ನಾಳೆ ದಕ್ಷಿಣ ಆಫ್ರಿಕಾ ವಿರುದ್ಧ ಮೊದಲ ಏಕದಿನ : ಗೆಲುವಿನ ಆರಂಭದತ್ತ ಭಾರತದ ಚಿತ್ತ
ಜೋಹಾನ್ಸ್ ಬರ್ಗ್: ಯುವ ಆಟಗಾರರನ್ನು ಒಳಗೊಂಡ ಭಾರತ ಕ್ರಿಕೆಟ್ ತಂಡ ರವಿವಾರ ವಾಂಡರರ್ಸ್ ಸ್ಟೇಡಿಯಮ್ ನಲ್ಲಿ ನಡೆಯಲಿರುವ ಮೊದಲ ಏಕದಿನ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆತಿಥೇಯ ದಕ್ಷಿಣ ಆಫ್ರಿಕಾ ತಂಡವನ್ನು ಎದುರಿಸಲಿದ್ದು, ಮೂರು ಪಂದ್ಯಗಳ ಸರಣಿಯಲ್ಲಿ ಗೆಲುವಿನ ಆರಂಭ ಪಡೆಯುವತ್ತ ಚಿತ್ತಹರಿಸಿದೆ.
ಟ್ವೆಂಟಿ-20 ವಿಶ್ವಕಪ್ ಹತ್ತಿರವಿರುವಾಗ ಏಕದಿನ ಸರಣಿ ಆಯೋಜನೆಯ ಕುರಿತಂತೆ ಕೆಲವು ಪ್ರಶ್ನೆಗಳಿದ್ದರೂ 2025ರಲ್ಲಿ ನಡೆಯುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ತಯಾರಿಗೆ ಭಾರತದ ಯುವ ಆಟಗಾರರಿಗೆ ಈ ಸರಣಿಯು ಮುಖ್ಯವಾಗಿದೆ. ಯುವಕರು ಈ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ನಿರೀಕ್ಷೆಯಲ್ಲಿದ್ದಾರೆ.
ಕಳೆದ 15 ವರ್ಷಗಳಿಂದ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ಸೀಮಿತ ಓವರ್ ಮಾದರಿಯ ಕ್ರಿಕೆಟ್ ನಲ್ಲಿ ಗಮನಾರ್ಹ ಕೊಡುಗೆ ನೀಡಿದ್ದಾರೆ. ಈ ಇಬ್ಬರು ಆಟಗಾರರು ವೃತ್ತಿಜೀವನದ ಅಂತಿಮ ಘಟ್ಟ ತಲುಪಿದ್ದು, ಯುವ ಆಟಗಾರರು ಈ ಇಬ್ಬರು ಆಟಗಾರರಿಂದ ತೆರವಾಗಲಿರುವ ಸ್ಥಾನ ತುಂಬಬೇಕಾಗಿದೆ.
ಮೂರು ಪಂದ್ಯಗಳ ಸರಣಿಯಲಿ ಭಾರತದ ನಾಯಕತ್ವವಹಿಸಿರುವ ಕೆ.ಎಲ್.ರಾಹುಲ್ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದಾರೆ.
ಕರ್ನಾಟಕದ ಮಂಗಳೂರು ಮೂಲದ ವಿಕೆಟ್ ಕೀಪರ್-ಬ್ಯಾಟರ್ ಈಗಾಗಲೇ ಭಾರತದ ನಾಯಕನಾಗಿ ಗಮನ ಸೆಳೆದಿದ್ದಾರೆ. ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಸರಣಿ ಜಯಿಸಿದರೆ ದೀರ್ಘ ಸಮಯದ ತನಕ ನಾಯಕನ ಸ್ಥಾನ ಉಳಿಸಿಕೊಳ್ಳುವ ಅವಕಾಶ ಲಭಿಸಲಿದೆ.
ನಿರ್ದಿಷ್ಟ ಆಟಗಾರರು ಈಗಾಗಲೇ ಸೀಮಿತ ಓವರ್ ಕ್ರಿಕೆಟ್ ವ್ಯವಸ್ಥೆಯಲ್ಲಿ ತಮ್ಮ ಶಕ್ತಿಯನ್ನು ಪ್ರದರ್ಶಿಸಿದ್ದು ಇನ್ನು ಕೆಲವರು ರಾಹುಲ್, ಋತುರಾಜ್ ಗಾಯಕ್ವಾಡ್ ಹಾಗೂ ಶ್ರೇಯಸ್ ಅಯ್ಯರ್ ರೊಂದಿಗೆ ಸೇರಲು ಕಾತರದಿಂದಿದ್ದಾರೆ.
ಈ ವರ್ಷ ಟ್ವೆಂಟಿ-20 ಕ್ರಿಕೆಟ್ ನಲ್ಲಿ ಪರಿಣಾಮಕಾರಿ ಪ್ರದರ್ಶನದಿಂದ ಎಲ್ಲರ ಗಮನ ಸೆಳೆದಿದ್ದ ರಿಂಕು ಸಿಂಗ್ 50 ಓವರ್ ಮಾದರಿ ಕ್ರಿಕೆಟ್ ನಲ್ಲಿ ಹೇಗೆ ಆಡಬಹುದೆಂಬ ಕುತೂಹಲ ಟೀಮ್ ಮ್ಯಾನೇಜ್ ಮೆಂಟಿಗಿದೆ.
ತಿಲಕ್ ವರ್ಮಾ ಜೊತೆಗೆ ರಜತ್ ಪಾಟಿದಾರ್ ದೇಶೀಯ ಕ್ರಿಕೆಟ್ ನಲ್ಲಿ ರನ್ ಹೊಳೆ ಹರಿಸಿದ್ದು, ಭಾರದ್ವಾಜ್ ಸಾಯಿ ಸುದರ್ಶನ್ ವಿಜಯ ಹಝಾರೆ ಟ್ರೋಫಿಯಲ್ಲಿ ತಮಿಳುನಾಡು ಪರ ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ಅವರಿಗೆ ಈ ತನಕ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡಲು ಅವಕಾಶ ಲಭಿಸಿಲ್ಲ.
ಅನ್ರಿಚ್ ನೋರ್ಟ್ಜೆ ಹಾಗೂ ಕಾಗಿಸೊ ರಬಾಡ ಅನುಪಸ್ಥಿತಿಯಲ್ಲಿ ದುರ್ಬಲವಾಗಿ ಕಂಡುಬಂದಿರುವ ದಕ್ಷಿಣ ಆಫ್ರಿಕಾ ಬೌಲಿಂಗ್ ದಾಳಿಯನ್ನು ಯುವ ಆಟಗಾರರು ದಿಟ್ಟವಾಗಿ ಎದುರಿಸಬಲ್ಲರು ಎಂದು ಭಾರತದ ಟೀಮ್ ಮ್ಯಾನೇಜ್ಮೆಂಟ್ ವಿಶ್ವಾಸ ಇಟ್ಟುಕೊಂಡಿದೆ.
ಇತ್ತೀಚೆಗೆ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಬೌಲಿಂಗ್ ವಿಭಾಗಕ್ಕೆ ಬೆಂಬಲವಾಗಿ ನಿಂತಿದ್ದ ತ್ರಿವಳಿ ವೇಗಿಗಳಾದ ಜಸ್ಪ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ ಏಕದಿನ ಸರಣಿಗೆ ಲಭ್ಯವಿಲ್ಲ.
ಬಿಸಿಸಿಐ ವೈದ್ಯಕೀಯ ತಂಡ ದೈಹಿಕ ಕ್ಷಮತೆಯ ಕುರಿತು ಪ್ರಮಾಣಪತ್ರ ನೀಡಲು ನಿರಾಕರಿಸಿದ ನಂತರ ಶಮಿ ದಕ್ಷಿಣ ಆಫ್ರಿಕಾ ಪ್ರವಾಸದಿಂದ ಹೊರಗುಳಿದಿದ್ದಾರೆ. ಬುಮ್ರಾ ಹಾಗೂ ಸಿರಾಜ್ ಟೆಸ್ಟ್ ಸರಣಿಯಲ್ಲಿ ಆಡಲಿದ್ದಾರೆ.
ಹಿರಿಯ ಬೌಲರ್ ಗಳ ಅನುಪಸ್ಥಿತಿಯಲ್ಲಿ ಭಾರತದ ವೇಗದ ಬೌಲಿಂಗ್ ವಿಭಾಗವನ್ನು ಅವೇಶ್ ಖಾನ್,ಮುಕೇಶ್ ಕುಮಾರ್ ಹಾಗೂ ಅರ್ಷದೀಪ್ ಸಿಂಗ್ ಮುನ್ನಡೆಸುವ ಹೊಣೆ ಹೊತ್ತಿದ್ದಾರೆ. ದಕ್ಷಿಣ ಆಫ್ರಿಕಾ ವಿರುದ್ಧ ವಾಂಡರರ್ಸ್ ಸ್ಟೇಡಿಯಮ್ ನಲ್ಲಿ ಗುರುವಾರ ನಡೆದ ಕೊನೆಯ ಟಿ-20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಭಾರತದ ಯುವ ಬೌಲರ್ ಗಳು ಅತ್ಯುತ್ತಮ ಪ್ರದರ್ಶನ ನೀಡಿದ್ದು, ಇದೇ ಪ್ರದರ್ಶನ ಮುಂದುವರಿಸುವ ಅಗತ್ಯವಿದೆ.
3ನೇ ಟಿ-20 ಪಂದ್ಯದಲ್ಲಿ ಜೋಹಾನ್ಸ್ ಬರ್ಗ್ ಪಿಚ್ ಸ್ಪಿನ್ನರ್ ಗಳಿಗೆ ನೆರವಾಗಿತ್ತು. ಕುಲದೀಪ್ ಯಾದವ್, ಅಕ್ಷರ್ ಪಟೇಲ್ ಹಾಗೂ ಯಜುವೇಂದ್ರ ಚಹಾಲ್ರಂತಹ ಸ್ಪಿನ್ನರ್ ಗಳನ್ನು ಹೊಂದಿರುವ ಭಾರತಕ್ಕೆ ಇದು ಸಂತೋಷದ ವಿಚಾರವಾಗಿದೆ.
ವಿಜಯ್ ಹಝಾರೆ ಟ್ರೋಫಿಯಲ್ಲಿ ಹರ್ಯಾಣದ ಪರ ಕೆಲವು ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದ್ದ ಲೆಗ್ ಸ್ಪಿನ್ನರ್ ಚಹಾಲ್ ತಾನು ಸೀಮಿತ ಓವರ್ ಕ್ರಿಕೆಟ್ ನಲ್ಲಿ ಪ್ರಮುಖ ಆಟಗಾರನೆಂದು ನಿರೂಪಿಸುವ ವಿಶ್ವಾಸದಲ್ಲಿದ್ದಾರೆ. ಚಹಾಲ್ ಅವರು ವಿಶ್ವಕಪ್ ನಲ್ಲಿ ಭಾರತದ ತಂಡದಲ್ಲಾಗಲಿ, ಸ್ವದೇಶದಲ್ಲಿ ನಡೆಯಲಿರುವ ಟಿ-20 ತಂಡದಲ್ಲಾಗಲಿ ಸ್ಥಾನ ಪಡೆದಿಲ್ಲ. 33ರ ಹರೆಯದ ಚಹಾಲ್ ಪ್ರಸಕ್ತ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿ ಆಯ್ಕೆಗಾರರ ಗಮನ ಸೆಳೆಯುವ ನಿರೀಕ್ಷೆಯಲ್ಲಿದ್ದಾರೆ.
ತಂಡಗಳು
ಭಾರತ: ಕೆ.ಎಲ್.ರಾಹುಲ್(ನಾಯಕ, ವಿಕೆಟ್ ಕೀಪರ್), ಋತುರಾಜ್ ಗಾಯಕ್ವಾಡ್, ಸಾಯಿ ಸುದರ್ಶನ್, ತಿಲಕ್ ವರ್ಮಾ, ರಜತ್ ಪಾಟಿದಾರ್, ರಿಂಕು ಸಿಂಗ್, ಶ್ರೇಯಸ್ ಅಯ್ಯರ್, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ವಾಶಿಂಗ್ಟನ್ ಸುಂದರ್, ಕುಲದೀಪ್ ಯಾದವ್, ಯಜುವೇಂದ್ರ ಚಹಾಲ್, ಮುಕೇಶ್ ಕುಮಾರ್, ಅವೇಶ್ ಖಾನ್, ಅರ್ಷದೀಪ್ ಸಿಂಗ್ ಹಾಗೂ ಆಕಾಶ್ದೀಪ್.
ದಕ್ಷಿಣ ಆಫ್ರಿಕಾ: ಐಡೆನ್ ಮಾರ್ಕ್ರಮ್(ನಾಯಕ), ಒಟ್ನಿಯೆಲ್ ಬಾರ್ಟ್ಮ್ಯಾನ್, ನಾಂಡ್ರೆ ಬರ್ಗೆರ್, ಟೋನಿ ಡಿ ರೊರ್ಝಿ, ರೀಝಾ ಹೆಂಡ್ರಿಕ್ಸ್, ಹೆನ್ರಿಕ್ ಕ್ಲಾಸೆನ್, ಕೇಶವ ಮಹಾರಾಜ್, ಮಿಹ್ಲಾಲಿ ಎಂಪೊಂಗ್ವಾನಾ, ಡೇವಿಡ್ ಮಿಲ್ಲರ್, ವಿಯಾನ್ ಮುಲ್ದರ್, ಆಂಡಿಲ್ ಫೆಹ್ಲುಕ್ವಾಯೊ, ತಬ್ರೈಝ್ ಶಮ್ಸಿ, ರಾಸಿ ವಾನ್ಡರ್ ಡುಸೆನ್, ಕೈಲ್ ವೆರ್ರೆನ್, ಲಿಝಾಡ್ ವಿಲಿಯಮ್ಸ್.
ಪಂದ್ಯ ಆರಂಭದ ಸಮಯ: ಮಧ್ಯಾಹ್ನ 1:30
(ಭಾರತದ ಕಾಲಮಾನ)