ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌: ಜೈಸ್ವಾಲ್, ಗಿಲ್, ಜುರೆಲ್‌ ಗೆ ಭಡ್ತಿ

Update: 2024-02-28 15:39 GMT

ಜೈಸ್ವಾಲ್ | Photo: PTI 

ಹೊಸದಿಲ್ಲಿ: ಇಂಗ್ಲೆಂಡ್ ವಿರುದ್ಧ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ನಂತರ ಭಾರತದ ಮೂವರು ಯುವ ಕ್ರಿಕೆಟಿಗರು ಐಸಿಸಿ ಟೆಸ್ಟ್ ರ‍್ಯಾಂಕಿಂಗ್‌ ನಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ.

ಸರಣಿ ಗೆಲ್ಲಲು ನೆರವಾಗಿದ್ದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಯಶಸ್ವಿ ಜೈಸ್ವಾಲ್, ಶುಭಮನ್ ಗಿಲ್ ಹಾಗೂ ಧ್ರುವ ಜುರೆಲ್ ಅರ್ಧಶತಕವನ್ನು ಗಳಿಸಿದ್ದರು. ಐಸಿಸಿ ಪುರುಷ ಟೆಸ್ಟ್ ಬ್ಯಾಟರ್ಗಳ ರ‍್ಯಾಂಕಿಂಗ್‌ ನಲ್ಲಿ ಈ ಮೂವರು ಭಡ್ತಿ ಪಡೆದಿದ್ದಾರೆ.

ನ್ಯೂಝಿಲ್ಯಾಂಡ್‌ ನ ಕೇನ್ ವಿಲಿಯಮ್ಸನ್ ವಿಶ್ವದ ಅಗ್ರ ರ‍್ಯಾಂಕಿನ ಬ್ಯಾಟರ್ ಆಗಿ ಮುಂದುವರಿದಿದ್ದಾರೆ. ರಾಂಚಿಯಲ್ಲಿ ತನ್ನ 31ನೇ ಶತಕವನ್ನು ಗಳಿಸಿದ ನಂತರ ಇಂಗ್ಲೆಂಡ್‌ ನ ಜೋ ರೂಟ್ 3ನೇ ಸ್ಥಾನಕ್ಕೇರಿದ್ದಾರೆ.

ಜೈಸ್ವಾಲ್, ಗಿಲ್ ಹಾಗೂ ಜುರೆಲ್ ರ‍್ಯಾಂಕಿಂಗ್‌ ನಲ್ಲಿ ಮಹತ್ವದ ಪ್ರಗತಿ ಕಂಡಿದ್ದಾರೆ. ಜೈಸ್ವಾಲ್ ಮೂರು ಸ್ಥಾನ ಮೇಲಕ್ಕೇರಿ 12ನೇ ಸ್ಥಾನವನ್ನು, ಗಿಲ್ ನಾಲ್ಕು ಸ್ಥಾನ ಭಡ್ತಿ ಪಡೆದು 31ನೇ ಹಾಗೂ ಜುರೆಲ್ 31 ಸ್ಥಾನ ಮೇಲಕ್ಕೇರಿ 69ನೇ ರ‍್ಯಾಂಕಿಗೆ ತಲುಪಿದ್ದಾರೆ.

ಇಂಗ್ಲೆಂಡ್‌ ನ ಆರಂಭಿಕ ಬ್ಯಾಟರ್ ಝಾಕ್ ಕ್ರಾವ್ಲೆ ಟೆಸ್ಟ್ ಬ್ಯಾಟರ್ಗಳ ಪಟ್ಟಿಯಲ್ಲಿ 10 ಸ್ಥಾನ ಮೇಲಕ್ಕೇರಿ 17ನೇ ಸ್ಥಾನ ತಲುಪುವುದರೊಂದಿಗೆ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ. ಭಾರತ ವಿರುದ್ಧ 4ನೇ ಪಂದ್ಯದಲ್ಲಿ 42 ಹಾಗೂ 60 ರನ್ ಗಳಿಸಿ ತನ್ನ ಕೌಶಲ್ಯವನ್ನು ತೋರ್ಪಡಿಸಿದ್ದರು.

ರೂಟ್ ಟೆಸ್ಟ್ ಆಲ್ರೌಂಡರ್ಗಳ ಪಟ್ಟಿಯಲ್ಲಿ ಮೂರು ಸ್ಥಾನ ಜಿಗಿದು ನಾಲ್ಕನೇ ಸ್ಥಾನಕ್ಕೇರಿದ್ದಾರೆ.

ಭಾರತದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ನಾಲ್ಕನೇ ಟೆಸ್ಟ್ ಪಂದ್ಯದಿಂದ ವಿಶ್ರಾಂತಿ ಪಡೆದಿದ್ದರೂ ಟೆಸ್ಟ್ ಬೌಲರ್ಗಳ ರ‍್ಯಾಂಕಿಂಗ್‌ ನಲ್ಲಿ ಅಗ್ರ ಸ್ಥಾನದಲ್ಲಿ ಮುಂದುವರಿದಿದ್ದಾರೆ. ಇಂಗ್ಲೆಂಡ್ ವಿರುದ್ಧ 4ನೇ ಟೆಸ್ಟ್‌ ನ ಎರಡನೇ ಇನಿಂಗ್ಸ್ನಲ್ಲಿ ನಾಲ್ಕು ವಿಕೆಟ್ ಗೊಂಚಲು ಕಬಳಿಸಿದ್ದ ಬುಮ್ರಾ ಅವರ ಸಹ ಆಟಗಾರ ಕುಲದೀಪ್ ಯಾದವ್ 10 ಸ್ಥಾನ ಮೇಲಕ್ಕೇರಿ 32ನೇ ಸ್ಥಾನ ತಲುಪಿ ರ‍್ಯಾಂಕಿಂಗ್‌ ನಲ್ಲಿ ಜೀವನಶ್ರೇಷ್ಠ ಸಾಧನೆ ಮಾಡಿದ್ದಾರೆ.

ಟಿ20 ರ‍್ಯಾಂಕಿಂಗ್‌: ಮಿಚೆಲ್ ಮಾರ್ಷ್ ಗೆ ಭಡ್ತಿ

ಟಿ20 ರ‍್ಯಾಂಕಿಂಗ್‌ ನ ಟಿ20 ಬ್ಯಾಟರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯದ ಮಿಚೆಲ್ ಮಾರ್ಷ್ ಎರಡು ಸ್ಥಾನ ಮೇಲಕ್ಕೇರಿ 15ನೇ ಸ್ಥಾನ ತಲುಪಿದ್ದಾರೆ. ನ್ಯೂಝಿಲ್ಯಾಂಡ್ ವಿರುದ್ಧ ಇತ್ತೀಚೆಗೆ ಕೊನೆಗೊಂಡಿರುವ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ್ದ ಮಾರ್ಷ್ ಟಿ20 ಆಲ್ರೌಂಡರ್ಗಳ ರ‍್ಯಾಂಕಿಂಗ್‌ ನಲ್ಲಿ 21 ಸ್ಥಾನ ಭಡ್ತಿ ಪಡೆದು 13ನೇ ಸ್ಥಾನಕ್ಕೇರಿದ್ದಾರೆ.

ಬ್ಯಾಟಿಂಗ್ ವಿಭಾಗದಲ್ಲಿ ಟ್ರಾವಿಸ್ ಹೆಡ್ ಹಾಗೂ ಟಿಮ್ ಡೇವಿಡ್ ಪ್ರಗತಿ ಸಾಧಿಸಿದ್ದಾರೆ. ಹೆಡ್ 18 ಸ್ಥಾನ ಮೇಲಕ್ಕೇರಿ 19ನೇ ಸ್ಥಾನಕ್ಕೇರಿದರೆ, ಡೇವಿಡ್ ಆರು ಸ್ಥಾನ ಮೇಲಕ್ಕೇರಿ 22ನೇ ಸ್ಥಾನ ತಲುಪಿದ್ದಾರೆ.

ಟಿ20 ಬೌಲರ್ಗಳ ಪಟ್ಟಿಯಲ್ಲಿ ಆಸ್ಟ್ರೇಲಿಯದ ಜೋಶ್ ಹೇಝಲ್ವುಡ್ ಅಗ್ರ-10ರೊಳಗೆ ಮರು ಪ್ರವೇಶಿಸಿದ್ದಾರೆ. ಆರು ಸ್ಥಾನ ಮೇಲಕ್ಕೇರಿ 7ನೇ ಸ್ಥಾನ ಪಡೆದಿದ್ದಾರೆ. ಸರಣಿಯಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದ ನ್ಯೂಝಿಲ್ಯಾಂಡ್‌ ನ ಲಾಕಿ ಫರ್ಗ್ಯುಸನ್ ಇದೇ ವಿಭಾಗದಲ್ಲಿ 20 ಸ್ಥಾನ ಮೇಲಕ್ಕೇರಿ 29ನೇ ಸ್ಥಾನ ತಲುಪಿದ್ದಾರೆ.

ಏಕದಿನ ರ‍್ಯಾಂಕಿಂಗ್‌ ನಲ್ಲಿ ಸೀಮಿತ ಬದಲಾವಣೆಯಾಗಿದೆ. ಐಸಿಸಿ ಪುರುಷರ ಕ್ರಿಕೆಟ್ ವರ್ಲ್ಡ್ ಕಪ್ ಲೀಗ್-2ರಲ್ಲಿ ಉತ್ತಮ ಪ್ರದರ್ಶನ ನೀಡಿದ ಕಾರಣ ನಮೀಬಿಯಾದ ಬೆರ್ನಾರ್ಡ್ ಹಾಗೂ ಗೆರ್ಹಾರ್ಡ್ ಎರಾಸ್ಮಸ್ ಭಡ್ತಿ ಪಡೆದಿದ್ದಾರೆ. ಬೆರ್ನಾರ್ಡ್ ಏಕದಿನ ರ‍್ಯಾಂಕಿಂಗ್‌ ನಲ್ಲಿ 6 ಸ್ಥಾನ ಮೇಲಕ್ಕೇರಿ 11ನೇ ಸ್ಥಾನವನ್ನು ತಲುಪಿದ್ದಾರೆ. ಎರಾಸ್ಮಸ್ ಏಕದಿನ ಆಲ್ರೌಂಡರ್ಗಳ ಪಟ್ಟಿಯಲ್ಲಿ 8 ಸ್ಥಾನ ಮೇಲಕ್ಕೇರಿ ಆರನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News