ಬಾಂಗ್ಲಾ ವಿರುದ್ಧ ಐಸಿಸಿ ಶಿಕ್ಷೆಯ ತೂಗುಗತ್ತಿ: ಕಾರಣವೇನು ಗೊತ್ತೇ?
ಚೆನ್ನೈ: ಭಾರತ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಆರಂಭದಲ್ಲೇ ಮೇಲುಗೈ ಸಾಧಿಸಿ ಕೇವಲ 34 ರನ್ ಗಳಿಗೆ ಭಾರತದ ಮೂವರು ಸ್ಟಾರ್ ಬ್ಯಾಟ್ಸ್ಮನ್ ಗಳನ್ನು ಪೆವಿಲಿಯನ್ ಗೆ ಅಟ್ಟಿತ್ತು. ಮುಂದೆ ಒಂದು ಹಂತದಲ್ಲಿ (144/6) ಅತಿಥೇಯರನ್ನು ತೀವ್ರ ಸಂಕಷ್ಟಕ್ಕೆ ಸಿಲುಕಿಸಿತು. ಆದರೆ ದಿನದಾಟದ ಕೊನೆಗೆ ಅಶ್ವಿನ್ (ನಾಟೌಟ್ 102) ಮತ್ತು ಜಡೇಜಾ (ನಾಟೌಟ್ 86) ಅವರ ಸಾಹಸದಲ್ಲಿ ಗೌರವಾರ್ಹ ಮೊತ್ತ (339/6)ವನ್ನು ಭಾರತ ಗಳಿಸಿತು.
ಹೀಗೆ ಮೊದಲ ಟೆಸ್ಟ್ ನಲ್ಲಿ ಬಾಂಗ್ಲಾದೇಶದ ಬಿಗಿ ಹಿಡಿತ ತಪ್ಪಿದೆ. ಆದರೆ ಇದಕ್ಕಿಂತ ಆತಂಕಕಾರಿ ಪರಿಸ್ಥಿತಿಯನ್ನು ಈ ತಂಡ ಎದುರಿಸುತ್ತಿದೆ. ಆಟದ ಅವಧಿಯನ್ನು ಅರ್ಧ ಗಂಟೆ ವಿಸ್ತರಿಸಿದ ಬಳಿಕವೂ ಬಾಂಗ್ಲಾ ಬೌಲರ್ ಗಳು ಕಡ್ಡಾಯ ಓವರ್ ಗಳಿಗಿಂತ 10 ಓವರ್ ಗಳನ್ನು ಕಡಿಮೆ ಎಸೆದಿದ್ದಾರೆ. ಇದರಿಂದ ತಂಡ ಐಸಿಸಿ ದಂಡನೆಗೆ ಒಳಗಾಗುವ ಸಾಧ್ಯತೆ ಇದೆ.
ಕಳೆದ ತಿಂಗಳಷ್ಟೇ ಮೂರು ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಅಂಕಗಳನ್ನು ಕಳೆದುಕೊಂಡ ಮತ್ತು ಶೇಕಡ 15ರಷ್ಟು ಸಂಭಾವನೆಯನ್ನು ಕಳೆದುಕೊಂಡ ಬಾಂಗ್ಲಾಗೆ ಇದು ಮತ್ತಷ್ಟು ಸಂಕಷ್ಟ ತಂದೊಡ್ಡಲಿದೆ. ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಮೂರು ಓವರ್ ಗಳನ್ನು ಕಡಿಮೆ ಎಸೆದ ಕಾರಣಕ್ಕೆ ಈ ದಂಡನೆಗೆ ಬಾಂಗ್ಲಾ ಒಳಗಾಗಿತ್ತು.
ಭಾರತ ವಿರುದ್ಧದ ಪಂದ್ಯದ ಮೊದಲ ದಿನ ಕೇವಲ 80 ಓವರ್ ಗಳ ಬೌಲಿಂಗ್ ಸಾಧ್ಯವಾಗಿದೆ. ಮೊದಲ ಅವಧಿಯಲ್ಲಿ 23, ಎರಡನೇ ಅವಧಿಯಲಿ 25 ಮತ್ತು ಅಂತಿಮ ಸೆಷನ್ ನಲ್ಲಿ 32 ಓವರ್ ಗಳ ಬೌಲಿಂಗ್ ನಡೆಸಲಾಗಿದೆ. ಇದು ಸ್ವೀಕಾರಾರ್ಹವಲ್ಲ ಎಂದು ಕ್ರಿಕೆಟ್ ವೀಕ್ಷಕ ವಿವರಣೆಗಾರ ಹರ್ಷ ಬೋಗ್ಲೆ ಎಕ್ಸ್ ನಲ್ಲಿ ಪ್ರತಿಪಾದಿಸಿದ್ದಾರೆ.
ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಪಂದ್ಯಗಳ ಷರತ್ತಿನ (ಆರ್ಟಿಕಲ್ 16.11.12) ಅನ್ವಯ ಸುತ್ತು ಹಂತದಲ್ಲಿ ನಿಧಾನಗತಿಯ ಬೌಲಿಂಗ್ ನಡೆಸುವ ತಂಡದ ಪ್ರತಿ ಪೆನಾಲ್ಟಿ ಓವರ್ ಗೆ ಒಂದು ಅಂಕದಂತೆ ತಂಡದಿಂದ ಕಡಿತಗೊಳಿಸಲಾಗುತ್ತದೆ.