ಡಿಸೆಂಬರ್ 21ರಂದು ಭಾರತದ ಕುಸ್ತಿ ಫೆಡರೇಶನ್ ಚುನಾವಣೆ
ಹೊಸದಿಲ್ಲಿ: ಸಾಕಷ್ಟು ವಿಳಂಬವಾಗಿರುವ ಭಾರತದ ಕುಸ್ತಿ ಫೆಡರೇಶನ್(ಡಬ್ಲ್ಯುಎಫ್‌ಐ) ಚುನಾವಣೆಯು ಡಿಸೆಂಬರ್ 21ರಂದು ನಡೆಯಲಿದ್ದು, ಅದೇ ದಿನ ಫಲಿತಾಂಶವನ್ನು ಪ್ರಕಟಿಸಲಾಗುವುದು ಎಂದು ಚುನಾವಣಾಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
ಮತದಾನ, ಮತಗಳ ಎಣಿಕೆ ಹಾಗೂ ಫಲಿತಾಂಶಗಳ ಘೋಷಣೆಯು ಒಂದೇ ದಿನ ನಡೆಯಲಿದೆ. ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್‌ನಲ್ಲಿ ಬಾಕಿ ಇರುವ ರಿಟ್ ಅರ್ಜಿಯ ಫಲಿತಾಂಶಕ್ಕೆ ಚುನಾವಣಾ ಫಲಿತಾಂಶ ಒಳಪಟ್ಟಿರುತ್ತದೆ ಎಂದು ಚುನಾವಣಾಧಿಕಾರಿಗಳ ಕಚೇರಿಯಿಂದ ಹೊರಡಿಸಲಾದ ಹೇಳಿಕೆಯಲ್ಲಿ ನ್ಯಾಯಮೂರ್ತಿ(ನಿವೃತ್ತ)ಎಂ.ಎಂ. ಕುಮಾರ್ ಹೇಳಿದ್ದಾರೆ.
ಪಂಜಾಬ್ ಹಾಗೂ ಹರ್ಯಾಣ ಹೈಕೋರ್ಟ್ ಡಬ್ಲ್ಯುಎಫ್‌ಐ ಚುನಾವಣೆಗೆ ಈ ವರ್ಷದ ಆಗಸ್ಟ್ 11ರಂದು ತಡೆಯಾಜ್ಞೆ ನೀಡಿತ್ತು. ಹೀಗಾಗಿ ಆಗಸ್ಟ್ 12ರಂದು ಮತದಾನ ನಡೆಸಲಾಗಲಿಲ್ಲ.ಸುಪ್ರೀಂಕೋಟ್ ತಡೆಯಾಜ್ಞೆ ತೆರವುಗೊಳಿಸಿದೆ. ಹೀಗಾಗಿ ಮುಂದಿನ ಪರಿಷ್ಕೃತ ವೇಳಾಪಟ್ಟಿಯ ಪ್ರಕಾರ ಮತದಾನದಂತಹ ಉಳಿದ ಹಂತಗಳು ಇದೀಗ ಡಿಸೆಂಬರ್ 21ರಂದು ಪುನರಾರಂಭಗೊಳ್ಳಲಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಒಲಿಂಪಿಕ್ಸ್ ಪದಕ ವಿಜೇತರಾದ ಬಜರಂಗ್ ಪುನಿಯಾ ಹಾಗೂ ಸಾಕ್ಷಿ ಮಲಿಕ್ ಸೇರಿದಂತೆ ಹಲವಾರು ಕುಸ್ತಿಪಟುಗಳು ದಿಲ್ಲಿಯ ಜಂತರ್‌ಮಂತರ್‌ನಲ್ಲಿ ಎರಡು ತಿಂಗಳಿಗೂ ಹೆಚ್ಚು ಸಮಯ ಬಿಜೆಪಿ ಸಂಸದ ಬ್ರಿಜ್‌ಭೂಷಣ್ ಸಿಂಗ್ ವಿರುದ್ಧ ಮಹಿಳಾ ಕುಸ್ತಿಪಟುಗಳ ಮೇಲೆ ಲೈಂಗಿಕ ಕಿರುಕುಳ ಆರೋಪ ಹೊರಿಸಿ ಪ್ರತಿಭಟನೆ ನಡೆಸಿದ್ದರು.
ಜುಲೈನಲ್ಲಿ ನಡೆಯಬೇಕಾಗಿದ್ದ ಚುನಾವಣಾ ಪ್ರಕ್ರಿಯೆಯು ನ್ಯಾಯಾಲಯದ ಪ್ರಕರಣಗಳಿಂದಾಗಿ ವಿಳಂಬವಾಗಿದೆ. ಇದು ಅಂತರ್‌ರಾಷ್ಟ್ರೀಯ ಕುಸ್ತಿ ಫೆಡರೇಶನ್, ಯುನೈಟೆಡ್ ವರ್ಲ್ಡ್ ವ್ರೆಸ್ಲಿಂಗ್(ಯುಡಬ್ಲ್ಯುಡಬ್ಲ್ಯು)ನಿಂದ ಡಬ್ಲ್ಯುಎಫ್‌ಐ ಅನ್ನು ಅಮಾನತುಗೊಳಿಸುವುದಕ್ಕೆ ಕಾರಣವಾಯಿತು. ರಾಷ್ಟ್ರೀಯ ಕುಸ್ತಿ ಸಂಸ್ಥೆಯನ್ನು ಅಮಾನತುಗೊಳಿಸಿದ್ದರಿಂದ ಭಾರತದ ಕುಸ್ತಿಪಟುಗಳು ಯುಡಬ್ಲ್ಯುಡಬ್ಲ್ಯು ಧ್ವಜದ ಅಡಿಯಲ್ಲಿ ಅಂತರ್‌ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸುವುದನ್ನು ಮುಂದುವರೆಸಿದ್ದಾರೆ.