ಎಟಿಪಿ ಫೈನಲ್ಸ್‌ ನಲ್ಲಿ ಕಾರ್ಲೊಸ್ ಅಲ್ಕರಾಝ್‌ಗೆ ಸ್ಥಾನ

Update: 2024-09-25 16:24 GMT

 ಕಾರ್ಲೊಸ್ ಅಲ್ಕರಾಝ್‌ | PC: PTI 

ಮ್ಯಾಡ್ರಿಡ್ : ನವೆಂಬರ್‌ನಲ್ಲಿ ಟುರಿನ್‌ನಲ್ಲಿ ನಡೆಯಲಿರುವ ವರ್ಷಾಂತ್ಯದ ಎಟಿಪಿ ಫೈನಲ್ಸ್‌ನಲ್ಲಿ ಕಾರ್ಲೊಸ್ ಅಲ್ಕರಾಝ್ ಸ್ಥಾನ ಗಿಟ್ಟಿಸಿಕೊಂಡಿದ್ದು, ವಿಶ್ವದ ನಂ.1 ಜನ್ನಿಕ್ ಸಿನ್ನರ್ ಹಾಗೂ ಎರಡು ಬಾರಿಯ ಚಾಂಪಿಯನ್ ಅಲೆಕ್ಸಾಂಡರ್ ಝ್ವೆರೆವ್‌ರನ್ನು ಸೇರ್ಪಡೆಯಾಗಿದ್ದಾರೆ.

21ರ ಹರೆಯದ ಅಲ್ಕರಾಝ್ ಅವರು ಈ ವರ್ಷ ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್ ಚಾಂಪಿಯನ್‌ಶಿಪ್ ಅನ್ನು ಜಯಿಸದ್ದು, ಈ ಮೂಲಕ ಒಟ್ಟು 4 ಗ್ರ್ಯಾನ್‌ಸ್ಲಾಮ್ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಪ್ಯಾರಿಸ್ ಒಲಿಂಪಿಕ್ಸ್‌ನಲ್ಲಿ ಬೆಳ್ಳಿ ಪದಕ ಬಾಚಿಕೊಂಡಿದ್ದರು.

ವಿಶ್ವದ ನಂ.3ನೇ ಆಟಗಾರ ಅಲ್ಕರಾಝ್ ಅವರು ಇಂಡಿಯನ್ ವೆಲ್ಸ್ ಪ್ರಶಸ್ತಿಯನ್ನು ಜಯಿಸಿದ್ದು, ಸತತ ಮೂರನೇ ವರ್ಷ ಎಟಿಪಿ ಫೈನಲ್ಸ್‌ ನಲ್ಲಿ ಆಡುವ ಅರ್ಹತೆ ಪಡೆದಿದ್ದಾರೆ. ಈ ಟೂರ್ನಿಯಲ್ಲಿ ಕಳೆದ ವರ್ಷ ಸೆಮಿ ಫೈನಲ್‌ಗೆ ತಲುಪಿದ್ದ ಅಲ್ಕರಾಝ್ ಈ ಬಾರಿ ಚೊಚ್ಚಲ ಪ್ರಶಸ್ತಿ ಗೆಲ್ಲುವ ಗುರಿ ಇಟ್ಟುಕೊಂಡಿದ್ದಾರೆ.

ಅನಾರೋಗ್ಯದ ಕಾರಣ 2022ರ ಆವೃತ್ತಿಯ ಟೂರ್ನಿಯಿಂದ ಅಲ್ಕರಾಝ್ ಹೊರಗುಳಿದಿದ್ದರು.

ಕಳೆದ ವರ್ಷದ ರನ್ನರ್ಸ್ ಅಪ್ ಸಿನ್ನರ್, ಈ ತಿಂಗಳು ಯು.ಎಸ್. ಓಪನ್‌ನಲ್ಲಿ ಅಂತಿಮ-8ರ ಘಟ್ಟ ತಲುಪಿರುವ 2018 ಹಾಗೂ 2021ರ ಚಾಂಪಿಯನ್ ಝ್ವೆರೆವ್ ಎಟಿಪಿ ಫೈನಲ್ಸ್‌ನಲ್ಲಿ ಸ್ಥಾನ ಪಡೆದಿದ್ದಾರೆ.

ಎಟಿಪಿ ಫೈನಲ್ಸ್ ವಿಶ್ವದ ಶ್ರೇಷ್ಠ ಎಂಟು ಸಿಂಗಲ್ಸ್ ಆಟಗಾರರು ಹಗೂ ಡಬಲ್ಸ್ ಟೀಮ್‌ಗಳನ್ನು ಒಳಗೊಂಡಿದ್ದು, ಟೂರ್ನಿಯು ನವೆಂಬರ್ 10ರಿಂದ 17ರ ತನಕ ಟುರಿನ್‌ನಲ್ಲಿ ನಡೆಯಲಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News