ದ್ವಿಪಕ್ಷೀಯ ಟೆಸ್ಟ್ ಸರಣಿ | ನಾಳೆ ಭಾರತಕ್ಕೆ ವಿಶ್ವ ಚಾಂಪಿಯನ್ ಜರ್ಮನಿ ಎದುರಾಳಿ
ಹೊಸದಿಲ್ಲಿ : ಎರಡು ಪಂದ್ಯಗಳ ದ್ವಿಪಕ್ಷೀಯ ಟೆಸ್ಟ್ ಸರಣಿಯಲ್ಲಿ ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ವಿಜೇತ ಭಾರತದ ಪುರುಷರ ಹಾಕಿ ತಂಡವು ಬುಧವಾರ ವಿಶ್ವ ಚಾಂಪಿಯನ್ ಜರ್ಮನಿ ತಂಡವನ್ನು ಎದುರಿಸಲಿದ್ದು, 10 ವರ್ಷಗಳ ಅಂತರದ ನಂತರ ಇಂಟರ್‌ನ್ಯಾಶನಲ್ ಹಾಕಿ ದೇಶದ ರಾಜಧಾನಿಗೆ ಮರಳಲಿದೆ.
ಹೊಸ ಮುಖಗಳನ್ನು ಸತ್ವ ಪರೀಕ್ಷೆಗೆ ಒಳಪಡಿಸಲು ಬಯಸಿರುವ ಭಾರತದ ಹಾಕಿ ತಂಡವು ಇತ್ತೀಚೆಗೆ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಜರ್ಮನಿ ತಂಡದಿಂದ ಎದುರಾಗಿರುವ ಆಘಾತಕಾರಿ ಸೋಲಿಗೆ ಸೇಡು ತೀರಿಸಿಕೊಳ್ಳುವ ಗುರಿ ಇಟ್ಟುಕೊಂಡಿದೆ.
ಕಳೆದ 10 ವರ್ಷಗಳಲ್ಲಿ ಮೇಜರ್ ಧ್ಯಾನ್‌ಚಂದ್ ನ್ಯಾಶನಲ್ ಸ್ಟೇಡಿಯಮ್ ಯಾವುದೇ ಅಂತರ್‌ರಾಷ್ಟ್ರೀಯ ಪಂದ್ಯವನ್ನು ಆಯೋಜಿಸಿಲ್ಲ.
2014ರ ಹೀರೊ ವರ್ಲ್ಡ್ ಲೀಗ್ ಫೈನಲ್ ಪಂದ್ಯವು ಈ ಕ್ರೀಡಾಂಗಣದಲ್ಲಿ ನಡೆದಿತ್ತು.
ವಿಶ್ವದ ನಂ.2ನೇ ತಂಡ ಹಾಗೂ ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಜರ್ಮನಿ ವಿರುದ್ಧ ಬುಧವಾರ ಹಾಗೂ ಗುರುವಾರ ನಡೆಯಲಿರುವ 2 ಟೆಸ್ಟ್ ಪಂದ್ಯಗಳು ಭಾರತದ ಹಾಕಿ ತಂಡಕ್ಕೆ ಅತ್ಯಂತ ಮುಖ್ಯವಾಗಿದೆ. ಭಾರತವು ಟೋಕಿಯೊ ಹಾಗೂ ಪ್ಯಾರಿಸ್ ಒಲಿಂಪಿಕ್ ಗೇಮ್ಸ್‌ನಲ್ಲಿ ಸತತವಾಗಿ ಕಂಚಿನ ಪದಕ ಜಯಿಸಿತ್ತು.
ಪ್ಯಾರಿಸ್ ಗೇಮ್ಸ್‌ನ ಸೆಮಿ ಫೈನಲ್‌ನಲ್ಲಿ ಜರ್ಮನಿ ತಂಡದ ವಿರುದ್ಧ ತೀವ್ರ ಪೈಪೋಟಿ ಒಡ್ಡಿದ್ದ ಹರ್ಮನ್‌ಪ್ರೀತ್ ಸಿಂಗ್ ನಾಯಕತ್ವದ ಭಾರತವು 2-3 ಅಂತರದಿಂದ ಸೋತಿತ್ತು. ಇದೀಗ ಸೆಮಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ಉತ್ತಮ ಅವಕಾಶ ಭಾರತಕ್ಕೆ ಲಭಿಸಿದೆ.
ಹಾಲಿ ವಿಶ್ವ ಚಾಂಪಿಯನ್ ಜರ್ಮನಿ ತಂಡ ಪ್ಯಾರಿಸ್‌ನಲ್ಲಿ ಚಿನ್ನದ ಪದಕಕ್ಕಾಗಿ ನಡೆದ ಪಂದ್ಯದಲ್ಲಿ ನೆದರ್‌ಲ್ಯಾಂಡ್ಸ್ ವಿರುದ್ಧ ಶೂಟೌಟ್‌ನಲ್ಲಿ ಸೋಲನುಭವಿಸಿ ಬೆಳ್ಳಿ ಗೆದ್ದಿತ್ತು. ವಿಶ್ವ ರ‍್ಯಾಂಕಿಂಗ್ ನಲ್ಲಿ 5ನೇ ಸ್ಥಾನದಲ್ಲಿರುವ ಭಾರತದ ವಿರುದ್ಧ ಜರ್ಮನಿ ಫೇವರಿಟ್ ತಂಡವಾಗಿದೆ. ಆದರೆ, ಆಧುನಿಕ ಹಾಕಿಯಲ್ಲಿ ಅಗ್ರ-10 ತಂಡಗಳು ಯಾವ ತಂಡವನ್ನು ಬೇಕಾದರೂ ಸೋಲಿಸಬಹುದು.
ಉಭಯ ತಂಡಗಳ ನಡುವಿನ ಹಿಂದಿನ ಐದು ಮುಖಾಮುಖಿಗಳಲ್ಲಿ ಭಾರತವು 3ರಲ್ಲಿ ಜಯ, ಎರಡರಲ್ಲಿ ಸೋಲನುಭವಿಸಿ ಮೇಲುಗೈ ಸಾಧಿಸಿದೆ.
ಪ್ಯಾರಿಸ್ ಒಲಿಂಪಿಕ್ಸ್ ನಂತರ ಭಾರತ ಹಾಕಿ ತಂಡ ಉತ್ತಮ ಫಾರ್ಮ್‌ನಲ್ಲಿದೆ. ಸೆಪ್ಟಂಬರ್‌ನಲ್ಲಿ ನಡೆದಿದ್ದ ಏಶ್ಯನ್ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಆತಿಥೇಯ ಚೀನಾ ತಂಡವನ್ನು 1-0 ಅಂತರದಿಂದ ಮಣಿಸಿ ಐದನೇ ಬಾರಿ ಎಸಿಟಿ ಪ್ರಶಸ್ತಿಯನ್ನು ಜಯಿಸಿತ್ತು.
ಭಾರತೀಯರು ಎರಡು ಪಂದ್ಯಗಳಿಗೆ ಯುವಕರು ಹಾಗೂ ಹಿರಿಯರನ್ನು ಒಳಗೊಂಡ ತಂಡವನ್ನು ಕಣಕ್ಕಿಳಿಸಲಿದೆ. ಮುಖ್ಯ ಕೋಚ್ ಕ್ರೆಗ್ ಫುಲ್ಟನ್ 2028ರ ಲಾಸ್ ಏಂಜಲೀಸ್ ಒಲಿಂಪಿಕ್ಸ್ ದೃಷ್ಟಿಯಲ್ಲಿಟ್ಟುಕೊಂಡು ಯೋಜನೆ ರೂಪಿಸುತ್ತಿದ್ದಾರೆ.
ಡಿಫೆಂಡರ್ ಹಾಗೂ ಡ್ರ್ಯಾಗ್ ಫ್ಲಿಕರ್ ವರುಣ್ ಕುಮಾರ್ ತಂಡಕ್ಕೆ ಸೇರಿರುವ ಪ್ರಮುಖ ಆಟಗಾರನಾಗಿದ್ದಾರೆ. ಜೂನಿಯರ್ ವಾಲಿಬಾಲ್ ಆಟಗಾರ್ತಿಯಿಂದ ಲೈಂಗಿಕ ಕಿರುಕುಳ ಆರೋಪ ಎದುರಿಸಿದ್ದ ವರುಣ್ ಇದೀಗ ಆರೋಪದಿಂದ ಮುಕ್ತರಾಗಿದ್ದಾರೆ.
ಸದ್ಯ ಶ್ರೇಷ್ಠ ಫಾರ್ಮ್‌ನಲ್ಲಿರುವ ಸ್ಟಾರ್ ಡ್ರ್ಯಾಗ್‌ಫ್ಲಿಕರ್ ಹರ್ಮನ್‌ಪ್ರೀತ್ ಸಿಂಗ್ ಭಾರತದ ನೇತೃತ್ವವಹಿಸಲಿದ್ದು, ಮಿಡ್‌ಫೀಲ್ಡರ್ ವಿವೇಕ್ ಸಾಗರ್ ಪ್ರಸಾದ್ ಉಪ ನಾಯಕನಾಗಿದ್ದಾರೆ. ಮಿಡ್‌ಫೀಲ್ಡರ್ ಹಾರ್ದಿಕ್ ಸಿಂಗ್ ಸೇವೆಯಿಂದ ಭಾರತವು ಮತ್ತೊಮ್ಮೆ ವಂಚಿತವಾಗಲಿದೆ. ಒಲಿಂಪಿಕ್ಸ್‌ನಲ್ಲಿ ಆಗಿರುವ ಗಾಯದಿಂದ ಅವರು ಇನ್ನೂ ಚೇತರಿಸಿಕೊಂಡಿಲ್ಲ.
ಕೋಚ್ ಫುಲ್ಟನ್ ಅವರು ಹೊಸ ಮುಖಗಳಾದ ರಾಜಿಂದರ್ ಸಿಂಗ್ ಹಾಗೂ ಆದಿತ್ಯ ಅರುಣ್‌ರನ್ನು ಕಣಕ್ಕಿಳಿಸಲಿದ್ದು, ಈ ಇಬ್ಬರು ತಮ್ಮ ಚೊಚ್ಚಲ ಅಂತರ್‌ರಾಷ್ಟ್ರೀಯ ಹಾಕಿ ಪಂದ್ಯ ಆಡಲು ಸಜ್ಜಾಗಿದ್ದಾರೆ.
ಖಾಸಗಿ ಟಿಕೆಟ್ ಪೋರ್ಟಲ್ ಮೂಲಕ ಪರಿಚಯಿಸಲಾಗಿರುವ ಉಚಿತ ಟಿಕೆಟ್‌ಗಳಿಗಾಗಿ 12,000 ಅಭಿಮಾನಿಗಳು ನೋಂದಾಯಿಸಿದ್ದಾರೆ ಎಂದು ತಿಳಿದು ಬಂದಿದೆ. ನ್ಯಾಶನಲ್ ಸ್ಟೇಡಿಯಮ್ ಕೇವಲ 16,000 ಪ್ರೇಕ್ಷಕರ ಸಾಮರ್ಥ್ಯ ಹೊಂದಿದೆ.