ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌‌ : ಅಗ್ರ ಸ್ಥಾನ ವಶಪಡಿಸಿಕೊಂಡ ಭಾರತ

Update: 2024-03-10 15:44 GMT

Photo: twitter

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ಟೆಸ್ಟ್ ಸರಣಿಯನ್ನು 4-1 ಅಂತರದಿಂದ ಗೆದ್ದುಕೊಂಡಿರುವ ಭಾರತವು ಐಸಿಸಿ ಟೆಸ್ಟ್ ಟೀಮ್ ರ‍್ಯಾಂಕಿಂಗ್‌‌ ನಲ್ಲಿ ಆಸ್ಟ್ರೇಲಿಯವನ್ನು ಹಿಂದಿಕ್ಕಿ ನಂ.1 ಸ್ಥಾನಕ್ಕೆ ಮರಳಿದೆ.

ಹೈದರಾಬಾದ್‌ನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ ಕಡಿಮೆ ಅಂತರದಿಂದ ಸೋತಿದ್ದ ಭಾರತ ಆ ನಂತರ ಸ್ಫೂರ್ತಿಯು ಪ್ರತಿಹೋರಾಟವನ್ನು ನೀಡಿ ಸತತ 4 ಪಂದ್ಯಗಳಲ್ಲಿ ಜಯಭೇರಿ ಬಾರಿಸಿದೆ.

ವಿಶಾಖಪಟ್ಟಣ, ರಾಜ್‌ಕೋಟ್, ರಾಂಚಿ ಹಾಗೂ ಧರ್ಮಶಾಲಾಗಳಲ್ಲಿ ನಡೆದ ಟೆಸ್ಟ್ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಭಾರತವು ತನ್ನ ಪರಾಕ್ರಮವನ್ನು ಮೆರೆದು ಸರಣಿಯನ್ನು ವಶಪಡಿಸಿಕೊಂಡಿದೆ. 122 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಐಸಿಸಿ ಟೀಮ್ ರ‍್ಯಾಂಕಿಂಗ್‌‌ ನಲ್ಲಿ ನಂ.1 ಸ್ಥಾನವನ್ನು ಮತ್ತೆ ವಶಪಡಿಸಿಕೊಂಡಿದೆ.

117 ರೇಟಿಂಗ್ ಪಾಯಿಂಟ್ಸ್ ಪಡೆದ ಆಸ್ಟ್ರೇಲಿಯವು ದ್ವಿತೀಯ ಸ್ಥಾನಕ್ಕೆ ಕುಸಿದಿದೆ, ಇಂಗ್ಲೆಂಡ್ 111 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಮೂರನೇ ಸ್ಥಾನ ಆಕ್ರಮಿಸಿಕೊಂಡಿದೆ.

ಕ್ರೈಸ್ಟ್‌ ಚರ್ಚ್‌ನಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್-ಆಸ್ಟ್ರೇಲಿಯ ನಡುವಿನ ದ್ವಿತೀಯ ಟೆಸ್ಟ್‌ನ ಫಲಿತಾಂಶ ಏನೇ ಆಗಿದ್ದರೂ ಭಾರತದ ತನ್ನ ನಂ.1 ಸ್ಥಾನಕ್ಕೆ ಯಾವುದೇ ಧಕ್ಕೆ ಇಲ್ಲ.

ಕ್ರಿಕೆಟ್‌ನಲ್ಲಿ ಸ್ಥಿರ ಪ್ರದರ್ಶನ ನೀಡಿರುವ ಟೀಮ್ ಇಂಡಿಯಾ ಇದೀಗ ಎಲ್ಲ ಮಾದರಿಯ ಪಂದ್ಯಗಳ ರ‍್ಯಾಂಕಿಂಗ್‌‌ ನಲ್ಲಿ ಅಗ್ರ ಸ್ಥಾನ ಪಡೆದುಕೊಂಡಿದೆ.

ಏಕದಿನ ಕ್ರಿಕೆಟ್ ರ‍್ಯಾಂಕಿಂಗ್‌‌ ನಲ್ಲಿ ಭಾರತವು 121 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ನಂ.1 ಸ್ಥಾನದಲ್ಲಿದೆ. ಆಸ್ಟ್ರೇಲಿಯ 118 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಎರಡನೇ ಸ್ಥಾನದಲ್ಲಿದೆ.

ಅದೇ ರೀತಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ಭಾರತ ತಂಡ 266 ರೇಟಿಂಗ್ ಪಾಯಿಂಟ್ಸ್‌ನೊಂದಿಗೆ ಅಗ್ರ ಸ್ಥಾನದಲ್ಲಿದೆ. ಇಂಗ್ಲೆಂಡ್ 256 ಪಾಯಿಂಟ್ಸ್ ಗಳಿಸಿದೆ.

ಭಾರತವು 2023ರ ಸೆಪ್ಟಂಬರ್‌ನಿಂದ 2024ರ ಜನವರಿ ತನಕ ಎಲ್ಲ 3 ಮಾದರಿಯ ಕ್ರಿಕೆಟ್‌ನಲ್ಲಿ ನಂ.1 ಸ್ಥಾನದಲ್ಲಿತ್ತು. ದಕ್ಷಿಣ ಆಫ್ರಿಕಾ ವಿರುದ್ಧ ಸರಣಿಯನ್ನು 1-1ರಿಂದ ಡ್ರಾ ಸಾಧಿಸಿದ ನಂತರ ಟೆಸ್ಟ್ ಟೀಮ್ ರ‍್ಯಾಂಕಿಂಗ್‌‌ ನಲ್ಲಿ ಭಾರತವು ಎರಡನೇ ಸ್ಥಾನಕ್ಕೆ ಕುಸಿದಿತ್ತು.

ಭಾರತವು ಐಸಿಸಿ ವರ್ಲ್ಡ್ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಪಟ್ಟಿಯಲ್ಲಿ ಕೂಡ ಅಗ್ರ ಸ್ಥಾನದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News