ದ್ವಿತೀಯ ಟೆಸ್ಟ್ ಗೆ ಶಾಕಿಬ್ ಅಲ್ ಹಸನ್ ಲಭ್ಯ : ಬಾಂಗ್ಲಾದೇಶ ಕೋಚ್
ಹೊಸದಿಲ್ಲಿ : ಭಾರತ ವಿರುದ್ಧದ ದ್ವಿತೀಯ ಟೆಸ್ಟ್ ಪಂದ್ಯಕ್ಕೆ ಶಾಕಿಬ್ ಅಲ್ ಹಸನ್ ಆಯ್ಕೆಗೆ ಲಭ್ಯವಿರಲಿದ್ದಾರೆ ಎಂದಿರುವ ಬಾಂಗ್ಲಾದೇಶದ ಮುಖ್ಯ ಕೋಚ್ ಚಂಡಿಕಾ ಹಥುರು ಸಿಂಘೆ, ಮೊದಲ ಪಂದ್ಯದಲ್ಲಿ ಗಾಯಗೊಂಡ ನಂತರ ಹಸನ್ ಫಿಟ್ನೆಸ್ ಕುರಿತ ಕಳವಳವನ್ನು ತಳ್ಳಿಹಾಕಿದ್ದಾರೆ.
ಚೆನ್ನೈನಲ್ಲಿ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ವಿರುದ್ದ ಬ್ಯಾಟಿಂಗ್ ಮಾಡುವಾಗ ಶಕೀಬ್ ಬೆರಳಿಗೆ ಗಾಯವಾಗಿತ್ತು. ಎರಡನೇ ಟೆಸ್ಟ್ ಪಂದ್ಯವು ಶುಕ್ರವಾರದಿಂದ ಕಾನ್ಪುರದಲ್ಲಿ ಆರಂಭವಾಗಲಿದೆ.
37ರ ಹರೆಯದ ಶಾಕಿಬ್ ಭಾರತ ವಿರುದ್ದ 2 ಇನಿಂಗ್ಸ್ ಗಳಲ್ಲಿ ಕೇವಲ 21 ಓವರ್‌ಗಳ ಬೌಲಿಂಗ್ ಮಾಡಿದ್ದರು.
ಈ ಕ್ಷಣದಲ್ಲಿ ನಾನು ನನ್ನ ಫಿಸಿಯೋ ಅಥವಾ ಯಾರೊಬ್ಬರೊಂದಿಗೆ ಮಾತನಾಡಿಲ್ಲ. ಶಾಕಿಬ್ ಈಗಲೂ ಆಯ್ಕೆಗೆ ಲಭ್ಯವಿದ್ದಾರೆ ಎಂದು ಕಾನ್ಪುರದಲ್ಲಿ ಬಾಂಗ್ಲಾದೇಶದ ಮೊದಲ ತರಬೇತಿ ಸೆಶನ್ ನಂತರ ಹಥುರುಸಿಂಘೆ ಹೇಳಿದ್ದಾರೆ.
ಶಾಕಿಬ್ 2ನೇ ಇನಿಂಗ್ಸ್ ನಲ್ಲಿ 56 ಎಸೆತಗಳಲ್ಲಿ 25 ರನ್ ಗಳಿಸಿದ್ದರು. ಭಾರತದ ಬಲಿಷ್ಠ ಬೌಲಿಂಗ್ ದಾಳಿ ಎದುರು ದಿಟ್ಟ ಹೋರಾಟ ನೀಡಿದ್ದರು. ಇದಕ್ಕೆ ಕೋಚ್‌ರಿಂದ ಶ್ಲಾಘನೆಗೆ ಒಳಗಾದರು. ಮೊದಲ ಇನಿಂಗ್ಸ್‌ನಲ್ಲಿ 64 ಎಸೆತಗಳಲ್ಲಿ 32 ರನ್ ಗಳಿಸಿದ್ದರು. ಇದು ಬಾಂಗ್ಲಾದೇಶ ಪರ ಗರಿಷ್ಠ ಸ್ಕೋರಾಗಿತ್ತು.
ಬಾಂಗ್ಲಾದೇಶ ಐತಿಹಾಸಿಕ ಟೆಸ್ಟ್ ಸರಣಿ ಜಯಿಸಿರುವ ಪಾಕಿಸ್ತಾನದಲ್ಲಿ ಶಾಕಿಬ್ ದೊಡ್ಡ ಸ್ಕೋರ್ ಗಳಿಸಿರಲಿಲ್ಲ. ಅಲ್ಲಿ ಅವರು 3 ಇನಿಂಗ್ಸ್‌ಗಳಲ್ಲಿ 15,2 ಹಾಗೂ ಔಟಾಗದೆ 21 ರನ್ ಗಳಿಸಿದ್ದರು.
ಶಾಕಿಬ್ ಬ್ಯಾಟಿಂಗ್ ಕುರಿತು ನಾನು ತಲೆಕೆಡಿಸಿಕೊಂಡಿಲ್ಲ ಎಂದಿರುವ ಹಥುರಸಿಂಘೆ, ನಾನು ಅವರ ಪ್ರದರ್ಶನದ ಬಗ್ಗೆ ಚಿಂತಿತನಾಗಿಲ್ಲ. ನಮ್ಮ ಒಟ್ಟಾರೆ ಪ್ರದರ್ಶನ ಉತ್ತಮವಾಗಿದೆ. ಶಾಕಿಬ್ ಉತ್ತಮ ಪ್ರದರ್ಶನ ನೀಡುವ ವಿಶ್ವಾಸವಿದೆ. ಅವರ ಸಾಮರ್ಥ್ಯ ಏನೆಂದು ನಮಗೆಲ್ಲರಿಗೂ ಗೊತ್ತಿದೆ ಎಂದರು.