ಸೆಮಿ ಫೈನಲ್ ನಲ್ಲಿ ಭಾರತ-ನ್ಯೂಝಿಲ್ಯಾಂಡ್ ಸೆಣಸಾಟ

Update: 2023-11-11 17:33 GMT

Photo- PTI

ಕೋಲ್ಕತಾ: ಇಂಗ್ಲೆಂಡ್ ತಂಡ ಶನಿವಾರ ಈಡನ್ ಗಾರ್ಡನ್ಸ್ ನಲ್ಲಿ 9 ವಿಕೆಟ್ ನಷ್ಟಕ್ಕೆ 337 ರನ್ ಗಳಿಸುವ ಮೂಲಕ ವಿಶ್ವಕಪ್ನ ಸೆಮಿ ಫೈನಲ್ ಹಂತಕ್ಕೇರುವ ಪಾಕಿಸ್ತಾನದ ಆಸೆಗೆ ತಣ್ಣೀರೆರಚಿದೆ. ಇದೀಗ ಒಟ್ಟು 10 ಅಂಕ ಗಳಿಸಿರುವ ನ್ಯೂಝಿಲ್ಯಾಂಡ್ ತಂಡ ಅಧಿಕೃತವಾಗಿ 4ನೇ ತಂಡವಾಗಿ ಟೂರ್ನಿಯ ನಾಕೌಟ್ ಹಂತಕ್ಕೆ ಪ್ರವೇಶಿಸಿದೆ.

8 ಪಂದ್ಯಗಳಲ್ಲಿ 8 ಅಂಕವನ್ನು ಗಳಿಸಿದ್ದ ಪಾಕಿಸ್ತಾನವು ನ್ಯೂಝಿಲ್ಯಾಂಡ್ನ ನೆಟ್ ರನ್ರೇಟ್ ಅನ್ನು ಮೀರಿಸಿ ಅಂತಿಮ-4ರ ಹಂತ ತಲುಪಲು 6.4 ಓವರ್ಗಳಲ್ಲಿ ಗುರಿ ತಲುಪಬೇಕಾಗಿತ್ತು. ಆದರೆ ಇದು ಅಸಾಧ್ಯದ ಮಾತು. ಪಾಕ್ ತಂಡ 40 ಎಸೆತಗಳಲ್ಲಿ 40 ಸಿಕ್ಸರ್ ಗಳನ್ನು ಸಿಡಿಸಿದರೂ ಕೂಡ 240 ರನ್ ಗಳಿಸಲಷ್ಟೇ ಸಾಧ್ಯ. ಕನಿಷ್ಠ 188 ರನ್ ಗಳಿಸಿದರೆ ಅಂಕಪಟ್ಟಿಯಲ್ಲಿ ಅಗ್ರ-5ರೊಳಗೆ ಸ್ಥಾನ ಪಡೆಯಬಹುದು.

1992ರ ಚಾಂಪಿಯನ್ ಪಾಕಿಸ್ತಾನ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದ್ದರೆ ದೊಡ್ಡ ಮೊತ್ತ ಗಳಿಸುವ ಅವಕಾಶವಿತ್ತು. ಆದರೆ ಕನಿಷ್ಠ 287 ರನ್ ಅಂತರದಿಂದ ಜಯ ಸಾಧಿಸಿದ್ದರೆ ಮಾತ್ರ ಸೆಮಿ ಫೈನಲ್ ಗೆ ತಲುಪುವ ಅವಕಾಶವಿತ್ತು.

ಬಲಿಷ್ಠ ಬ್ಯಾಟಿಂಗ್ ಸರದಿ ಹೊಂದಿರುವ ಇಂಗ್ಲೆಂಡ್ ತಂಡ ತನ್ನ ಕೊನೆಯ ಲೀಗ್ ಪಂದ್ಯದಲ್ಲಿ ಬ್ಯಾಟಿಂಗ್ ಶಕ್ತಿ ಪ್ರದರ್ಶಿಸಿದೆ. ಬೆನ್ ಸ್ಟೋಕ್ಸ್, ಜೋ ರೂಟ್ ಹಾಗೂ ಜಾನಿ ಬೈರ್ಸ್ಟೋ ಅರ್ಧಶತಕವನ್ನು ಗಳಿಸಿ 2019ರ ಚಾಂಪಿಯನ್ ತಂಡವು ಪಾಕಿಸ್ತಾನದ ವಿರುದ್ಧ ಗರಿಷ್ಠ ಮೊತ್ತ ಗಳಿಸಲು ನೆರವಾದರು.

ಗಾಯದ ಸಮಸ್ಯೆಯಿಂದಾಗಿ ಮೊದಲ ಮೂರು ಪಂದ್ಯಗಳಿಂದ ಹೊರಗುಳಿದಿದ್ದ ಸ್ಟೋಕ್ಸ್ 76 ಎಸೆತಗಳ ಇನಿಂಗ್ಸ್ ನಲ್ಲಿ 84 ರನ್ ಗಳಿಸಿದರು. ಜಾನಿ ಬೈರ್ಸ್ಟೋ(59 ರನ್) ಹಾಗೂ ಜೋ ರೂಟ್(60 ರನ್)ಇಂಗ್ಲೆಂಡ್ ಮೊತ್ತ ಹಿಗ್ಗಿಸುವಲ್ಲಿ ಕಾಣಿಕೆ ನೀಡಿದರು.

ಅಂಕಪಟ್ಟಿಯಲ್ಲಿ ಅಗ್ರ ಸ್ಥಾನ ಪಡೆದಿರುವ ಭಾರತವು ನ.15ರಂದು ಮುಂಬೈನ ವಾಂಖೆಡೆ ಸ್ಟೇಡಿಯಮ್ ನಲ್ಲಿ ನ್ಯೂಝಿಲ್ಯಾಂಡ್ ತಂಡವನ್ನು ಎದುರಿಸಲಿದೆ. ದಕ್ಷಿಣ ಆಫ್ರಿಕಾ ಹಾಗೂ ಆಸ್ಟ್ರೇಲಿಯ ಕೋಲ್ಕತಾದಲ್ಲಿ ನ.16ರಂದು 2ನೇ ಸೆಮಿ ಫೈನಲ್ ನಲ್ಲಿ ಸೆಣಸಾಡಲಿವೆ.

ಸತತ 2ನೇ ಬಾರಿ ಮುಖಾಮುಖಿ

ಭಾರತ ಹಾಗೂ ನ್ಯೂಝಿಲ್ಯಾಂಡ್ ಸತತ 2ನೇ ವಿಶ್ವಕಪ್ನಲ್ಲಿ ಸೆಮಿ ಫೈನಲ್ ನಲ್ಲಿ ಮುಖಾಮುಖಿಯಾಗುತ್ತಿವೆ. 2019ರ ವಿಶ್ವಕಪ್ನಲ್ಲಿ ಕಿವೀಸ್ ತಂಡ ಭಾರತವನ್ನು 18 ರನ್ ಅಂತರದಿಂದ ಸೋಲಿಸಿ ಫೈನಲ್ ಗೆ ತಲುಪಿತ್ತು. 2023ರ ವಿಶ್ವಕಪ್ ನಲ್ಲಿ ರೌಂಡ್ ರಾಬಿನ್ ಮುಖಾಮುಖಿಯಲ್ಲಿ ಭಾರತವು ಕಿವೀಸ್ ಎದುರು 4 ವಿಕೆಟ್ಗಳಿಂದ ಜಯ ಸಾಧಿಸಿದೆ. ಕಳೆದ ಬಾರಿಯ ಸೆಮಿ ಫೈನಲ್ ಸೋಲಿಗೆ ಸೇಡು ತೀರಿಸಿಕೊಳ್ಳುವ ವಿಶ್ವಾಸದಲ್ಲಿದೆ.

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News