ಎಫ್ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ ; ಭಾರತವನ್ನು ಸೋಲಿಸಿದ ಬೆಲ್ಜಿಯಮ್

Update: 2023-12-03 17:37 GMT

Image: Twitter X

ಸಾಂಟಿಯಾಗೊ (ಚಿಲಿ): ಚಿಲಿ ದೇಶದ ರಾಜಧಾನಿ ಸಾಂಟಿಯಾಗೊದಲ್ಲಿ ನಡೆಯುತ್ತಿರುವ ಎಫ್ಐಎಚ್ ಜೂನಿಯರ್ ಮಹಿಳಾ ಹಾಕಿ ವಿಶ್ವಕಪ್ನಲ್ಲಿ ಶನಿವಾರ ಬೆಲ್ಜಿಯಮ್ ತಂಡವು ಭಾರತವನ್ನು 3-2 ಗೋಲುಗಳಿಂದ ಸೋಲಿಸಿದೆ.

‘ಸಿ’ ಗುಂಪಿನ ತೀವ್ರ ಹಣಾಹಣಿಯ ಪಂದ್ಯದಲ್ಲಿ ಅನು ಬಾರಿಸಿದ ಅವಳಿ ಗೋಲುಗಳು ವ್ಯರ್ಥವಾದವು. ಇದು ಈ ಪಂದ್ಯಾವಳಿಯಲ್ಲಿ ಭಾರತದ ಸತತ ಎರಡನೇ ಸೋಲಾಗಿದೆ.

ಅನು ನಾಲ್ಕು ನಿಮಿಷಗಳ ಅಂತರದಲ್ಲಿ ಎರಡು ಗೋಲುಗಳನ್ನು ಬಾರಿಸಿ ಅಂಕಪಟ್ಟಿಯನ್ನು ಸಮಬಲಗೊಳಿಸಿದರು. ಅವರು 47ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ನಿಂದ ಗೋಲು ಬಾರಿಸಿದರೆ, 51ನೇ ನಿಮಿಷದಲ್ಲಿ ಪೆನಾಲ್ಟಿ ಸ್ಟ್ರೋಕ್ ಮೂಲಕ ಗೋಲು ಗಳಿಸಿದರು.

ಅದಕ್ಕೂ ಮೊದಲು, ಐದನೇ ನಿಮಿಷದಲ್ಲಿ ನೋವಾ ಶ್ರೋವರ್ಸ್ ಮತ್ತು 42ನೇ ನಿಮಿಷದಲ್ಲಿ ಫ್ರಾನ್ಸ್ ಡಿ ಮೋಟ್ ಬಾರಿಸಿದ ಗೋಲುಗಳ ಮೂಲಕ ಬೆಲ್ಜಿಯಮ್ 2-0 ಮುನ್ನಡೆಯಲ್ಲಿತ್ತು.

ಅನುವಿನ ಸಾಹಸದಿಂದಾಗಿ ಭಾರತ ಅಂಕಪಟ್ಟಿಯನ್ನು 2-2ರ ಸಮಬಲಕ್ಕೆ ತಂದಿತು. ಆದರೆ, ಅದು ಭಾರತದ ದಿನವಾಗಿರಲಿಲ್ಲ. 52ನೇ ನಿಮಿಷದಲ್ಲಿ ಬೆಲ್ಜಿಯಮ್ನ ಆ್ಯಸ್ಟ್ರಿಡ್ ಬೊನಾಮಿ ಪೆನಾಲ್ಟಿ ಸ್ಟ್ರೋಕ್ ಮೂಲಕ ತಂಡದ ವಿಜಯದ ಗೋಲನ್ನು ಬಾರಿಸಿದರು.

ಶುಕ್ರವಾರ ರಾತ್ರಿ ಜರ್ಮನಿಯು ಭಾರತವನ್ನು 4-3 ಗೋಲುಗಳಿಂದ ಸೋಲಿಸಿತ್ತು. ಆರಂಭದಲ್ಲಿ ಎರಡು ಗೋಲುಗಳ ಮುನ್ನಡೆಯಲ್ಲಿದ್ದರೂ ಕೊನೆಯವರೆಗೂ ಅದನ್ನು ಕಾಯ್ದುಕೊಂಡು ಹೋಗಲು ಭಾರತೀಯ ಮಹಿಳೆಯರಿಗೆ ಸಾಧ್ಯವಾಗಲಿಲ್ಲ.

ಭಾರತೀಯ ಮಹಿಳೆಯರು, ಕೆನಡವನ್ನು 12-0 ಗೋಲುಗಳಿಂದ ಸೋಲಿಸುವ ಮೂಲಕ ತಮ್ಮ ಅಭಿಯಾನವನ್ನು ಭರ್ಜರಿಯಾಗಿಯೇ ಆರಂಭಿಸಿದ್ದರು.

ಭಾರತ ಈಗ ಮೂರು ಪಂದ್ಯಗಳಿಂದ ಮೂರು ಅಂಕಗಳನ್ನು ಗಳಿಸಿದ್ದು, ‘ಸಿ’ ಗುಂಪಿನಲ್ಲಿ ಎರಡನೇ ಸ್ಥಾನದಲ್ಲಿದೆ. ಅದೇ ವೇಳೆ, ತಾನಾಡಿರುವ ಎಲ್ಲಾ ಮೂರು ಪಂದ್ಯಗಳನ್ನು ಗೆದ್ದಿರುವ ಬೆಲ್ಜಿಯಮ್ ಗುಂಪಿನಲ್ಲಿ ಅಗ್ರ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News