ಐಸಿಸಿ ಮಹಿಳೆಯರ ಏಕದಿನ ರ‍್ಯಾಂಕಿಂಗ್ | ದೀಪ್ತಿ ಶರ್ಮಾ ಜೀವನಶ್ರೇಷ್ಠ ಸಾಧನೆ

Update: 2024-10-29 17:23 GMT

 ದೀಪ್ತಿ ಶರ್ಮಾ | PC : X \ @the_bridge_in

ಹೊಸದಿಲ್ಲಿ : ಭಾರತದ ಸ್ಪಿನ್ನರ್ ದೀಪ್ತಿ ಶರ್ಮಾ ಮಂಗಳವಾರ ಬಿಡುಗಡೆಯಾಗಿರುವ ಐಸಿಸಿ ಮಹಿಳೆಯರ ಏಕದಿನ ಆಟಗಾರ್ತಿಯರ ರ‍್ಯಾಂಕಿಂಗ್‌ ನಲ್ಲಿ ಜೀವನಶ್ರೇಷ್ಠ ರೇಟಿಂಗ್ ಪಾಯಿಂಟ್ಸ್ ಪಡೆದು ಎರಡನೇ ಸ್ಥಾನಕ್ಕೇರಿದ್ದಾರೆ.

ಪ್ರಸ್ತುತ ಸ್ವದೇಶದಲ್ಲಿ ನಡೆಯುತ್ತಿರುವ ನ್ಯೂಝಿಲ್ಯಾಂಡ್ ವಿರುದ್ಧದ ಸೀಮಿತ ಓವರ್ ಕ್ರಿಕೆಟ್ ಸರಣಿಯಲ್ಲಿ ದೀಪ್ತಿ ಉತ್ತಮ ಪ್ರದರ್ಶನ ನೀಡಿದ್ದರು. ಯುಎಇನಲ್ಲಿ ನಡೆದಿದ್ದ ಐಸಿಸಿ ಮಹಿಳೆಯರ ಟಿ-20 ವಿಶ್ವಕಪ್‌ನಲ್ಲೂ ಯಶಸ್ಸು ಕಂಡಿದ್ದರು.

ಈ ತನಕ ದೀಪ್ತಿ ಅವರು ಎರಡು ಪಂದ್ಯಗಳಲ್ಲಿ ಮೂರು ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅವರ ಇಕಾನಮಿ ರೇಟ್(3.42)ಸರಣಿಯಲ್ಲಿ ಎಲ್ಲ ಬೌಲರ್‌ಗಳಿಗಿಂತಲೂ ಉತ್ತಮವಾಗಿದೆ. ಈ ಪ್ರದರ್ಶನವೇ ದೀಪ್ತಿ ಅವರನ್ನು ಏಕದಿನ ಬೌಲರ್ ರ‍್ಯಾಂಕಿಂಗ್‌ ನಲ್ಲಿ ಎರಡನೇ ಸ್ಥಾನಕ್ಕೇರುವಂತೆ ಮಾಡಿದೆ. ಸದ್ಯ ನಂ.1 ಬೌಲರ್ ಆಗಿರುವ ಇಂಗ್ಲೆಂಡ್‌ನ ಸೋಫಿ ಎಕ್ಲೆಸ್ಟೋನ್‌ ಗೆ ಪೈಪೋಟಿ ನೀಡುತ್ತಿದ್ದಾರೆ.

ಮಹಿಳೆಯರ ಏಕದಿನ ಬ್ಯಾಟರ್‌ಗಳ ರ‍್ಯಾಂಕಿಂಗ್‌ ನಲ್ಲಿ ನ್ಯೂಝಿಲ್ಯಾಂಡ್‌ ನ ಸೋಫಿ ಡಿವೈನ್ ಮೂರು ಸ್ಥಾನ ಮೇಲಕ್ಕೇರಿ 8ನೇ ಸ್ಥಾನ ತಲುಪಿದ್ದಾರೆ. ಮೆಲಿ ಕೆರ್ರ‌್‌ ಒಂದು ಸ್ಥಾನ ಭಡ್ತಿ ಪಡೆದು 11ನೇ ಸ್ಥಾನದಲ್ಲಿದ್ದಾರೆ. ಸುಝಿ ಬೇಟ್ಸ್ ಕೂಡ ಎರಡು ಸ್ಥಾನ ಮೇಲಕ್ಕೇರಿ 15ನೇ ಸ್ಥಾನವನ್ನು, ಮ್ಯಾಡಿ ಗ್ರೀನ್ 7 ಸ್ಥಾನ ಭಡ್ತಿ ಪಡೆದು 18ನೇ ಸ್ಥಾನ ಪಡೆದಿದ್ದಾರೆ. ಇವರೆಲ್ಲರೂ ಭಾರತ ವಿರುದ್ಧ ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿದ್ದಾರೆ.

ಭಾರತದ ಪರ ಜೆಮಿಮಾ ರೊಡ್ರಿಗಸ್ ಮಹತ್ವದ ಮುನ್ನಡೆ ಪಡೆದಿದ್ದು, ಬ್ಯಾಟಿಂಗ್ ರ‍್ಯಾಂಕಿಂಗ್‌ ನಲ್ಲಿ ಮೂರು ಸ್ಥಾನ ಮೇಲಕ್ಕೇರಿ 30ನೇ ಸ್ಥಾನ ತಲುಪಿದ್ದಾರೆ.

ಮಹಿಳೆಯರ ಏಕದಿನ ಆಲ್‌ರೌಂಡರ್ ರ‍್ಯಾಂಕಿಂಗ್‌ ನಲ್ಲಿ ದೀಪ್ತಿ ಶರ್ಮಾ ಮೂರನೇ ಸ್ಥಾನಕ್ಕೇರಿದರೆ, ಡಿವೈನ್ 7ನೇ ಸ್ಥಾನದಲ್ಲಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News