ಬ್ಯಾಟಿಂಗ್ ಲೆಜೆಂಡ್ ತೆಂಡುಲ್ಕರ್ ದಾಖಲೆ ಮುರಿಯಬಲ್ಲರೇ ಜೋ ರೂಟ್?
ಲಾರ್ಡ್ಸ್ : ಶ್ರೀಲಂಕಾದ ವಿರುದ್ಧ 2ನೇ ಟೆಸ್ಟ್ ಪಂದ್ಯದಲ್ಲಿ ಅವಳಿ ಶತಕಗಳನ್ನು ಸಿಡಿಸಿರುವ ಇಂಗ್ಲೆಂಡ್ ಬ್ಯಾಟರ್ ಜೋ ರೂಟ್ ಮಾಜಿ ನಾಯಕ ಅಲಸ್ಟೈರ್ ಕುಕ್ ದಾಖಲೆಯನ್ನು (33 ಶತಕ)ಮುರಿದಿದ್ದಾರೆ. ಭಾರತದ ಬ್ಯಾಟಿಂಗ್ ಲೆಜೆಂಡ್ ಸಚಿನ್ ತೆಂಡುಲ್ಕರ್ ದಾಖಲೆಯನ್ನು ಮುರಿಯಲು 33ರ ಹರೆಯದ ರೂಟ್‌ಗೆ 3,544 ರನ್ ಅಗತ್ಯವಿದೆ.
2ನೇ ಟೆಸ್ಟ್‌ನಲ್ಲಿ 143 ರನ್ ಹಾಗೂ 103 ರನ್ ಗಳಿಸಿರುವ ರೂಟ್ ಅವರು 145 ಟೆಸ್ಟ್‌ನ 265 ಇನಿಂಗ್ಸ್‌ಗಳಲ್ಲಿ 50.93ರ ಸರಾಸರಿಯಲ್ಲಿ 12,377 ರನ್ ಗಳಿಸಿದ್ದಾರೆ. ತೆಂಡುಲ್ಕರ್ 200 ಟೆಸ್ಟ್ ಪಂದ್ಯಗಳಲ್ಲಿ 329 ಇನಿಂಗ್ಸ್‌ಗಳಲ್ಲಿ 53ರ ಸರಾಸರಿಯಲ್ಲಿ ಒಟ್ಟು 15,921 ರನ್ ಗಳಿಸಿದ್ದಾರೆ.
ರೂಟ್‌ಗೆ ಇನ್ನೂ 3-4 ವರ್ಷದ ಕ್ರಿಕೆಟ್ ಬಾಕಿ ಉಳಿದಿದ್ದು ಇಂಗ್ಲೆಂಡ್ ಬ್ಯಾಟರ್ ತೆಂಡುಲ್ಕರ್‌ರ ಟೆಸ್ಟ್ ದಾಖಲೆ ಮುರಿಯಬಲ್ಲರೇ ಎಂಬ ಪ್ರಶ್ನೆ ಕಾಡುತ್ತಿದೆ.
ಕುಕ್‌ರನ್ನು ಹಿಂದಿಕ್ಕಿ ಇಂಗ್ಲೆಂಡ್‌ನ ಸಾರ್ವಕಾಲಿಕ ಶ್ರೇಷ್ಠ ಟೆಸ್ಟ್ ಸ್ಕೋರರ್ ಎನಿಸಿಕೊಳ್ಳಲು ಕೇವಲ 95 ರನ್ ಅಗತ್ಯವಿರುವ ರೂಟ್ ಸದ್ಯ ಅಂತರ್‌ರಾಷ್ಟ್ರೀಯ ಟೆಸ್ಟ್ ಕ್ರಿಕೆಟ್‌ನ ಗರಿಷ್ಠ ರನ್ ಸ್ಕೋರರ್‌ಗಳ ಪಟ್ಟಿಯಲ್ಲಿ 7ನೇ ಸ್ಥಾನದಲ್ಲಿದ್ದಾರೆ.
ಈ ವರ್ಷಾಂತ್ಯಕ್ಕೆ ಮೊದಲು ಇಂಗ್ಲೆಂಡ್ ಇನ್ನೂ 6 ಟೆಸ್ಟ್ ಪಂದ್ಯಗಳನ್ನು ಆಡಲಿದೆ. ಪಾಕಿಸ್ತಾನ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ತಲಾ 3 ಪಂದ್ಯಗಳನ್ನು ಆಡಲಿದೆ.