ಮನೆಯಲ್ಲೇ ಮಲಗಿ ವಿಶ್ರಾಂತಿ ತೆಗೆದುಕೊಳ್ಳಲು ಬುಮ್ರಾಗೆ ಸಲಹೆ
ಮುಂಬೈ : ಮನೆಯಲ್ಲೇ ವಿಶ್ರಾಂತಿ ತೆಗೆದುಕೊಳ್ಳುವಂತೆ ಟೀಮ್ ಇಂಡಿಯಾದ ಪ್ರಮುಖ ವೇಗದ ಬೌಲರ್ ಜಸ್‌ಪ್ರೀತ್ ಬುಮ್ರಾ ಅವರಿಗೆ ಸೂಚಿಸಲಾಗಿದ್ದು, ಅವರು ಮುಂಬರುವ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡುವ ಸಾಧ್ಯತೆ ಕ್ಷೀಣಿಸಿದೆ.
ಇತ್ತೀಚೆಗೆ ಆಸ್ಟ್ರೇಲಿಯದಲ್ಲಿ ಮುಕ್ತಾಯಗೊಂಡಿರುವ ಬಾರ್ಡರ್-ಗವಾಸ್ಕರ್ ಟ್ರೋಫಿ ಟೆಸ್ಟ್ ಸರಣಿಯಲ್ಲಿ ಬುಮ್ರಾ 32 ವಿಕೆಟ್‌ಗಳನ್ನು ಪಡೆದಿದ್ದಾರೆ. ಸುದೀರ್ಘ ಆಸ್ಟ್ರೇಲಿಯ ಪ್ರವಾಸದಿಂದ ಅವರು ಕಳೆದ ವಾರವಷ್ಟೇ ಭಾರತಕ್ಕೆ ಹಿಂದಿರುಗಿದ್ದಾರೆ.
ಮನೆಯಲ್ಲೇ ಮಲಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಬುಮ್ರಾ ಅವರಿಗೆ ವೈದ್ಯರು ಸಲಹೆ ನೀಡಿದ್ದಾರೆ ಎಂಬುದಾಗಿ ‘ಟೈಮ್ಸ್ ಆಫ್ ಇಂಡಿಯಾ’ ವರದಿ ಮಾಡಿದೆ. ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ)ಯು ಅವರ ಚೇತರಿಕೆ ಪ್ರಕ್ರಿಯೆಗೆ ಅನಗತ್ಯ ವೇಗ ನೀಡುವ ಸಾಧ್ಯತೆ ಇಲ್ಲ ಎಂದು ಹೇಳಲಾಗಿದೆ.
ಬೆಂಗಳೂರಿನಲ್ಲಿರುವ ಬಿಸಿಸಿಐಯ ಸೆಂಟರ್ ಆಫ್ ಎಕ್ಸಲೆನಸ್ (ಸಿಒಇ)ಗೆ ಬುಮ್ರಾ ಭೇಟಿ ನೀಡಬೇಕಾಗಿದೆ. ಆದರೆ, ಅವರ ಭೇಟಿಯ ದಿನಾಂಕ ಇನ್ನೂ ಅಂತಿಮಗೊಂಡಿಲ್ಲ.
‘‘ಬುಮ್ರಾ ಸೆಂಟರ್ ಆಫ್ ಎಕ್ಸಲೆನ್ಸ್‌ಗೆ ಮುಂದಿನ ವಾರ ಹೋಗಬಹುದಾಗಿದೆ, ಆದರೆ ಅದಕ್ಕಾಗಿ ಈವರೆಗೆ ನಿರ್ದಿಷ್ಟ ದಿನಾಂಕವನ್ನು ನಿಗದಿಪಡಿಸಲಾಗಿಲ್ಲ. ಮಾಂಸಖಂಡಗಳ ಚೇತರಿಕೆಗೆ ಮತ್ತು ಊತ ತಗ್ಗಲು ಮನೆಯಲ್ಲೇ ಮಲಗಿ ವಿಶ್ರಾಂತಿ ತೆಗೆದುಕೊಳ್ಳುವಂತೆ ಅವರಿಗೆ ಸಲಹೆ ನೀಡಲಾಗಿದೆ. ಅವರ ವಿಶ್ರಾಂತಿ ಪೂರ್ಣಗೊಂಡ ಬಳಿಕ, ಮುಂದಿನ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು’’ ಎಂದು ವರದಿ ತಿಳಿಸಿದೆ.
ಬುಮ್ರಾ ಊತದ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ಆರಂಭಿಕ ವರದಿಗಳು ತಿಳಿಸಿವೆ. ನಿರೀಕ್ಷಿಸಿರುವುದಕ್ಕಿಂತಲೂ ಹೆಚ್ಚು ಅವಧಿಗೆ ಅವರು ಪಂದ್ಯಗಳಿಂದ ಹೊರಗಿರುವ ಸಾಧ್ಯತೆಯಿದೆ ಎಂದು ಹೇಳಿರುವ ವರದಿ, ಅವರ ಗಾಯ ಉಲ್ಬಣಗೊಳ್ಳುವುದನ್ನು ಬಿಸಿಸಿಐ ಬಯಸುತ್ತಿಲ್ಲ ಎಂದಿದೆ.