ಫ್ರಾನ್ಸ್‌ ನ ವಿಶ್ವಕಪ್ ವಿಜೇತ ಫುಟ್ಬಾಲ್ ಆಟಗಾರ ರಾಫೆಲ್ ವರಾನ್ ನಿವೃತ್ತಿ

Update: 2024-09-25 16:21 GMT

ರಾಫೆಲ್ ವರಾನ್ | PC : PTI 

ಪ್ಯಾರಿಸ್ : 2018ರಲ್ಲಿ ಫಿಫಾ ವಿಶ್ವಕಪ್ ವಿಜೇತ ಫ್ರಾನ್ಸ್ ತಂಡದ ಸದಸ್ಯರಾಗಿದ್ದ ರಾಫೆಲ್ ವರಾನ್ ಬುಧವಾರ ತನ್ನ 31ನೇ ವಯಸ್ಸಿನಲ್ಲಿ ಫುಟ್ಬಾಲ್‌ನಿಂದ ನಿವೃತ್ತಿ ಪ್ರಕಟಿಸಿದ್ದಾರೆ.

2013ರಿಂದ 22ರ ತನಕ ಫ್ರಾನ್ಸ್ ಪರ 93 ಪಂದ್ಯಗಳನ್ನು ಆಡಿರುವ ವರಾನ್ ಅವರು ರಶ್ಯದಲ್ಲಿ 2018ರಲ್ಲಿ ಫ್ರಾನ್ಸ್ ತಂಡ ವಿಶ್ವಕಪ್ ಗೆಲ್ಲುವಲ್ಲಿ ಹಾಗೂ 2022ರಲ್ಲಿ ಖತರ್‌ನಲ್ಲಿ ನಡೆದ ವಿಶ್ವಕಪ್‌ನಲ್ಲಿ ರನ್ನರ್ಸ್ ಅಪ್ ಎನಿಸಿಕೊಳ್ಳಲು ಪ್ರಮುಖ ಪಾತ್ರವಹಿಸಿದ್ದರು.

2011ರಲ್ಲಿ ರಿಯಲ್ ಮ್ಯಾಡ್ರಿಡ್ ಸೇರ್ಪಡೆಯಾಗಿದ್ದ ವರಾನ್ 360 ಪಂದ್ಯಗಳನ್ನು ಆಡಿದ್ದರು. ಮ್ಯಾಡ್ರಿಡ್ ತಂಡ ಮೂರು ಲಾ ಲಿಗ ಟ್ರೋಫಿಗಳು ಹಾಗೂ 4 ಚಾಂಪಿಯನ್ಸ್ ಲೀಗ್ ಪ್ರಶಸ್ತಿಗಳನ್ನು ಗೆಲ್ಲಲು ನೆರವಾಗಿದ್ದರು. 2021ರಲ್ಲಿ ಪ್ರೀಮಿಯರ್ ಲೀಗ್ ತಂಡ ಮ್ಯಾಂಚೆಸ್ಟರ್ ಯುನೈಟೆಡ್‌ನೊಂದಿಗೆ ಸಹಿ ಹಾಕಿದ್ದರು.

ಸೆಂಟ್ರಲ್ ಡಿಫೆಂಡರ್ ವರಾನ್ ಗಾಯದ ಸಮಸ್ಯೆಯ ಕಾರಣಕ್ಕೆ ಮ್ಯಾಂಚೆಸ್ಟರ್ ಯುನೈಟೆಡ್ ಪರ 3 ವರ್ಷಗಳಲ್ಲಿ ಕೇವಲ 95 ಪಂದ್ಯಗಳನ್ನು ಆಡಿದ್ದರು. ಈ ವೇಳೆ ಯುನೈಟೆಡ್ ತಂಡವು ಇಎಫ್‌ಎಲ್ ಕಪ್ ಹಾಗೂ ಎಫ್‌ಎ ಕಪ್ ಅನ್ನು ಜಯಿಸಿತ್ತು.

ನಾನು ಸಾವಿರಾರು ಬಾರಿ ಬಿದ್ದು, ಎದ್ದಿದ್ದೇನೆ. ನನ್ನ ವೃತ್ತಿಜೀವನದಲ್ಲಿ ಹಲವಾರು ಸವಾಲುಗಳನ್ನು ಎದುರಿಸಿದ್ದೇನೆ. ಈ ಬಾರಿ ವೆಂಬ್ಲಿಯಲ್ಲಿ ಟ್ರೋಫಿಯನ್ನು ಗೆದ್ದ ನಂತರ ಫುಟ್ಬಾಲ್‌ ನಿಂದ ನಿವೃತ್ತಿಯಾಗುವ ಸಮಯ ಬಂದಿದೆ ಎಂದು ಮೇನಲ್ಲಿ ಯುನೈಟೆಡ್ ಪರ ಎಫ್‌ಎ ಕಪ್ ಗೆಲುವನ್ನು ಉಲ್ಲೇಖಿಸಿ ಇನ್‌ಸ್ಟಾಗ್ರಾಮ್ ಪೋಸ್ಟ್‌ ನಲ್ಲಿ ವರಾನ್ ಬರೆದಿದ್ದಾರೆ.

2018ರಲ್ಲಿ ರಶ್ಯದಲ್ಲಿ ನಡೆದಿದ್ದ ವಿಶ್ವಕಪ್‌ನಲ್ಲಿ ಚಾಂಪಿಯನ್‌ಪಟ್ಟಕ್ಕೇರಿದ ಫ್ರಾನ್ಸ್ ಪರ ವಾರ್ನ್ ಗಮನಾರ್ಹ ಪ್ರದರ್ಶನ ನೀಡಿದ್ದರು. 2022ರಲ್ಲಿ ಅರ್ಜೆಂಟೀನ ವಿರುದ್ಧ ವಿಶ್ವಕಪ್ ಫೈನಲ್ ಪಂದ್ಯ ಸೋತ ಕೆಲವೇ ತಿಂಗಳ ನಂತರ ಫ್ರಾನ್ಸ್ ರಾಷ್ಟ್ರೀಯ ತಂಡದಿಂದ ವರಾನ್ ನಿವೃತ್ತಿಯಾಗಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News