ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ : ಅಗ್ರಸ್ಥಾನ ಮರಳಿ ಪಡೆದ ಜಸ್‌ಪ್ರಿತ್ ಬುಮ್ರಾ
ಹೊಸದಿಲ್ಲಿ : ಪರ್ತ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ವೇಳೆ ಮ್ಯಾಚ್ ವಿನ್ನಿಂಗ್ ಸ್ಪೆಲ್ ಎಸೆದ ನಂತರ ಭಾರತದ ವೇಗದ ಬೌಲರ್ ಜಸ್‌ಪ್ರಿತ್ ಬುಮ್ರಾ ಬುಧವಾರ ಬಿಡುಗಡೆಯಾಗಿರುವ ಐಸಿಸಿ ಟೆಸ್ಟ್ ಬೌಲಿಂಗ್ ರ‍್ಯಾಂಕಿಂಗ್ ನಲ್ಲಿ ಕಾಗಿಸೊ ರಬಾಡ ಹಾಗೂ ಜೋಶ್ ಹೇಝಲ್‌ವುಡ್ ರನ್ನು ಹಿಂದಕ್ಕೆ ತಳ್ಳಿ ಅಗ್ರ ಸ್ಥಾನಕ್ಕೆ ಮರಳಿದ್ದಾರೆ.
ಐದು ಪಂದ್ಯಗಳ ಬಾರ್ಡರ್-ಗವಾಸ್ಕರ್ ಟ್ರೋಫಿಯಲ್ಲಿ ಆಸ್ಟ್ರೇಲಿಯ ತಂಡವನ್ನು 295 ರನ್ ಅಂತರದಿಂದ ಮಣಿಸಿರುವ ಭಾರತ ತಂಡವು ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಹಂಗಾಮಿ ನಾಯಕ ಬುಮ್ರಾ ಪಂದ್ಯದಲ್ಲಿ 72 ರನ್ ನೀಡಿ 8 ವಿಕೆಟ್‌ಗಳ ಮೂಲಕ ಅಮೋಘ ಸ್ಪೆಲ್ ಎಸೆದಿದ್ದರು.
ಪರ್ತ್ ಟೆಸ್ಟ್‌ಗಿಂತ ಮೊದಲು ಬುಮ್ರಾ ಅವರು 3ನೇ ರ‍್ಯಾಂಕಿನಲ್ಲಿದ್ದರು. ಸದ್ಯ ಅವರು ಜೀವನಶ್ರೇಷ್ಠ 883 ರ‍್ಯಾಂಕಿಂಗ್ ಪಾಯಿಂಟ್ಸ್ ಹೊಂದಿದ್ದಾರೆ. ಆಸ್ಟ್ರೇಲಿಯದ ಹೇಝಲ್‌ವುಡ್(860 ಅಂಕ)ಹಾಗೂ ದಕ್ಷಿಣ ಆಫ್ರಿಕಾದ ರಬಾಡ(872 ಅಂಕ)ಅವರನ್ನು ಹಿಂದಿಕ್ಕಿದ್ದಾರೆ.
ಭಾರತದ ಇನ್ನೋರ್ವ ವೇಗದ ಬೌಲರ್ ಮುಹಮ್ಮದ್ ಸಿರಾಜ್ ಕೂಡ ಪ್ರಗತಿ ಸಾಧಿಸಿದ್ದು, ಆಸ್ಟ್ರೇಲಿಯದ ವಿರುದ್ಧ ಐದು ವಿಕೆಟ್ ಪಡೆದ ನಂತರ ಮೂರು ಸ್ಥಾನ ಭಡ್ತಿ ಪಡೆದು 25ನೇ ರ‍್ಯಾಂಕಿಗೆ ತಲುಪಿದ್ದಾರೆ.
► ದ್ವಿತೀಯ ಸ್ಥಾನಕ್ಕೇರಿದ ಯಶಸ್ವಿ ಜೈಸ್ವಾಲ್
ಮೊದಲ ಟೆಸ್ಟ್ ಪಂದ್ಯದಲ್ಲಿ 161 ರನ್ ಗಳಿಸಿದ್ದ ಆರಂಭಿಕ ಬ್ಯಾಟರ್ ಯಶಸ್ವಿ ಜೈಸ್ವಾಲ್ ಜೀವನಶ್ರೇಷ್ಠ 825 ಅಂಕಗಳೊಂದಿಗೆ ಬ್ಯಾಟರ್‌ಗಳ ರ‍್ಯಾಂಕಿಂಗ್ ನಲ್ಲಿ ದ್ವಿತೀಯ ಸ್ಥಾನಕ್ಕೆ ಜಿಗಿದಿದ್ದಾರೆ. ಇಂಗ್ಲೆಂಡ್‌ನ ಜೋ ರೂಟ್(903 ಅಂಕ)ನಂ.1 ಸ್ಥಾನದಲ್ಲಿದ್ದಾರೆ.
ತನ್ನ 30ನೇ ಶತಕ ಸಿಡಿಸಿದ ನಂತರ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು 9 ಸ್ಥಾನ ಭಡ್ತಿ ಪಡೆದು 13ನೇ ಸ್ಥಾನ ತಲುಪಿದ್ದಾರೆ. 736 ಅಂಕಗಳೊಂದಿಗೆ ಭಾರತದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಆರನೇ ಸ್ಥಾನ ಉಳಿಸಿಕೊಂಡಿದ್ದಾರೆ.
ಪರ್ತ್ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಆಡದೇ ಇದ್ದರೂ ಕೂಡ ಭಾರತದ ಸ್ಪಿನ್ ಜೋಡಿ ರವೀಂದ್ರ ಜಡೇಜ ಹಾಗೂ ಆರ್.ಅಶ್ವಿನ್ ಟೆಸ್ಟ್ ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ಮುಂಚೂಣಿಯಲ್ಲಿದ್ದಾರೆ.