ಗಾಯದ ಸಮಸ್ಯೆ: ಐಪಿಎಲ್‌ನಿಂದ ಹೊರಗುಳಿದ ಡೆವೊನ್ ಕಾನ್ವೆ

Update: 2024-04-18 17:30 GMT

Devon Conway | Source: BCCI/IPL

ಚೆನ್ನೈ: ಗಾಯದ ಸಮಸ್ಯೆಯ ಕಾರಣಕ್ಕೆ ಪ್ರಸಕ್ತ ನಡೆಯುತ್ತಿರುವ ಐಪಿಎಲ್ ಟಿ-20 ಟೂರ್ನಮೆಂಟ್‌ನಿಂದ ಚೆನ್ನೈ ಸೂಪರ್ ಕಿಂಗ್ಸ್ ಬ್ಯಾಟರ್ ಡೆವೊನ್ ಕಾನ್ವೆ ಹೊರಗುಳಿದಿದ್ದಾರೆ.

ಕಳೆದ ಎರಡು ಐಪಿಎಲ್ ಋತುಗಳಲ್ಲಿ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿದ್ದ ನ್ಯೂಝಿಲ್ಯಾಂಡ್ ಬ್ಯಾಟರ್ ಕಾನ್ವೆ 23 ಪಂದ್ಯಗಳಲ್ಲಿ ಆಡಿ 9 ಅರ್ಧಶತಕಗಳ ಸಹಿತ ಒಟ್ಟು 924 ರನ್ ಗಳಿಸಿದ್ದರು. ಔಟಾಗದೆ 92 ಗರಿಷ್ಠ ವೈಯಕ್ತಿಕ ಸ್ಕೋರಾಗಿದೆ.

ಸಿಎಸ್‌ಕೆ ತಂಡ ಕಾನ್ವೆ ಬದಲಿಗೆ ಇಂಗ್ಲೆಂಡ್‌ನ ವೇಗದ ಬೌಲರ್ ರಿಚರ್ಡ್ ಗ್ಲೀಸನ್‌ರನ್ನು ಐಪಿಎಲ್‌ನ ಉಳಿದ ಪಂದ್ಯಗಳಿಗೆ ಸೇರಿಸಿಕೊಂಡಿದೆ.

ಬಲಗೈ ವೇಗದ ಬೌಲರ್ ಗ್ಲೀಸನ್ 6 ಟಿ-20 ಪಂದ್ಯಗಳಲ್ಲಿ ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿ 9 ವಿಕೆಟ್‌ಗಳನ್ನು ಕಬಳಿಸಿದ್ದರು. ಗ್ಲೀಸನ್ 90 ಟಿ-20 ಪಂದ್ಯಗಳಲ್ಲೂ ಆಡಿ 101 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಮೀಸಲು ಬೆಲೆ 50 ಲಕ್ಷ ರೂ.ಗೆ ಗ್ಲೀಸನ್ ಅವರು ಸಿಎಸ್‌ಕೆ ತಂಡವನ್ನು ಸೇರಿದ್ದಾರೆ.

ವೃತ್ತಿಪರ ಕ್ರಿಕೆಟಿಗೆ ತಡವಾಗಿ ಪ್ರವೇಶಿಸಿದ್ದ ಗ್ಲೀಸನ್ ತನ್ನ 34ನೇ ವಯಸ್ಸಿನಲ್ಲಿ 2022ರ ಜುಲೈನಲ್ಲಿ ಭಾರತದ ವಿರುದ್ಧ ಟಿ-20 ಪಂದ್ಯದಲ್ಲಿ ಅಂತರ್‌ರಾಷ್ಟ್ರೀಯ ಕ್ರಿಕೆಟಿಗೆ ಕಾಲಿಟ್ಟಿದ್ದರು.

Tags:    

Writer - ವಾರ್ತಾಭಾರತಿ

contributor

Editor - musaveer

contributor

Byline - ವಾರ್ತಾಭಾರತಿ

contributor

Similar News