ಐಸಿಸಿ ಟೆಸ್ಟ್ ರ್‍ಯಾಂಕಿಂಗ್| ಟಾಪ್-10ಕ್ಕೆ ರಿಷಭ್ ಪಂತ್ ವಾಪಸ್ ; ರೋಹಿತ್, ವಿರಾಟ್‌ಗೆ ಹಿಂಭಡ್ತಿ
ದುಬೈ : ತನ್ನ ಪುನರಾಗಮನದ ಟೆಸ್ಟ್ ಪಂದ್ಯದಲ್ಲಿ ಶತಕ ಸಿಡಿಸಿರುವ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ರ್‍ಯಾಂಕಿಂಗ್ ನಲ್ಲಿ ಆರನೇ ಸ್ಥಾನಕ್ಕೇರಿದ್ದಾರೆ. ಆದರೆ, ಭಾರತದ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ರ್‍ಯಾಂಕಿಂಗ್ ನಲ್ಲಿ ಕೆಳಜಾರಿದ್ದಾರೆ.
ಬಾಂಗ್ಲಾದೇಶ ವಿರುದ್ದ ಚೆನ್ನೈನಲ್ಲಿ ನಡೆದ ಎರಡು ಪಂದ್ಯಗಳ ಟೆಸ್ಟ್ ಸರಣಿಯ ಆರಂಭಿಕ ಪಂದ್ಯದಲ್ಲಿ ಆಕರ್ಷಕ ಶತಕ ಗಳಿಸಿದ್ದ ಪಂತ್ 731 ರೇಟಿಂಗ್ ಪಾಯಿಂಟ್ಸ್ ನೊಂದಿಗೆ ರ್‍ಯಾಂಕಿಂಗ್ ನಲ್ಲಿ 6ನೇ ಸ್ಥಾನಕ್ಕೇರಿದ್ದಾರೆ. ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ಅರ್ಧಶತಕ ಗಳಿಸಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್(751 ಪಾಯಿಂಟ್ಸ್)ಐದನೇ ಸ್ಥಾನಕ್ಕೇರಿದ್ದಾರೆ.
ರೋಹಿತ್ ಶರ್ಮಾ ಟಾಪ್-10ರಲ್ಲಿ ಸ್ಥಾನ ಉಳಿಸಿಕೊಂಡಿದ್ದರೂ ಕೂಡ ಐದು ಸ್ಥಾನಗಳನ್ನು ಕಳೆದುಕೊಂಡಿದ್ದಾರೆ. ರೇಟಿಂಗ್ ಪಾಯಿಂಟ್ಸ್(716) ಎರಡು ಅಂಕ ಕುಸಿತವಾಗಿದೆ.
ಐದು ಸ್ಥಾನ ಕೆಳ ಜಾರಿರುವ ಕೊಹ್ಲಿ ಟಾಪ್-10ರಿಂದ ಹೊರಗುಳಿದಿದ್ದಾರೆ. ಇದೀಗ ಅವರು 12ನೇ ರ್ಯಾಂ ಕಿನಲ್ಲಿದ್ದಾರೆ.
ಗಾಲೆಯಲ್ಲಿ ಶ್ರೀಲಂಕಾ-ನ್ಯೂಝಿಲ್ಯಾಂಡ್ ನಡುವಿನ ಟೆಸ್ಟ್ ಪಂದ್ಯ ನಡೆದ ಬಳಿಕ ಟಾಪ್-10 ಬೌಲಿಂಗ್ ರ್ಯಾಂ ಕಿಂಗ್‌ನಲ್ಲಿ ಬದಲಾವಣೆಯಾಗಿದೆ. ಟೆಸ್ಟ್ ನ ಓರ್ವ ಶ್ರೇಷ್ಠ ಸ್ಪಿನ್ನರ್ ಎಂಬ ಗೌರವ ಪಡೆದಿರುವ ಪ್ರಭಾತ್ ಜಯಸೂರ್ಯ ಐದು ಸ್ಥಾನ ಭಡ್ತಿ ಪಡೆದು 8ನೇ ಸ್ಥಾನಕ್ಕೇರಿದ್ದಾರೆ. ಕಿವೀಸ್ ವಿರುದ್ಧ ಪಂದ್ಯದಲ್ಲಿ ಜಯಸೂರ್ಯ 9 ವಿಕೆಟ್ ಗೊಂಚಲು ಪಡೆದಿದ್ದರು.
ಎಲ್ಲ ಮೂರು ಮಾದರಿಯ ಪಂದ್ಯದಲ್ಲಿ ಜಯಸೂರ್ಯ(743 ಅಂಕ)ಶ್ರೀಲಂಕಾವನ್ನು ಪ್ರತಿನಿಧಿಸುತ್ತಿರುವ ಗರಿಷ್ಠ ರ್ಯಾಂಕಿನ ಆಟಗಾರನಾಗಿದ್ದಾರೆ. ಅಸಿತಾ ಫೆರ್ನಾಂಡೊ ಎರಡು ಸ್ಥಾನ ಕೆಳಗಿಳಿದು 13ನೇ ಸ್ಥಾನದಲ್ಲಿದ್ದಾರೆ.
ಬ್ಯಾಟಿಂಗ್ ರ್‍ಯಾಂಕಿಂಗ್ ನಲ್ಲಿ ಕಮಿಂದು ಮೆಂಡಿಸ್ ಮೂರು ಸ್ಥಾನ ಮೇಲಕ್ಕೇರಿ 16ನೇ ಸ್ಥಾನ ತಲುಪಿದ್ದಾರೆ. ಧನಂಜಯ ಡಿಸಿಲ್ವ ಆಲ್‌ರೌಂಡರ್ ರ್ಯಾಂ ಕಿಂಗ್ ನಲ್ಲಿ ಐದು ಸ್ಥಾನ ಮೇಲಕ್ಕೇರಿ 18ನೇ ಸ್ಥಾನದಲ್ಲಿದ್ದಾರೆ.
►ಏಕದಿನ ರ್‍ಯಾಂಕಿಂಗ್ : ಟಾಪ್-10ರಲ್ಲಿ ರಹಮಾನುಲ್ಲಾ, ಟ್ರಾವಿಸ್ ಹೆಡ್
ಏಕದಿನ ರ್‍ಯಾಂಕಿಂಗ್ ನಲ್ಲಿ ಅಫ್ಘಾನಿಸ್ತಾನದ ಯುವ ಸ್ಟಾರ್ ಆಟಗಾರ ರಹಮಾನುಲ್ಲಾ ಗುರ್ಬಾಝ್ ಹಾಗೂ ಆಸ್ಟ್ರೇಲಿಯದ ಟ್ರಾವಿಸ್ ಹೆಡ್ ಬ್ಯಾಟಿಂಗ್ ಶ್ರೇಯಾಂಕದಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆದಿದ್ದಾರೆ. ಈ ಇಬ್ಬರು ಯುಇಎ ಹಾಗೂ ಇಂಗ್ಲೆಂಡ್‌ನಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಕ್ಷಿಪ್ರಗತಿಯಲ್ಲಿ ಶತಕ ಗಳಿಸಿದ್ದರು.
ಗುರ್ಬಾಝ್ ತನ್ನ 23ನೇ ಹುಟ್ಟುಹಬ್ಬದಂದು ಏಕದಿನ ಕ್ರಿಕೆಟ್‌ನಲ್ಲಿ 7ನೇ ಶತಕ ಸಿಡಿಸಿದ್ದರು. ಈ ಹಿನ್ನೆಲೆಯಲ್ಲಿ 10 ಸ್ಥಾನ ಮೇಲಕ್ಕೇರಿದ ಗುರ್ಬಾಝ್ 8ನೇ ಸ್ಥಾನ (692 ಅಂಕ)ತಲುಪಿದ್ದಾರೆ. ಪುರುಷರ ಏಕದಿನ ಬ್ಯಾಟಿಂಗ್ ರ್‍ಯಾಂಕಿಂಗ್ ನಲ್ಲಿ ಟಾಪ್-10 ಸ್ಥಾನ ತಲುಪಿದ ಅಫ್ಘಾನ್‌ನ ಮೊತ್ತ ಮೊದಲ ಬ್ಯಾಟರ್ ಎನಿಸಿಕೊಂಡಿದ್ದಾರೆ.
ಇಂಗ್ಲೆಂಡ್ ವಿರುದ್ದ ಮೊದಲ ಟೆಸ್ಟ್ ಪಂದ್ಯದಲ್ಲಿ ಔಟಾಗದೆ 154 ರನ್ ಗಳಿಸಿದ್ದ ಹೆಡ್ 7 ಸ್ಥಾನ ಭಡ್ತಿ ಪಡೆದು 9ನೇ ಸ್ಥಾನ(684 ಅಂಕ)ಕ್ಕೇರಿದ್ದಾರೆ.
ಅಫ್ಘಾನ್‌ನ ಲೆಗ್ ಸ್ಪಿನ್ನರ್ ರಶೀದ್ ಖಾನ್ ಏಕದಿನ ಬೌಲಿಂಗ್ ರ್ಯಾಂ ಕಿಂಗ್ ನಲ್ಲಿ 8 ಸ್ಥಾನ ಮೇಲಕ್ಕೇರಿ 668 ಅಂಕದೊಂದಿಗೆ ಮೂರನೇ ಸ್ಥಾನಕ್ಕೇರಿದ್ದಾರೆ. ಯುಎಇನಲ್ಲಿ ದಕ್ಷಿಣ ಆಫ್ರಿಕಾ ವಿರುದ್ದ ನಡೆದ ಏಕದಿನ ಸರಣಿಯ ಮೊದಲೆರಡು ಪಂದ್ಯಗಳಲ್ಲಿ ರಶೀದ್ ಒಟ್ಟು 7 ವಿಕೆಟ್‌ಗಳನ್ನು ಕಬಳಿಸಿದ್ದರು.
ಈ ಇಬ್ಬರ ಕೊಡುಗೆಯ ನೆರವಿನಿಂದ ಅಫ್ಘಾನಿಸ್ತಾನ ತಂಡ ಇದೇ ಮೊದಲ ಬಾರಿ 5ನೇ ರ್‍ಯಾಂಕಿಂಗ್ ನ ಎದುರಾಳಿ ದಕ್ಷಿಣ ಆಫ್ರಿಕಾ ಎದುರು ಏಕದಿನ ಸರಣಿಯನ್ನು ಗೆದ್ದುಕೊಂಡಿತ್ತು.