗಳು ಮೂರು ಪಂದ್ಯಗಳಲ್ಲಿ 134.5 ಓವರ್‌ಗಳು ಬೌಲಿಂಗ್ ಮಾಡಿದ್ದು, 5.25ರ ಇಕಾನಮಿ ರೇಟ್‌ನಲ್ಲಿ 709 ರನ್ ಸೋರಿಕೆ ಮಾಡಿದ್ದಾರೆ. 20 ವಿಕೆಟ್‌ಗಳನ್ನು ಉರುಳಿಸಿದ್ದಾರೆ.