ವಿಶ್ವಕಪ್‌ನಲ್ಲಿ ಪಾಕಿಸ್ತಾನ ಆಡುವುದೇ ಅನುಮಾನ: ಸರ್ಕಾರ ಇನ್ನೂ ಒಪ್ಪಿಗೆ ನೀಡಿಲ್ಲ ಎಂದ ಪಿಸಿಬಿ!

Update: 2023-06-28 04:45 GMT

ಫೋಟೋ- (en.wikipedia.org)

ಮುಂಬೈ: ವಿಶ್ವದ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ಒಂದಾದ ಅಹ್ಮದಾಬಾದ್ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ವಿಶ್ವಕಪ್ ಏಕದಿನ ಪಂದ್ಯಾವಳಿಯ ಭಾರತ- ಪಾಕಿಸ್ತಾನ ಗುಂಪು ಹಂತದ ಪಂದ್ಯ ನಡೆಯಲಿದೆ ಎಂದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸುತ್ತಿದ್ದಂತೆಯೇ, ಇದರಲ್ಲಿ ಪಾಲ್ಗೊಳ್ಳಲು ಸರ್ಕಾರದ ಅನುಮತಿ ಅಗತ್ಯ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಹೇಳಿಕೆ ನೀಡಿದೆ.

"ಪಂದ್ಯ ನಡೆಯುವ ಸ್ಥಳಗಳೂ ಸೇರಿದಂತೆ ಪಾಕಿಸ್ತಾನ ಕ್ರಿಕೆಟ್ ತಂಡ ಭಾರತದಲ್ಲಿ ಕೈಗೊಳ್ಳುವ ಯಾವುದೇ ಪ್ರವಾಸಕ್ಕೆ ಪಾಕಿಸ್ತಾನ ಸರ್ಕಾರದ ಅನುಮತಿ ಅಗತ್ಯ. ಈ ಬಗ್ಗೆ ಅಗತ್ಯ ಮಾರ್ಗದರ್ಶನಕ್ಕಾಗಿ ಸರ್ಕಾರವನ್ನು ಕೋರಿದ್ದೇವೆ. ಅವರಿಂದ ಅನುಮತಿ ಬಂದ ತಕ್ಷಣ ಕೂಟದ ಸಂಯೋಜಕರಿಗೆ ಈ ಬಗ್ಗೆ ಮಾಹಿತಿ ನೀಡುತ್ತೇವೆ. ಐಸಿಸಿ ಕರಡು ವೇಳಾಪಟ್ಟಿಯನ್ನು ನಮ್ಮೊಂದಿಗೆ ಹಂಚಿಕೊಂಡು ಅಭಿಪ್ರಾಯ ಕೇಳಿದಾಗಲೇ ನಮ್ಮ ನಿಲುವನ್ನು ಸ್ಪಷ್ಟಪಡಿಸಿದ್ದೇವೆ" ಎಂದು ಪಿಸಿಬಿ ವಕ್ತಾರ ಹೇಳಿದ್ದಾರೆ. ಆದರೆ ಪಾಕಿಸ್ತಾನ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ ಎಂಬ ವಿಶ್ವಾಸವನ್ನು ಐಸಿಸಿ ಹೊಂದಿದೆ.

ವಿಶ್ವಕಪ್ ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುವ ಸಂಬಂಧ ಪಾಕಿಸ್ತಾನ ಈಗಾಗಲೇ ಒಪ್ಪಂದಕ್ಕೆ ಸಹಿ ಮಾಡಿದೆ. ಅವರು ಶೇಕಡ 100ರಷ್ಟು ಅಲ್ಲಿರುತ್ತಾರೆ ಎಂಬ ನಿರೀಕ್ಷೆ ನಮ್ಮದು. ಅವರು ಭಾಗವಹಿಸದೇ ಇರುವ ಯಾವುದೇ ಸೂಚನೆಗಳಿಲ್ಲ. ಪಾಕಿಸ್ತಾನ ಅವಿಭಾಜ್ಯ ಅಂಗವಾಗಿರುವ 10 ತಂಡಗಳ ವಿಶ್ವಕಪ್ ಪಂದ್ಯಾವಳಿಯನ್ನು ನಾವು ಪ್ರಸ್ತುತಪಡಿಸಲಿದ್ದೇವೆ. ಎಲ್ಲ ಸದಸ್ಯ ದೇಶಗಳೂ ತಮ್ಮ ದೇಶದ ಕಾನೂನುಗಳನ್ನು ಗೌರವಿಸಬೇಕು ಹಾಗೂ ಅದಕ್ಕೆ ಬದ್ಧರಾಗಬೇಕು. ಆದರೆ ಈ ಕೂಟಕ್ಕಾಗಿ ಪಾಕಿಸ್ತಾನ ತಂಡ ಭಾರತಕ್ಕೆ ಬರಲಿದೆ ಎಂಬ ವಿಶ್ವಾಸ ನಮ್ಮದು" ಎಂದು ಐಸಿಸಿ ವಕ್ತಾರ ಹೇಳಿದ್ದಾರೆ.

ಐಸಿಸಿ ವೇಳಾಪಟ್ಟಿಗೆ ಮತ್ತು ಪಂದ್ಯಗಳು ನಡೆಯುವ ಸ್ಥಳಗಳಿಗೆ ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಕ್ಷೇಪ ವ್ಯಕ್ತಪಡಿಸಿದೆ ಎಂದು ಪಿಟಿಐ ವರದಿ ಮಾಡಿದೆ. ಆದರೆ ಐಸಿಸಿ ಇದನ್ನು ನಿರಾಕರಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Navaz

contributor

Byline - ವಾರ್ತಾಭಾರತಿ

contributor

Similar News