ವಿಶ್ವಕಪ್ ಕ್ರಿಕೆಟ್ 2023: ಫೈನಲ್ ಪಂದ್ಯಕ್ಕೆ ಭಾರತ-ಪಾಕಿಸ್ತಾನ ನಡುವಿನ ಪಂದ್ಯದ ಪಿಚ್ ಬಳಕೆ

Update: 2023-11-18 15:42 GMT

ಪ್ಯಾಟ್ ಕುಮಿನ್ಸ್ \ Photo: ICC \ X

ಅಹಮದಾಬಾದ್: ವಿಶ್ವಕಪ್ ಕ್ರೀಡಾಕೂಟದ ಲೀಗ್ ಹಂತದಲ್ಲಿ ಭಾರತ ಮತ್ತು ಪಾಕಿಸ್ತಾನದ ನಡುವಿನ ಪಂದ್ಯಕ್ಕೆ ಬಳಕೆಯಾಗಿದ್ದ ಪಿಚ್ ಅನ್ನೇ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಫೈನಲ್ ಪಂದ್ಯಕ್ಕೂ ಬಳಸಲಾಗುತ್ತಿದೆ. ಪಂದ್ಯಕ್ಕೂ ಮುನ್ನಾ ದಿನವಾದ ಇಂದು ಪಿಚ್ ಪರಿಶೀಲನೆಗೆ ತೆರಳಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕುಮಿನ್ಸ್ ತೋರಿದ ವರ್ತನೆ ಸದ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ ಎಂದು PTI ಸುದ್ದಿ ಸಂಸ್ಥೆ ವರದಿ ಮಾಡಿದೆ. ಪಿಚ್ ಬಳಿ ತೆರಳಿದ ಅವರು ಫೊಟೋ ತೆಗೆದುಕೊಂಡಿರುವುದು ವೈರಲ್‌ ಆಗಿದೆ.

ಪಂದ್ಯದ ಆರಂಭಕ್ಕೂ ಮುನ್ನಾ ದಿನ ಉಭಯ ತಂಡಗಳ ನಾಯಕರು ಪಿಚ್ ಪರಿಶೀಲನೆ ನಡೆಸುವುದು ವಾಡಿಕೆಯ ಸಂಗತಿ. ಆದರೆ, ಪಿಚ್ ಕುರಿತು ಡ್ರೆಸಿಂಗ್ ರೂಂನಲ್ಲಿ ಕಾರ್ಯತಂತ್ರ ರೂಪಿಸಲು ಪಿಚ್ ನ ಫೊಟೋ ತೆಗೆದುಕೊಳ್ಳುವುದು ಕೊಂಚ ಅಸಹಜ ಸಂಗತಿಯೇ ಆಗಿದೆ. ರವಿವಾರ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳ ನಡುವೆ ನಡೆಯಲಿರುವ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ 22 ವರ್ಷದಷ್ಟು ಹಳೆಯದಾದ ಪಿಚ್ ಪರಿಶೀಲನೆಗೆ ತೆರಳಿದ್ದ ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕುಮಿನ್ಸ್ ಖಚಿತವಾಗಿ ಮಾಡಿದ್ದು ಅದನ್ನೆ. ಈ ದೊಡ್ಡ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ತಂಡವು ಪಿಚ್ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಂಡಿರುವಂತೆ ಕಾಣುತ್ತಿದೆ. ಈಗಾಗಲೇ ಭಾರತ ಮತ್ತು ಪಾಕಿಸ್ತಾನ ತಂಡದ ನಡುವಿನ ಪಂದ್ಯಕ್ಕೆ ಬಳಕೆಯಾಗಿರುವ ಪಿಚ್ ಅನ್ನು ಫೈನಲ್ ಪಂದ್ಯಕ್ಕೂ ಬಳಸುತ್ತಿರುವ ಕುರಿತು ಪ್ಯಾಟ್ ಕುಮಿನ್ಸ್ ರನ್ನು ಪ್ರಶ್ನಿಸಿದಾಗ, ಅವರು ರಕ್ಷಣಾತ್ಮಕ ಉತ್ತರದ ಮೊರೆ ಹೋದರು.

“ನಾನು ಅತ್ಯುತ್ತಮ ಪಿಚ್ ತಜ್ಞನಲ್ಲ. ಆದರೆ, ಈ ಪಿಚ್ ಸಾಕಷ್ಟು ದೃಢವಾಗಿರುವಂತೆ ಕಾಣುತ್ತಿದೆ. ಮೈದಾನದ ಸಿಬ್ಬಂದಿ ಕೇವಲ ಒಂದು ಬಾರಿ ನೀರು ಸಿಂಪಡಿಸಿದ್ದಾರೆ. ಹೀಗಾಗಿ ಇನ್ನು 24 ಗಂಟೆಯ ನಂತರ ಮತ್ತೆ ಪರಿಶೀಲನೆ ನಡೆಸುತ್ತೇನೆ. ಹೀಗಿದ್ದೂ, ಇದು ಒಳ್ಳೆಯ ವಿಕೆಟ್ ನಂತೆ ಭಾಸವಾಗುತ್ತಿದೆ. ಇದಕ್ಕೂ ಮುನ್ನ ಈ ಪಿಚ್ ನಲ್ಲಿ ಪಾಕಿಸ್ತಾನ ಆಡಿತ್ತು ಎಂದು ನನಗೆ ಅನ್ನಿಸುತ್ತಿದೆ” ಎಂದು ಭಾರತದ ಹೆಸರನ್ನು ಪ್ರಸ್ತಾಪಿಸದೆ ಪ್ಯಾಟ್ ಕುಮಿನ್ಸ್ ಪ್ರತಿಕ್ರಿಯಿಸಿದರು.

ಈಡನ್ ಗಾರ್ಡನ್ ಪಿಚ್ ನಲ್ಲಿ ಕೆಲವು ಬಾಲ್ ಗಳು ಬಲ ಬದಿಗೆ ತಿರುವು ತೆಗೆದುಕೊಳ್ಳುತ್ತಿದ್ದವು. ಆದರೆ, ಮೊಟೆರಾ ಪಿಚ್ ಆ ಬಗೆಯಲ್ಲಿಲ್ಲ ಎಂದು ಪ್ಯಾಟ್ ಕುಮಿನ್ಸ್ ವಿಶ್ವಾಸ ವ್ಯಕ್ತಪಡಿಸಿದರು.

ಈ ಪಂದ್ಯದ ಮೇಲೆ ಇಬ್ಬನಿ ಸಾಕಷ್ಟು ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಗುಜರಾತ್ ಕ್ರಿಕೆಟ್ ಅಸೋಸಿಯೇಷನ್ನ ಮೈದಾನದ ಸಿಬ್ಬಂದಿಗಳು ಶನಿವಾರ ಮಧ್ಯಾಹ್ನ ಇಬ್ಬನಿ ನಿರೋಧಕ ದ್ರವ ಔಷಧವನ್ನು ಸಿಂಪಡಿಸುತ್ತಿರುವುದು ಕಂಡು ಬಂದಿತು. ರಾತ್ರಿ ವೇಳೆಯಲ್ಲಿ ಸುರಿಯುವ ಇಬ್ಬನಿಯಿಂದ ಪಂದ್ಯದ ಕೊನೆಯ 20-25 ಓವರ್ ಗಳ ಮೇಲೆ ಪರಿಣಾಮವಾಗುವುದು ಇಲ್ಲಿ ಸಾಮಾನ್ಯ ಸಂಗತಿಯಾಗಿದೆ.

ಆಸ್ಟ್ರೇಲಿಯಾ ತಂಡಕ್ಕೆ ಶನಿವಾರ ಮಧ್ಯಾಹ್ನ ಪೂರ್ವಾಭ್ಯಾಸದ ಅವಧಿ ನಿಗದಿಯಾಗಿತ್ತಾದರೂ, ಆಸ್ಟ್ರೇಲಿಯಾ ತಂಡದ ನಾಯಕ ಪ್ಯಾಟ್ ಕುಮಿನ್ಸ್ ಬೆಳಗ್ಗೆ ಒಂಬತ್ತೂವರೆಗೆಲ್ಲ ನರೇಂದ್ರ ಮೋದಿ ಕ್ರೀಡಾಂಗಣಕ್ಕೆ ಆಗಮಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News