ಅಜೇಯವಾಗಿ ಲೀಗ್ ಮುಗಿಸುವ ನಿರೀಕ್ಷೆಯಲ್ಲಿ ಭಾರತ

Update: 2023-11-11 17:39 GMT

Photo: cricketworldcup.com

ಬೆಂಗಳೂರು: ವಿಶ್ವಕಪ್ ನಲ್ಲಿ ತನ್ನ ಪ್ರಾಬಲ್ಯ ಮುಂದುವರಿಸುವ ಹುಮ್ಮಸ್ಸಿನಲ್ಲಿರುವ ಭಾರತ ಕ್ರಿಕೆಟ್ ತಂಡ ರವಿವಾರ ಚಿನ್ನಸ್ವಾಮಿ ಸ್ಟೇಡಿಯಮ್ ಲ್ಲಿ ನಡೆಯಲಿರುವ ಪಂದ್ಯಾವಳಿಯ 45ನೇ ಹಾಗೂ ಕೊನೆಯ ಲೀಗ್ ಪಂದ್ಯದಲ್ಲಿ ನೆದರ್ಲ್ಯಾಂಡ್ಸ್ ತಂಡವನ್ನು ಎದುರಿಸಲಿದೆ. ಈ ಪಂದ್ಯದಲ್ಲಿ ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ 50ನೇ ಏಕದಿನ ಶತಕವನ್ನು ಬಾರಿಸಿ ಮಹತ್ವದ ಮೈಲಿಗಲ್ಲು ಸ್ಥಾಪಿಸುವತ್ತ ಚಿತ್ತ ಹರಿಸಿದ್ದಾರೆ.

ಭಾರತವು ಸತತ 8 ಪಂದ್ಯಗಳಲ್ಲಿ ಜಯ ಸಾಧಿಸಿ ಈಗಾಗಲೇ ಅಂಕಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದು ಸೆಮಿ ಫೈನಲ್ಗೆ ಪ್ರವೇಶಿಸಿದೆ. ವೈಯಕ್ತಿಕ ಮೈಲಿಗಲ್ಲು ಹಾಗೂ ತಂಡದ ಗುರಿ ತಲುಪುವ ನಿಟ್ಟಿನಲ್ಲಿ ವಿಶ್ವಕಪ್ ನಲ್ಲಿ ಪ್ರತಿ ಪಂದ್ಯವೂ ಮುಖ್ಯವಾಗಿದೆ.

ಮತ್ತೊಂದೆಡೆ ನೆದರ್ಲ್ಯಾಂಡ್ಸ್ ತಂಡ 8 ಪಂದ್ಯಗಳಲ್ಲಿ ಕೇವಲ 2ರಲ್ಲಿ ಜಯ ಸಾಧಿಸಿ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲಿದೆ. ಹಿಂದಿನ ಪಂದ್ಯದಲ್ಲಿ ಸ್ಕಾಟ್ ಎಡ್ವರ್ಡ್ಸ್ ಬಳಗವು 2019ರ ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ 160 ರನ್ ನಿಂದ ಸೋತಿದೆ. ಐಸಿಸಿ ಚಾಂಪಿಯನ್ಸ್ ಟ್ರೋಫಿ-2025ರಲ್ಲಿ ಸ್ಥಾನ ಗಿಟ್ಟಿಸುವ ಸ್ಪರ್ಧೆಯಲ್ಲಿರಲು ಭಾರತ ವಿರುದ್ಧದ ಈ ಪಂದ್ಯವನ್ನು ಗೆಲ್ಲುವುದು ನೆದರ್ಲ್ಯಾಂಡಡ್ಸ್ ಗೆ ಮುಖ್ಯವಾಗಿದೆ.

ದಕ್ಷಿಣ ಆಫ್ರಿಕಾ ವಿರುದ್ಧ ಕೋಲ್ಕತಾದಲ್ಲಿ ದಾಖಲೆಯ 49ನೇ ಏಕದಿನ ಶತಕ ಬಾರಿಸಿದ್ದ ಕೊಹ್ಲಿ ಬ್ಯಾಟಿಂಗ್ ಮಾಸ್ಟರ್ ಸಚಿನ್ ತೆಂಡುಲ್ಕರ್ ಹೆಸರಲ್ಲಿದ್ದ ವಿಶ್ವ ದಾಖಲೆಯನ್ನು ಸರಿಗಟ್ಟಿದ್ದರು. ಇದೀಗ ಐತಿಹಾಸಿಕ 50ನೇ ಶತಕ ಗಳಿಸಲು ಕಾತರದಿಂದಿದ್ದಾರೆ. ಕೊಹ್ಲಿ ಟೂರ್ನಿಯಲ್ಲಿ ಈ ತನಕ 8 ಪಂದ್ಯಗಳಲ್ಲಿ 2 ಶತಕ ಹಾಗೂ 4 ಅರ್ಧಶತಕಗಳ ಸಹಿತ ಒಟ್ಟು 543 ರನ್ ಗಳಿಸಿ ಭಾರತದ ಪರ ಗರಿಷ್ಠ ರನ್ ಗಳಿಸಿದ್ದಾರೆ. ತನ್ನ ವೃತ್ತಿಜೀವನದಲ್ಲಿ ಮೊದಲ ಬಾರಿ ವಿಶ್ವಕಪ್ ಟೂರ್ನಿಯಲ್ಲಿ 600ಕ್ಕೂ ಅಧಿಕ ರನ್ ಗಳಿಸುವ ವಿಶ್ವಾಸದಲ್ಲಿದ್ದಾರೆ. ನಾಯಕ ರೋಹಿತ್ ಶರ್ಮಾ ಒಂದು ಶತಕ, 2 ಅರ್ಧಶತಕಗಳ ಸಹಿತ 8 ಪಂದ್ಯಗಳಲ್ಲಿ ಒಟ್ಟು 442 ರನ್ ಗಳಿಸಿದ್ದಾರೆ. ಪವರ್ ಪ್ಲೇ ನಲ್ಲಿ ಭಾರತಕ್ಕೆ ಬಿರುಸಿನ ಆರಂಭ ಒದಗಿಸುತ್ತಿದ್ದಾರೆ.

ಐಪಿಎಲ್ ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರತಿನಿಧಿಸುತ್ತಿರುವ ಕೊಹ್ಲಿ ಇದೀಗ ಆರ್ಸಿಬಿಯ ತವರು ಮೈದಾನ ಚಿನ್ನಸ್ವಾಮಿ ಸ್ಟೇಡಿಯಮ್ನಲ್ಲಿ ತನ್ನ ನೆಚ್ಚಿನ ಪ್ರೇಕ್ಷಕರ ಸಮ್ಮುಖದಲ್ಲಿ ನೆದರ್ಲ್ಯಾಂಡ್ಸ್ ವಿರುದ್ಧ 50ನೇ ಶತಕ ಗಳಿಸುವ ಅಪೂರ್ವ ಅವಕಾಶ ಪಡೆದಿದ್ದಾರೆ.

ಕೊಹ್ಲಿ ಸದ್ಯ ಭರ್ಜರಿ ಫಾರ್ಮ್ ಲ್ಲಿದ್ದಾರೆ. ಟೀಮ್ ಮ್ಯಾನೇಜ್ಮೆಂಟ್ ಸೂರ್ಯಕುಮಾರ್ ಯಾದವ್ ರಿಂದಲೂ ರನ್ ನಿರೀಕ್ಷಿಸುತ್ತಿದೆ. ಸೂರ್ಯ ಪ್ರಸ್ತುತ ಟೂರ್ನಮೆಂಟ್ ನಲ್ಲಿ ಸಾಧಾರಣ ರನ್ ಗಳಿಸಿದ್ದಾರೆ. ಹಾರ್ದಿಕ್ ಪಾಂಡ್ಯ ಅನುಪಸ್ಥಿತಿಯಲ್ಲಿ ಸೂರ್ಯಕುಮಾರ್ ಆಡುವ 11ರ ಬಳಗದಲ್ಲಿ ಸೇರಿಕೊಂಡಿದ್ದಾರೆ. ನೆದರ್ಲ್ಯಾಂಡ್ಸ್ ವಿರುದ್ಧದ ಪಂದ್ಯವು ಸೂರ್ಯಕುಮಾರ್ ರನ್ ಬರ ನೀಗಿಸಲು ಉತ್ತಮ ಅವಕಾಶವಾಗಿದೆ.

ರೋಹಿತ್ ಶರ್ಮಾ ಹಾಗೂ ಶುಭಮನ್ ಗಿಲ್ ನಡುವಿನ ಆರಂಭಿಕ ಜೊತೆಯಾಟವು ಮೂರು ಪಂದ್ಯಗಳಲ್ಲಿ ಯಶಸ್ವಿಯಾಗಿತ್ತು. ಆದರೆ ಇತರ ಐದು ಪಂದ್ಯಗಳಲ್ಲಿ ಉತ್ತಮ ಜೊತೆಯಾಟ ಮೂಡಿಬರಲಿಲ್ಲ..

ಬೌಲಿಂಗ್ ವಿಭಾಗದಲ್ಲಿ ಭಾರತದ ವೇಗಿಗಳಾದ-ಜಸ್ಟ್ರೀತ್ ಬುಮ್ರಾ, ಮುಹಮ್ಮದ್ ಶಮಿ ಹಾಗೂ ಮುಹಮ್ಮದ್ ಸಿರಾಜ್ ಎದುರಾಳಿ ಬ್ಯಾಟರ್ ಗಳನ್ನು ನಿರಂತರವಾಗಿ ಕಾಡುತ್ತಿದ್ದಾರೆ.

ಗೆಲುವಿನ ಅಲೆಯಲ್ಲಿ ತೇಲುತ್ತಿರುವ ಭಾರತವನ್ನು ಎದುರಿಸುವುದು ನೆದರ್ಲ್ಯಾಂಡ್ಸ್ ಗೆ ಒಂದು ದೊಡ್ಡ ಸವಾಲಾಗಿದೆ. ತಂಡದ ಅಗ್ರ ಕ್ರಮಾಂಕದ ಬ್ಯಾಟರ್ ಗಳು ರನ್ ಗಾಗಿ ಪರದಾಟ ನಡೆಸುತ್ತಿದ್ದಾರೆ. ಚಿನ್ನಸ್ವಾಮಿ ಸ್ಟೇಡಿಯಮ್ ಪಿಚ್ ನಲ್ಲಿ ಭಾರತದ ಬಲಿಷ್ಠ ಬೌಲಿಂಗ್ ದಾಳಿಯನ್ನು ಎದುರಿಸುವುದು ಡಚ್ ಪಾಳಯಕ್ಕೆ ಕಠಿಣ ಸವಾಲಾಗಿದೆ.

ನಾಯಕ ಎಡ್ವರ್ಡ್ಸ್ 2 ಅರ್ಧಶತಕ ಸಹಿತ ಒಟ್ಟು 242 ರನ್ ಗಳಿಸಿ ನೆದರ್ಲ್ಯಾಂಡ್ಸ್ನ ಪ್ರಮುಖ ಬ್ಯಾಟರ್ ಆಗಿದ್ದಾರೆ. ಸೈಬ್ರಾಂಡ್ ಎಂಗಲ್ಬ್ರೆಕ್ಟ್ ನೆದರ್ಲ್ಯಾಂಡ್ಸ್ ಪರ ಗರಿಷ್ಠ ರನ್(7 ಪಂದ್ಯಗಳಲ್ಲಿ 255 ರನ್)ಗಳಿಸಿದ್ದಾರೆ. ಶ್ರೀಲಂಕಾ(70) ಹಾಗೂ ಅಫ್ಘಾನಿಸ್ತಾನ(58)ವಿರುದ್ಧ ಅರ್ಧಶತಕ ಗಳಿಸಿದ್ದಾರೆ.

ಬಾಸ್ ಡಿ ಲೀಡ್ ಡಚ್ ತಂಡದ ಅತಿ ಯಶಸ್ವಿ ಆಲ್ರೌಂಡರ್ ಆಗಿದ್ದಾರೆ. ಡಿ ಲೀಡ್ 127 ರನ್ ಹಾಗೂ 14 ವಿಕೆಟ್ ಗಳನ್ನು ಪಡೆದಿದ್ದಾರೆ. ಆರ್ಯನ್ ದತ್ ಪ್ರಸಕ್ತ ಟೂರ್ನಿಯಲ್ಲಿ ನೆದರ್ಲ್ಯಾಂಡಡ್ಸ್ ನ ಪ್ರಮುಖ ಸ್ಪಿನ್ನರ್ ಆಗಿದ್ದಾರೆ. ದತ್ 5.30ರ ಇಕಾನಮಿ ರೇಟ್ ನಲ್ಲಿ 11 ವಿಕೆಟ್ ಳನ್ನು ಪಡೆದಿದ್ದಾರೆ. ಪೌಲ್ ವ್ಯಾನ್ ಮೀಕೆರನ್ ಕೂಡ ಟೂರ್ನಿಯಲ್ಲಿ 11 ವಿಕೆಟ್ ಳನ್ನು ಪಡೆದಿದ್ದಾರೆ.

ಭಾರತ ಸ್ಪಷ್ಟ ಪ್ರಾಬಲ್ಯ ಸಾಧಿಸುತ್ತಿದ್ದರೂ ಪ್ರತಿ ಪಂದ್ಯವು ತನ್ನದೇ ಸವಾಲುಗಳು ಹಾಗೂ ಅವಕಾಶಗಳನ್ನು ಹೊಂದಿದೆ. ಲೀಗ್ ಹಂತದ ತಮ್ಮ ಕೊನೆಯ ಪಂದ್ಯಗಳಲ್ಲಿ ಉಭಯ ತಂಡಗಳು ಉತ್ತಮ ಪ್ರದರ್ಶನ ನೀಡುವ ನಿಟ್ಟಿನಲ್ಲಿ ಗಮನ ಹರಿಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News