ಪ್ಯಾರಾಲಿಂಪಿಕ್ಸ್ ಸಮಾರೋಪ ಸಮಾರಂಭ | ಹರ್ವಿಂದರ್, ಪ್ರೀತಿ ಭಾರತದ ಧ್ವಜಧಾರಿಗಳಾಗಿ ಆಯ್ಕೆ

Update: 2024-09-06 15:10 GMT

Photo / Olympic Khel X

ಪ್ಯಾರಿಸ್ : ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ವಿಜೇತ ಬಿಲ್ಗಾರ ಹರ್ವಿಂದರ್ ಸಿಂಗ್ ಹಾಗೂ ಎರಡು ಪದಕ ಜಯಿಸಿದ ಮೊದಲ ಮಹಿಳಾ ಕ್ರೀಡಾಪಟುವಾಗಿ ಇತಿಹಾಸ ನಿರ್ಮಿಸಿದ್ದ ಓಟಗಾರ್ತಿ ಪ್ರೀತಿ ಪಾಲ್ರನ್ನು ರವಿವಾರ ನಡೆಯಲಿರುವ ಪ್ಯಾರಿಸ್ ಪ್ಯಾರಾಲಿಂಪಿಕ್ ಗೇಮ್ಸ್ ನ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಗಳಾಗಿ ಹೆಸರಿಸಲಾಗಿದೆ.

33ರ ಹರೆಯದ ಹರ್ವಿಂದರ್ ಪ್ಯಾರಾಲಿಂಪಿಕ್ಸ್ ನಲ್ಲಿ ಚಿನ್ನದ ಪದಕ ಜಯಿಸಿದ ಭಾರತದ ಮೊತ್ತಮೊದಲ ಬಿಲ್ಗಾರನಾಗಿ ಇತಿಹಾಸ ನಿರ್ಮಿಸಿದ್ದಾರೆ. 2021ರಲ್ಲಿ ಹರ್ವಿಂದರ್ ಕಂಚು ಜಯಿಸಿದ್ದರು.

ಭಾರತದ ಪರ ಚಿನ್ನದ ಪದಕ ಜಯಿಸಿ ನನ್ನ ಕನಸು ನನಸಾಗಿದೆ. ಇದೀಗ ಸಮಾರೋಪ ಸಮಾರಂಭದಲ್ಲಿ ಧ್ವಜಧಾರಿಯಾಗಿರುವುದು ದೊಡ್ಡ ಗೌರವ. ನನ್ನ ಮೇಲೆ ನಂಬಿಕೆ ಇಟ್ಟ ಪ್ರತಿಯೊಬ್ಬರ ಗೆಲುವು ಇದಾಗಿದೆ. ಇದು ಕನಸುಗಳನ್ನು ಈಡೇರಿಸಲು ಎಲ್ಲರಿಗೂ ಸ್ಫೂರ್ತಿಯಾಗುವ ವಿಶ್ವಾಸದಲ್ಲಿದ್ದೇನೆ ಎಂದು ಬಾಲ್ಯದಿಂದಲೇ ಎರಡೂ ಕಾಲುಗಳಲ್ಲಿ ದೈಹಿಕ ದುರ್ಬಲತೆ ಹೊಂದಿದ್ದ ಹರ್ಯಾಣದ ಅಥ್ಲೀಟ್ ಹರ್ವಿಂದರ್ ಹೇಳಿದ್ದಾರೆ.

23ರ ಹರೆಯದ ಪ್ರೀತಿ ಅವರು ವೈಯಕ್ತಿಕ ಶ್ರೇಷ್ಠ ಸಮಯದಲ್ಲಿ(14.21 ಹಾಗೂ 30.01 ಸೆ.)ಮಹಿಳೆಯರ ಟಿ35 100 ಮೀ. ಹಾಗೂ 200 ಮೀ. ಓಟಗಳಲ್ಲಿ ಕಂಚಿನ ಪದಕಗಳನ್ನು ಜಯಿಸಿ ಇತಿಹಾಸ ನಿರ್ಮಿಸಿದ್ದಾರೆ.

ಧ್ವಜಧಾರಿಯಾಗಿ ಭಾರತವನ್ನು ಪ್ರತಿನಿಧಿಸುವುದು ದೊಡ್ಡ ಗೌರವ. ಈ ಕ್ಷಣ ನನಗಷ್ಟೇ ಅಲ್ಲ, ಇದು ನಮ್ಮ ರಾಷ್ಟ್ರವನ್ನು ಹೆಮ್ಮೆಪಡುವಂತೆ ಮಾಡಲು ಶಕ್ತಿಮೀರಿ ಪ್ರಯತ್ನಿಸಿರುವ ಪ್ರತಿಯೊಬ್ಬ ಅಥ್ಲೀಟ್ ಗಳ ಕ್ಷಣವಾಗಿದೆ. ಸಮಾರೋಪ ಸಮಾರಂಭದಲ್ಲಿ ನಮ್ಮ ಅದ್ಭುತ ತಂಡವನ್ನು ಮುನ್ನಡೆಸಲು ನಾನು ರೋಮಾಂಚನಗೊಂಡಿದ್ದೇನೆ ಎಂದು ಉತ್ತರಪ್ರದೇಶದ ಅಥ್ಲೀಟ್ ಪ್ರೀತಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Naufal

contributor

Byline - ವಾರ್ತಾಭಾರತಿ

contributor

Similar News