ಭಾರತಕ್ಕೆ ದಾಖಲೆ ಅಂತರದ ಬೃಹತ್ ವಿಜಯ | ಏಕದಿನ ಸರಣಿಯನ್ನು 3-0ಯಿಂದ ಕ್ಲೀನ್‌ಸ್ವೀಪ್‌ಗೈದ ಆತಿಥೇಯರು
ರಾಜ್‌ಕೋಟ್ : ಪ್ರವಾಸಿ ಐರ್‌ಲ್ಯಾಂಡ್ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯವನ್ನು ಭಾರತವು ಬುಧವಾರ ಅಗಾಧ 304 ರನ್‌ಗಳ ಅಂತರದಿಂದ ಗೆದ್ದಿದೆ. ಇದರೊಂದಿಗೆ ಸರಣಿಯನ್ನು 3-0 ಅಂತರದಿಂದ ಕ್ಲೀನ್‌ಸ್ವೀಪ್ ಮಾಡಿದೆ.
ಇದು ಭಾರತೀಯ ಮಹಿಳಾ ಕ್ರಿಕೆಟ್ ತಂಡದ ಅತ್ಯಂತ ದೊಡ್ಡ ಅಂತರದ ಗೆಲುವಾಗಿದೆ.
ರಾಜ್‌ಕೋಟ್‌ನ ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಮ್‌ನಲ್ಲಿ ನಡೆದ ಪಂದ್ಯದಲ್ಲಿ, ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತವು ತನ್ನ ಎದುರಾಳಿಯ ವಿಜಯಕ್ಕೆ 436 ರನ್‌ಗಳ ಬೃಹತ್ ಗುರಿಯನ್ನು ನಿಗದಿಪಡಿಸಿದಾಗಲೇ ಫಲಿತಾಂಶವು ನಿರ್ಧಾರಗೊಂಡಿತ್ತು. ಐರ್‌ಲ್ಯಾಂಡ್‌ಗೆ 31.4 ಓವರ್‌ಗಳಲ್ಲಿ ಕೇವಲ 131 ರನ್‌ಗಳನ್ನಷ್ಟೇ ಗಳಿಸಲು ಸಾಧ್ಯವಾಯಿತು.
ಭರ್ಜರಿ ಶತಕಗಳನ್ನು ಬಾರಿಸಿದ ಆರಂಭಿಕ ಬ್ಯಾಟರ್‌ಗಳಾದ ನಾಯಕಿ ಸ್ಮತಿ ಮಂದಾನ ಮತ್ತು ಪ್ರತೀಕಾ ರಾವಲ್ ಭಾರತದ ಬೃಹತ್ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು. ಸ್ಮತಿ 80 ಎಸೆತಗಳಲ್ಲಿ 135 ರನ್‌ಗಳನ್ನು ಸಿಡಿಸಿದರೆ, ಪ್ರತೀಕಾ 129 ಎಸೆತಗಳಲ್ಲಿ 154 ರನ್‌ಗಳನ್ನು ಗಳಿಸಿದರು.
ಭಾರತವು ತನ್ನ ಇನಿಂಗ್ಸ್‌ನಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 435 ರನ್‌ಗಳನ್ನು ಕಲೆಹಾಕಿತು. ಇದು ಏಕದಿನ ಪಂದ್ಯದಲ್ಲಿ ಯಾವುದೇ ಭಾರತೀಯ ತಂಡವೊಂದರ ಗರಿಷ್ಠ ಮೊತ್ತವಾಗಿದೆ.
ಸ್ಮತಿ ಮತ್ತು ರಾವಲ್ ಮೊದಲ ವಿಕೆಟ್‌ಗೆ ಕೇವಲ 26.4 ಓವರ್‌ಗಳಲ್ಲಿ 233 ರನ್‌ಗಳನ್ನು ಸೇರಿಸಿದರು.
ಬಳಿಕ, ಸ್ಪಿನ್ನರ್‌ಗಳಾದ ತನುಜಾ ಕನ್ವರ್ ಮತ್ತು ದೀಪ್ತಿ ಶರ್ಮಾ ಐರ್‌ಲ್ಯಾಂಡ್ ಇನಿಂಗ್ಸ್‌ನಲ್ಲಿ ಪ್ರಾಬಲ್ಯ ಮೆರೆದರು. ಅವರು ತಮ್ಮ ನಡುವೆ ಐದು ವಿಕೆಟ್‌ಗಳನ್ನು ಹಂಚಿಕೊಂಡರು.
ಓರ್ಲಾ ಪ್ರೆಂಡರ್‌ಗಾಸ್ಟ್ ಮತ್ತು ಸಾರಾ ಫೋರ್ಬ್ಸ್ ಭಾರತೀಯರ ಧಾವಂತಕ್ಕೆ ಸ್ವಲ್ಪ ತಡೆಯೊಡ್ಡಿದರು. ಅವರು ಮೂರನೇ ವಿಕೆಟ್‌ಗೆ 64 ರನ್‌ಗಳನ್ನು ಸೇರಿಸಿದರು. ಅವರ ಪ್ರಯತ್ನದ ಫಲವಾಗಿ ಒಂದು ಹಂತದಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 24ರಲ್ಲಿದ್ದ ಐರ್‌ಲ್ಯಾಂಡ್‌ನ ಮೊತ್ತ 3 ವಿಕೆಟ್ ನಷ್ಟಕ್ಕೆ 8್ಕ8ಕೆ ಏರಿತು.
ಆದರೆ, ಪ್ರೆಂಡರ್‌ಗಾಸ್ಟ್‌ರ ವಿಕೆಟನ್ನು ಕನ್ವರ್ ಉರುಳಿಸಿದ ಬಳಿಕ, ಭಾರತೀಯ ಬೌಲರ್‌ಗಳು ಎದುರಾಳಿ ಬ್ಯಾಟರ್‌ಗಳ ಮೇಲೆ ಸಂಪೂರ್ಣ ಹಿಡಿತ ಸಾಧಿಸಿದರು. ಅವರು ಕೇವಲ 33 ರನ್‌ಗಳನ್ನು ನೀಡಿ ಮುಂದಿನ ಏಳು ವಿಕೆಟ್‌ಗಳನ್ನು ಉರುಳಿಸಿದರು.
ಭಾರತದ ಈ ಹಿಂದಿನ ಅತ್ಯಧಿತ ಗೆಲುವಿನ ಅಂತರ 249 ರನ್ ಆಗಿತ್ತು. ಅದು ಕೂಡ 2017ರಲ್ಲಿ ಇದೇ ಎದುರಾಳಿಯ ವಿರುದ್ಧ ದಾಖಲಾಗಿತ್ತು.
ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಎರಡೂ ಪ್ರಶಸ್ತಿಗಳನ್ನು ಭಾರತದ ಪ್ರತೀಕಾ ರಾವಲ್ ಸ್ವೀಕರಿಸಿದರು.
► ಶತಕ ಬಾರಿಸಿದ ಸ್ಮತಿ ಮಂದಾನ, ಪ್ರತೀಕಾ ರಾವಲ್
ರಾಜ್‌ಕೋಟ್, ಜ. 15: ಐರ್‌ಲ್ಯಾಂಡ್ ಮಹಿಳೆಯರ ವಿರುದ್ಧದ ಏಕದಿನ ಸರಣಿಯ ಮೂರನೇ ಹಾಗೂ ಅಂತಿಮ ಪಂದ್ಯದಲ್ಲಿ ಭಾರತದ ಸ್ಮತಿ ಮಂದಾನ ಮತ್ತು ಪ್ರತೀಕಾ ರಾವಲ್ ಶತಕಗಳನ್ನು ಬಾರಿಸಿದ್ದಾರೆ. ಸ್ಮತಿ ಅತ್ಯಂತ ವೇಗದ ಏಕದಿನ ಶತಕ ಬಾರಿಸಿದ ಭಾರತೀಯ ಮಹಿಳಾ ಕ್ರಿಕೆಟರ್ ಆದರೆ, ಪ್ರತೀಕಾ ತನ್ನ ಚೊಚ್ಚಲ ಶತಕ ಸಿಡಿಸಿದರು.
ಅವರಿಬ್ಬರ ಶತಕಗಳಿಂದಾಗಿ ಭಾರತವು ಮೊದಲ ಬಾರಿಗೆ ಏಕದಿನ ಕ್ರಿಕೆಟ್‌ನ ಇನಿಂಗ್ಸ್ ಒಂದರಲ್ಲಿ 400 ರನ್‌ಗಳ ಗಡಿಯನ್ನು ದಾಟಿತು. ಈ ಮೂಲಕ ಈ ಸಾಧನೆಯನ್ನು ಮಾಡಿರುವ ಆಸ್ಟ್ರೇಲಿಯ ಮತ್ತು ನ್ಯೂಝಿಲ್ಯಾಂಡ್ ತಂಡಗಳ ಗುಂಪಿಗೆ ಸೇರ್ಪಡೆಗೊಂಡಿತು.
ಖಾಯಂ ನಾಯಕಿ ಹರ್ಮನ್‌ಪ್ರೀತ್ ಕೌರ್ ಅನುಪಸ್ಥಿತಿಯಲ್ಲಿ ಭಾರತೀಯ ತಂಡದ ಉಸ್ತುವಾರಿ ನಾಯಕಿಯೂ ಆಗಿರುವ ಸ್ಮತಿ 70 ಎಸೆತಗಳಲ್ಲಿ ಶತಕ ಪೂರೈಸಿದರು. ಇದು ಅವರ 10ನೇ ಏಕದಿನ ಶತಕವಾಗಿದೆ. ಅವರು ಒಟ್ಟು 80 ಎಸೆತಗಳಲ್ಲಿ 135 ರನ್‌ಗಳನ್ನು ಸಿಡಿಸಿದರು.
ಕಳೆದ ವರ್ಷ ದಕ್ಷಿಣ ಆಫ್ರಿಕದ ವಿರುದ್ಧ ಹರ್ಮನ್‌ಪ್ರೀತ್ ಕೌರ್ ಬಾರಿಸಿದ್ದ 87 ಎಸೆತಗಳ ಶತಕವನ್ನೂ ಸ್ಮತಿ ಹಿಂದಿಕ್ಕಿದರು. ಇದಕ್ಕೂ ಮೊದಲು, ಅವರು 39 ಎಸೆತಗಳಲ್ಲಿ ತನ್ನ 31ನೇ ಏಕದಿನ ಅರ್ಧ ಶತಕವನ್ನು ಗಳಿಸಿದರು. ಅವರ ಒಟ್ಟು ಇನಿಂಗ್ಸ್‌ನಲ್ಲಿ ಏಳು ಸಿಕ್ಸರ್‌ಗಳು ಮತ್ತು 12 ಬೌಂಡರಿಗಳಿದ್ದವು.
ಅದೇ ವೇಳೆ, ರೈಲ್ವೇಯನ್ನು ಪ್ರತಿನಿಧಿಸುವ ದಿಲ್ಲಿ ಕ್ರಿಕೆಟರ್ ಪ್ರತೀಕಾ, ತನ್ನ ನಾಯಕಿಗೆ ಸಮರ್ಥ ಜೊತೆ ನೀಡಿದರು. ಈ ಪ್ರಕ್ರಿಯೆಯಲ್ಲಿ ಅವರು ತನ್ನ ಚೊಚ್ಚಲ ಅಂತರ್‌ರಾಷ್ಟ್ರೀಯ ಶತಕವನ್ನು ಬಾರಿಸಿದರು. ಅವರು ತನ್ನ ಆರನೇ ಇನಿಂಗ್ಸ್‌ನಲ್ಲಿ ಶತಕ ಬಾರಿಸಿದ್ದಾರೆ. ಅವರು 129 ಎಸೆತಗಳಿಂದ 154 ರನ್‌ಗಳನ್ನು ಸಿಡಿಸಿದರು.
ಹಿಂದಿನ ವೆಸ್ಟ್ ಇಂಡೀಸ್ ವಿರುದ್ಧದ ಸರಣಿಯಲ್ಲಿ ಭಾರತೀಯ ತಂಡಕ್ಕೆ ಸೇರ್ಪಡೆಯಾಗಿರುವ 24 ವರ್ಷದ ಪ್ರತೀಕಾ ಈಗಾಗಲೇ ನಾಲ್ಕು ಇನಿಂಗ್ಸ್‌ಗಳಲ್ಲಿ ಮೂರು ಅರ್ಧ ಶತಕಗಳನ್ನು ಗಳಿಸಿದ್ದಾರೆ.
ಸ್ಮತಿ ಮಂದಾನ ಮತ್ತು ಪ್ರತೀಕಾ 233 ರನ್‌ಗಳ ಭಾಗೀದಾರಿಕೆ ನಿಭಾಯಿಸಿದರು. ಮಹಿಳಾ ಏಕದಿನ ಕ್ರಿಕೆಟ್‌ನಲ್ಲಿ 200 ರನ್‌ಗಳದ ಭಾಗೀದಾರಿಕೆ ನಿಭಾಯಿಸಿದ ನಾಲ್ಕನೇ ಭಾರತೀಯ ಜೋಡಿ ಅವರಾದರು.
2017ರಲ್ಲಿ, ಐರ್‌ಲ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಭಾರತದ ದೀಪ್ತಿ ಶರ್ಮ ಮತ್ತು ಪೂನಮ್ ರಾವುತ್ ದಾಖಲೆಯ 320 ರನ್‌ಗಳ ಆರಂಭಿಕ ಜೊತೆಯಾಟವಾಡಿದ್ದರು.