ದುಲೀಪ್ ಟ್ರೋಫಿ ವೇಳಾಪಟ್ಟಿ ಪ್ರಕಟ | ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುವ ನಿರೀಕ್ಷೆ
ಹೊಸದಿಲ್ಲಿ : ಸೆಪ್ಟಂಬರ್ 5ರಿಂದ 22ರ ತನಕ ದುಲೀಪ್ ಟ್ರೋಫಿ ಆಡುವುದರೊಂದಿಗೆ 2024-25ರ ಸೀನಿಯರ್ ಆಟಗಾರರ ದೇಶೀಯ ಕ್ರಿಕೆಟ್ ಋತು ಆರಂಭವಾಗಲಿದೆ. ದುಲೀಪ್ ಟ್ರೋಫಿ ಟೂರ್ನಿಯಲ್ಲಿ ಭಾರತದ ಅಂತರರಾಷ್ಟ್ರೀಯ ಆಟಗಾರರು ಭಾಗವಹಿಸುವ ನಿರೀಕ್ಷೆ ಇದೆ.
ಈ ವರ್ಷ ದುಲೀಪ್ ಟ್ರೋಫಿಯನ್ನು ಯಾವುದೇ ನಾಕೌಟ್ ಪಂದ್ಯಗಳಿಲ್ಲದೆ ರೌಂಡ್-ರಾಬಿನ್ ಮಾದರಿಯ ಪಂದ್ಯಾವಳಿಯಲ್ಲಿ ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ಸಿ ಹಾಗೂ ಇಂಡಿಯಾ ಡಿ ತಂಡಗಳೊಂದಿಗೆ ಆಡಲಾಗುತ್ತದೆ. ಅಜಿತ್ ಅಗರ್ಕರ್ ನೇತೃತ್ವದ ರಾಷ್ಟ್ರೀಯ ಆಯ್ಕೆ ಸಮಿತಿಯು ತಂಡಗಳನ್ನು ಆಯ್ಕೆ ಮಾಡುತ್ತದೆ.
ಕೊನೆಯ ಋತುವಿನ ತನಕ ಪಂದ್ಯಾವಳಿಯನ್ನು ವಲಯ ಮಾದರಿಯಲ್ಲಿ ಆಡಲಾಗುತ್ತಿತ್ತು. ಇದರಲ್ಲಿ ಆರು ತಂಡಗಳಿದ್ದವು. ಕಳೆದ ವರ್ಷ ದಕ್ಷಿಣ ವಲಯವು ಫೈನಲ್‌ನಲ್ಲಿ ಪಶ್ಚಿಮ ವಲಯವನ್ನು ಸೋಲಿಸಿ ದುಲೀಪ್ ಟ್ರೋಫಿಯನ್ನು ಜಯಿಸಿತ್ತು.
ಮುಂಬರುವ ದುಲೀಪ್ ಟ್ರೋಫಿಯನ್ನು ಆಂಧ್ರಪ್ರದೇಶದ ಅನಂತಪುರದ ಎರಡು ತಾಣಗಳಲ್ಲಿ ಆಡಲಾಗುತ್ತದೆ. ಆದರೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಟೂರ್ನಿಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ. ಪಂದ್ಯಾವಳಿಯ ಮೊದಲ ಸುತ್ತನ್ನು ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಮ್‌ಗೆ ಸ್ಥಳಾಂತರಿಸುವ ಸಾಧ್ಯತೆಯಿದೆ.
ಪಂದ್ಯಾವಳಿಯ ಮೊದಲ ಪಂದ್ಯದಲ್ಲಿ ಶುಭಮನ್ ಗಿಲ್, ಕೆ.ಎಲ್.ರಾಹುಲ್, ರವಿಚಂದ್ರನ್ ಅಶ್ವಿನ್, ಶ್ರೇಯಸ್ ಅಯ್ಯರ್, ಅಕ್ಷರ್ ಪಟೇಲ್, ರವೀಂದ್ರ ಜಡೇಜ ಹಾಗೂ ಯಶಸ್ವಿ ಜೈಸ್ವಾಲ್ ಸಹಿತ ಕೆಲವು ಅಂತರರಾಷ್ಟ್ರೀಯ ತಾರೆಯರು ಭಾಗವಹಿಸುವ ನಿರೀಕ್ಷೆ ಇದೆ.
ದುಲೀಪ್ ಟ್ರೋಫಿ 2024: ವೇಳಾಪಟ್ಟಿ
ಸೆ.5-8: ಇಂಡಿಯಾ ಎ-ಇಂಡಿಯಾ ಬಿ-ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ(ಸ್ಥಳ ಬದಲಾಗುವ ಸಾಧ್ಯತೆ ಇದೆ)
ಸೆ.5-8: ಇಂಡಿಯಾ ಸಿ- ಇಂಡಿಯಾ ಡಿ-ಅನಂತಪುರದ ಎಸಿಎ ಎಡಿಸಿಎ ಗ್ರೌಂಡ್(ಸ್ಥಳ ಬದಲಾಗುವ ಸಾಧ್ಯತೆ ಇದೆ)
ಸೆ.12-15: ಇಂಡಿಯಾ ಎ- ಇಂಡಿಯಾ ಡಿ- ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ
ಸೆ.12-15: ಇಂಡಿಯಾ ಬಿ- ಇಂಡಿಯಾ ಸಿ-ಎಸಿಎ ಎಡಿಸಿಎ ಗ್ರೌಂಡ್, ಅನಂತಪುರ
ಸೆ.19-22: ಇಂಡಿಯಾ ಎ-ಇಂಡಿಯಾ ಸಿ- ರೂರಲ್ ಡೆವಲಪ್‌ಮೆಂಟ್ ಟ್ರಸ್ಟ್ ಸ್ಟೇಡಿಯಮ್, ಅನಂತಪುರ
ಸೆ.19-22: ಇಂಡಿಯಾ ಬಿ-ಇಂಡಿಯಾ ಡಿ- ಎಸಿಎ ಎಡಿಸಿಎ ಗ್ರೌಂಡ್, ಅನಂತಪುರ