ಚಾಂಪಿಯನ್ಸ್ ಟ್ರೋಫಿ | ಪಾಕಿಸ್ತಾನಕ್ಕೆ ಹೋಗಲಿರುವ ರೋಹಿತ್ ಶರ್ಮಾ!

Update: 2025-01-15 17:20 GMT

ರೋಹಿತ್ ಶರ್ಮಾ | PC : NDTV 

ಮುಂಬೈ : ಪಾಕಿಸ್ತಾನದ ಆತಿಥ್ಯದಲ್ಲಿ ನಡೆಯಲಿರುವ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಯ ತನ್ನ ಪಂದ್ಯಗಳನ್ನು ಭಾರತ ತಟಸ್ಥ ಸ್ಥಳದಲ್ಲಿ ಆಡಲಿದೆಯಾದರೂ, ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಭಾರತೀಯ ಕ್ರಿಕೆಟ್ ತಂಡದ ನಾಯಕ ರೋಹಿತ್ ಶರ್ಮಾ ಪಾಕಿಸ್ತಾನಕ್ಕೆ ಪ್ರಯಾಣಿಸುವರೆಂದು ನಿರೀಕ್ಷಿಸಲಾಗಿದೆ.

ಎಂಟು ವರ್ಷಗಳ ಅಂತರದ ಬಳಿಕ ಮರಳಿರುವ ಚಾಂಪಿಯನ್ಸ್ ಟ್ರೋಫಿಯ ಭವ್ಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲು ಪಾಕಿಸ್ತಾನ ಕ್ರಿಕೆಟ್ ಮಂಡಳಿ (ಪಿಸಿಬಿ)ಯು ನಿರ್ಧರಿಸಿದೆ. ಸಮಾರಂಭವು ಫೆಬ್ರವರಿ 16 ಅಥವಾ 17ರಂದು ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ಉದ್ಘಾಟನಾ ಸಮಾರಂಭದಲ್ಲಿ ಎಲ್ಲಾ ತಂಡಗಳ ನಾಯಕರು ಭಾಗವಹಿಸಬೇಕಾಗಿದೆ. ಇದು ಐಸಿಸಿ ಪಂದ್ಯಾವಳಿಗಳಲ್ಲಿ ಅನುಸರಿಸಲಾಗುವ ಸಾಮಾನ್ಯ ನಿಯಮವಾಗಿದೆ.

‘‘ಬೃಹತ್ ಅಂತರ್‌ರಾಷ್ಟ್ರೀಯ ಕ್ರಿಕೆಟ್ ಪಂದ್ಯಾವಳಿಯೊಂದು 29 ವರ್ಷಗಳ ಬಳಿಕ ಪಾಕಿಸ್ತಾನಕ್ಕೆ ಬಂದಿದೆ. ಹಾಗಾಗಿ, ಈ ಪಂದ್ಯಾವಳಿಯ ಭವ್ಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲು ಪಿಸಿಬಿ ನಿರ್ಧರಿಸಿದೆ. ಅದರಲ್ಲಿ ಭಾಗವಹಿಸಲು ಭಾರತೀಯ ಕ್ರಿಕೆಟ್ ತಂಡದ ನಾಯಕ ಪಾಕಿಸ್ತಾನಕ್ಕೆ ಭೇಟಿ ನೀಡಲಿದ್ದಾರೆ’’ ಎಂದು ಐಎಎನ್‌ಎಸ್ ಜೊತೆ ಮಾತನಾಡಿದ ಮೂಲಗಳು ತಿಳಿಸಿವೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿ 2025 ಫೆಬ್ರವರಿ 19ರಂದು ಆರಂಭಗೊಳ್ಳಲಿದೆ. ಪಂದ್ಯಾವಳಿಯು ಹೈಬ್ರಿಡ್ ಮಾದರಿಯಲ್ಲಿ ನಡೆಯಲಿದ್ದು, ಹೆಚ್ಚಿನ ಪಂದ್ಯಗಳು ಪಾಕಿಸ್ತಾನದಲ್ಲಿ ನಡೆಯಲಿವೆ, ಆದರೆ ಭಾರತ ಆಡುವ ಎಲ್ಲಾ ಗುಂಪು ಹಂತದ ಪಂದ್ಯಗಳು ಮತ್ತು ಮೊದಲ ಸೆಮಿಫೈನಲ್ ದುಬೈನಲ್ಲಿ ಜರಗಲಿದೆ.

ಒಂದು ವೇಳೆ ಭಾರತ ಫೈನಲ್‌ಗೆ ತೇರ್ಗಡೆಗೊಂಡರೆ ಫೈನಲ್ ಪಂದ್ಯವನ್ನೂ ದುಬೈಯಲ್ಲಿ ಆಡಲಾಗುವುದು. ಇಲ್ಲದಿದ್ದರೆ ಫೈನಲ್ ಪಂದ್ಯವು ಲಾಹೋರ್‌ನಲ್ಲಿ ನಡೆಯುವುದು.

ಎಂಟು ತಂಡಗಳು ಭಾಗವಹಿಸುವ ಪಂದ್ಯಾವಳಿಯಲ್ಲಿ ಆತಿಥೇಯ ಪಾಕಿಸ್ತಾನದ ಜೊತೆಗೆ ಅಫ್ಘಾನಿಸ್ತಾನ, ಆಸ್ಟ್ರೇಲಿಯ, ಬಾಂಗ್ಲಾದೇಶ, ಇಂಗ್ಲೆಂಡ್, ಭಾರತ, ನ್ಯೂಝಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕ ತಂಡಗಳು ಭಾಗವಹಿಸಲಿವೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News