2029ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಗೆ ಬಿಡ್ ಸಲ್ಲಿಸಲು ಭಾರತ ಉತ್ಸುಕ
ಹೊಸದಿಲ್ಲಿ: 2027ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಕ್ರೀಡಾಕೂಟದ ಆತಿಥ್ಯ ವಹಿಸುವ ಇರಾದೆಯಿಂದ ಹಿಂದೆ ಸರಿದ ಬಳಿಕ, 2029ರ ಆವೃತ್ತಿಯ ಕ್ರೀಡಾಕೂಟದ ಆಯೋಜನೆಗೆ ಬಿಡ್ ಸಲ್ಲಿಸಲು ಭಾರತ ಮುಂದಾಗಿದೆ. ಈ ವಿಷಯವನ್ನು ರವಿವಾರ ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
2027ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಆಯೋಜನೆಯ ಹಕ್ಕುಗಳಿಗಾಗಿ ಬಿಡ್ ಸಲ್ಲಿಸಲು ಭಾರತೀಯ ಅತ್ಲೆಟಿಕ್ಸ್ ಫೆಡರೇಶನ್ ಮೊದಲು ಪರಿಶೀಲನೆ ನಡೆಸಿತ್ತು. ಆದರೆ, ಫೆಡರೇಶನ್ ಈ ಯೋಜನೆಯನ್ನು ಕೈಬಿಟ್ಟು, 2029ರ ಆವೃತ್ತಿಯ ಕ್ರೀಡಾಕೂಟದ ಆತಿಥ್ಯ ವಹಿಸುವ ಬಗ್ಗೆ ಪರಿಶೀಲನೆ ನಡೆಸುತ್ತಿದೆ ಎನ್ನುವ ವಿಷಯ ಈಗ ಬಹಿರಂಗವಾಗಿದೆ.
“2029ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಗೆ ಬಿಡ್ ಸಲ್ಲಿಸಲು ನಾವು ಉತ್ಸುಕರಾಗಿದ್ದೇವೆ’’ ಎಂದು ಫೆಡರೇಶನ್ನ ಹಿರಿಯ ಉಪಾಧ್ಯಕ್ಷೆ ಅಂಜು ಬಾಬಿ ಜಾರ್ಜ್ ಪಿಟಿಐಗೆ ತಿಳಿಸಿದ್ದಾರೆ. ಅವರು ಫೆಡರೇಶನ್ನ ವಾರ್ಷಿಕ ಮಹಾಸಭೆಯ ನೇಪಥ್ಯದಲ್ಲಿ ಈ ವಿಷಯವನ್ನು ತಿಳಿಸಿದರು.
“2036ರ ಒಲಿಂಪಿಕ್ಸ್ ಮತ್ತು 2030ರ ಯುವ ಒಲಿಂಪಿಕ್ಸ್ಗಳನ್ನು ಆಯೋಜಿಸುವ ಆಸಕ್ತಿಯನ್ನೂ ಭಾರತ ವ್ಯಕ್ತಪಡಿಸಿದೆ’’ ಎಂದು ಅವರು ಹೇಳಿದರು.
“2029ರ ವಿಶ್ವ ಅತ್ಲೆಟಿಕ್ಸ್ ಚಾಂಪಿಯನ್ಶಿಪ್ಸ್ ಪಂದ್ಯಾವಳಿಯನ್ನು ಆಯೋಜಿಸಲು ನಮಗೆ ಸಾಧ್ಯವಾದರೆ ಅದು ನಮ್ಮ ಬೆಳವಣಿಗೆಗೆ ಪೂರಕವಾಗಲಿದೆ’’ ಎಂದು ಮಾಜಿ ಲಾಂಗ್ಜಂಪ್ ಪಟು ಹೇಳಿದರು.