ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲು ಇಂಗ್ಲೆಂಡ್ ಬೌಲರ್ ಆ್ಯಂಡರ್ಸನ್ ನಿರ್ಧಾರ
ಲಂಡನ್: ಇಂಗ್ಲೆಂಡ್ ಕ್ರಿಕೆಟ್ ತಂಡದ ಹಿರಿಯ ಆಟಗಾರ ಜೇಮ್ಸ್ ಆ್ಯಂಡರ್ಸನ್ ಜುಲೈನಲ್ಲಿ ಲಾರ್ಡ್ಸ್ ಕ್ರೀಡಾಂಗಣದಲ್ಲಿ ವೆಸ್ಟ್‌ಇಂಡೀಸ್ ವಿರುದ್ಧ ನಡೆಯಲಿರುವ ಮೊದಲ ಟೆಸ್ಟ್ ಪಂದ್ಯದ ನಂತರ ಟೆಸ್ಟ್ ಕ್ರಿಕೆಟ್‌ನಿಂದ ನಿವೃತ್ತಿಯಾಗಲಿದ್ದಾರೆ. ವೇಗದ ಬೌಲರ್ ಆ್ಯಂಡರ್ಸನ್ ಶನಿವಾರ ಈ ನಿರ್ಧಾರವನ್ನು ತಿಳಿಸಿದ್ದಾರೆ.
ಜುಲೈನಲ್ಲಿ 42ನೇ ವಯಸ್ಸಿಗೆ ಕಾಲಿಡಲಿರುವ ಆ್ಯಂಡರ್ಸನ್ ಟೆಸ್ಟ್ ಇತಿಹಾಸದಲ್ಲಿ ಅತ್ಯಂತ ಯಶಸ್ವಿ ವೇಗದ ಬೌಲರ್ ಆಗಿದ್ದಾರೆ. ಇಂಗ್ಲೆಂಡ್ ಪರ 197 ಪಂದ್ಯಗಳಲ್ಲಿ 700 ವಿಕೆಟ್‌ಗಳನ್ನು ಉರುಳಿಸಿ ದಾಖಲೆ ಬರೆದಿದ್ದಾರೆ.
ಆ್ಯಂಡರ್ಸನ್ ಅವರು ಸಾರ್ವಕಾಲಿಕ ಶ್ರೇಷ್ಠ ಬೌಲರ್‌ಗಳ ಪಟ್ಟಿಯಲ್ಲಿ ಶ್ರೀಲಂಕಾದ ಸ್ಪಿನ್ ಗಾರೂಡಿಗ ಮುತ್ತಯ್ಯ ಮುರಳೀಧರನ್(800 ವಿಕೆಟ್)ಹಾಗೂ ಆಸ್ಟ್ರೇಲಿಯದ ದಿಗ್ಗಜ ಶೇನ್ ವಾರ್ನ್(708 ವಿಕೆಟ್)ನಂತರ ಮೂರನೇ ಸ್ಥಾನದಲ್ಲಿದ್ದಾರೆ.
ನನ್ನ ದೇಶವನ್ನು 20 ವರ್ಷಗಳ ಕಾಲ ಪ್ರತಿನಿಧಿಸಿದ್ದೇನೆಂಬ ವಿಚಾರವನ್ನು ನಂಬಲಾಗುತ್ತಿಲ್ಲ. ನಾನು ಬಾಲ್ಯದಿಂದಲೂ ಇಷ್ಟಪಡುತ್ತಿದ್ದ ಆಟವನ್ನು ಆಡುತ್ತಿದ್ದೇನೆ. ನಾನು ಇಂಗ್ಲೆಂಡ್ ತಂಡದಿಂದ ನಿವೃತ್ತಿಯಾದ ನಂತರ ತುಂಬಾ ಕಳೆದುಕೊಳ್ಳಲಿದ್ದೇನೆ. ನಿವೃತ್ತಿಯಾಗಲು ಹಾಗೂ ಇತರರಿಗೆ ಅವರ ಕನಸುಗಳನ್ನು ನನಸಾಗಿಸಲು ಇದು ಸರಿಯಾದ ಸಮಯ ಎಂದು ನನಗೆ ಗೊತ್ತಿದೆ ಎಂದು ಆ್ಯಂಡರ್ಸನ್ ಹೇಳಿದ್ದಾರೆ.
ವೆಸ್ಟ್‌ಇಂಡೀಸ್ ವಿರುದ್ಧ ಇಂಗ್ಲೆಂಡ್‌ನ ಮೊದಲ ಟೆಸ್ಟ್ ಪಂದ್ಯವು ಜುಲೈ 10ರಿಂದ 14ರ ತನಕ ನಡೆಯಲಿದೆ.
2003ರಲ್ಲಿ ಟೆಸ್ಟ್ ಕ್ರಿಕೆಟ್‌ಗೆ ಪಾದಾರ್ಪಣೆಗೈದಿರುವ ಆ್ಯಂಡರ್ಸನ್ ಗರಿಷ್ಠ ಟೆಸ್ಟ್ ಪಂದ್ಯಗಳನ್ನು ಆಡಿರುವ ಸಾರ್ವಕಾಲಿಕ ಶ್ರೇಷ್ಠ ಆಟಗಾರರ ಪಟ್ಟಿಯಲ್ಲಿ ಬ್ಯಾಟಿಂಗ್ ದಂತಕತೆ ಸಚಿನ್ ತೆಂಡುಲ್ಕರ್ ನಂತರ ಎರಡನೇ ಸ್ಥಾನದಲ್ಲಿದ್ದಾರೆ. ತೆಂಡುಲ್ಕರ್ ಭಾರತದ ಪರ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ.
ಸ್ವಿಂಗ್ ಸ್ಪೆಷಲಿಸ್ಟ್ ಆ್ಯಂಡರ್ಸನ್ 194 ಏಕದಿನ ಅಂತರ್‌ರಾಷ್ಟ್ರೀಯ ಪಂದ್ಯ ಹಾಗೂ 19 ಟ್ವೆಂಟಿ-20 ಪಂದ್ಯಗಳನ್ನು ಆಡಿದ್ದಾರೆ. 2015ರಲ್ಲಿ ಏಕದಿನ ಹಾಗೂ ಟಿ-20 ಪಂದ್ಯಗಳಿಂದ ನಿವೃತ್ತಿಯಾಗಿರುವ ಆ್ಯಂಡರ್ಸನ್ ಅದೇ ವರ್ಷ ಇಯಾನ್ ಬೋಥಮ್ ಅವರ 383 ವಿಕೆಟ್ ದಾಖಲೆಯನ್ನು ಮುರಿದು ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್ ಪಡೆದ ಸಾಧನೆ ಮಾಡಿದ್ದರು.