ಕೊಹ್ಲಿ, ರೋಹಿತ್ ಗೆ ವಿಶೇಷ ಆದ್ಯತೆ: ಬಿಸಿಸಿಐ ವಿರುದ್ಧ ಆರೋಪ
ಚೆನ್ನೈ: ಕಳೆದ ವಾರ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಕಳಪೆ ಪ್ರದರ್ಶನ ನೀಡಿದ ಹೊರತಾಗಿಯೂ ನಾಯಕ ರೋಹಿತ್ ಶರ್ಮಾ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ, ಅದರಲ್ಲೂ ಮುಖ್ಯವಾಗಿ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಈ ಇಬ್ಬರು ಸ್ಟಾರ್ ಆಟಗಾರರಿಗೆ ವಿಶೇಷ ಆದ್ಯತೆ ನೀಡುವ ಮೂಲಕ ಭಾರತೀಯ ಕ್ರಿಕೆಟ್ ಮತ್ತು ಇತರ ಕ್ರಿಕೆಟ್ ಪಟುಗಳಿಗೆ ನೋವು ಉಂಟುಮಾಡಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಬಾಂಗ್ಲಾದೇಶ ಟೆಸ್ಟ್ ಸರಣಿಗೆ ಆಯ್ಕೆಯಾದ ಇತರ ಕ್ರಿಕೆಟಿಗರಿಗಿಂತ ಭಿನ್ನವಾಗಿ ರೋಹಿತ್ ಮತ್ತು ಕೊಹ್ಲಿ ಹಾಗೂ ಜಸ್ಪ್ರೀತ್ ಬೂಮ್ರಾ ಅವರನ್ನು, ಈ ಟೂರ್ನಿಯ ಅಂತಿಮ ಸಿದ್ಧತಾ ಪಂದ್ಯಾವಳಿ ಎನಿಸಿದ್ದ ದಿಲೀಪ್ ಟ್ರೋಫಿ ಟೂರ್ನಿಗೆ ಆಯ್ಕೆ ಮಾಡಿರಲಿಲ್ಲ. ಆದರೆ ಕಳೆದ ಜೂನ್ ನಲ್ಲಿ ಟಿ20 ವಿಶ್ವಕಪ್ ಗೆದ್ದಿದ್ದ ತಂಡದಲ್ಲಿದ್ದ ಬೂಮ್ರಾ ಪ್ರಥಮ ಟೆಸ್ಟ್ ನ ಮೊದಲ ಇನಿಂಗ್ಸ್ ನಲ್ಲಿ 50 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಉತ್ತಮ ಪ್ರದರ್ಶನ ನೀಡಿದ್ದರೂ, ವಿರಾಟ್ ಕೊಹ್ಲಿ ಹಾಗೂ ರೋಹಿತ್ ಎರಡೂ ಇನಿಂಗ್ಸ್ ಗಳಲ್ಲಿ ರನ್ ಗಳಿಸಲು ಹೆಣಗಾಡಿದರು.
ಈ ಪಂದ್ಯದಲ್ಲಿ ರೋಹಿತ್ ಕೇವಲ 11 ರನ್ ಗಳಿಸಿದ್ದರೆ, ಕಳೆದ ಜನವರಿಯಲ್ಲಿ ಆಸ್ಟ್ರೇಲಿಯಾ ವಿರುದ್ಧ ಕೊನೆಯ ಟೆಸ್ಟ್ ಆಡಿದ್ದ ಕೊಹ್ಲಿ, 21 ರನ್ ಗಳನ್ನು ಮಾತ್ರ ಕಲೆಹಾಕಿದ್ದರು. ಇವರ ಕಳಪೆ ಪ್ರದರ್ಶನದ ಹೊರತಾಗಿಯೂ ರವಿಚಂದ್ರನ್ ಅಶ್ವಿನ್, ಶುಭ್ ಮನ್ ಗಿಲ್ ಮತ್ತು ರಿಷಭ್ ಪಂತ್ ಅವರ ಆಕರ್ಷಕ ಶತಕಗಳ ನೆರವಿನಿಂದ ಭಾರತ ಎದುರಾಳಿಯನ್ನು 280 ರನ್ ಗಳ ಭಾರಿ ಅಂತರದಿಂದ ಬಗ್ಗುಬಡಿದಿತ್ತು. ಆದರೆ ಮಾಜಿ ಕ್ರಿಕೆಟರ್ ಸಂಜಯ್ ಮಂಜ್ರೇಕರ್ ಇಎಸ್ ಪಿಎನ್ ಕ್ರಿಕ್ ಇನ್ಫೋ ಜತೆ ಮಾತನಾಡಿ, ದಿಲೀಪ್ ಟ್ರೋಫಿಯಲ್ಲಿ ಕೊಹ್ಲಿ ಹಾಗೂ ರೋಹಿತ್ ಭಾಗವಹಿಸಿದ್ದರೆ ಕಥೆ ಬೇರೆ ಇರುತಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
ಹಿರಿಯ ಆಟಗಾರರು ಕಾನ್ಪುರ ಟೆಸ್ಟ್ ನಲ್ಲಿ ಪುಟಿದೇಳುವ ಸಾಮರ್ಥ್ಯ ಹೊಂದಿದ್ದರೂ, ಕೆಲ ಆಟಗಾರರಿಗೆ ಅವರ ಸ್ಥಾನಮಾನದ ಕಾರಣಕ್ಕೆ ವಿಶೇಷ ಆದ್ಯತೆ ನೀಡುವುದು ಭಾರತೀಯ ಕ್ರಿಕೆಟ್ ಹಾಗೂ ಇತರ ಆಟಗಾರರನ್ನು ಕೂಡಾ ಘಾಸಿಗೊಳಿಸುತ್ತದೆ ಎಂದು ಹೇಳಿದ್ದಾರೆ.