3ನೇ ಟೆಸ್ಟ್‌ನ ಮೊದಲ ದಿನ: ಮತ್ತೊಂದು ಬ್ಯಾಟಿಂಗ್ ಕುಸಿತ ಅನುಭವಿಸಿದ ಭಾರತ

Update: 2024-11-01 15:30 GMT

ಮುಂಬೈ: ಪ್ರವಾಸಿ ನ್ಯೂಝಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿಯ ಮೂರನೇ ಹಾಗೂ ಕೊನೆಯ ಪಂದ್ಯದ ಮೊದಲ ದಿನವಾದ ಶುಕ್ರವಾರ, ಭಾರತವು ಆರಂಭದಲ್ಲಿ ಗಳಿಸಿದ ಮುನ್ನಡೆಯನ್ನು ಕೊನೆಯಲ್ಲಿ ಬಿಟ್ಟುಕೊಟ್ಟಿದೆ. ಕೇವಲ ಅಂತಿಮ 20 ನಿಮಿಷಗಳ ಅವಧಿಯಲ್ಲಿ ಭಾರತದ ಬ್ಯಾಟಿಂಗ್ ಚಿತ್ರಣವೇ ಬದಲಾಗಿ ಹೋಯಿತು.

ಮುಂಬೈಯ ವಾಂಖೇಡೆ ಸ್ಟೇಡಿಯಮ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಟಾಸ್ ಗೆದ್ದ ನ್ಯೂಝಿಲ್ಯಾಂಡ್ ಮೊದಲು ಬ್ಯಾಟಿಂಗ್ ಆಯ್ದುಕೊಂಡಿತು. ಅದರ ಮೊದಲ ಇನ್ನಿಂಗ್ಸ್ ಅನ್ನು 235 ರನ್‌ಗೆ ನಿಯಂತ್ರಿಸುವಲ್ಲಿ ರವೀಂದ್ರ ಜಡೇಜ ಮತ್ತು ವಾಶಿಂಗ್ಟನ್ ಸುಂದರ್ ಹೆಚ್ಚಿನ ಕೊಡುಗೆ ನೀಡಿದರು. 65 ರನ್‌ಗಳನ್ನು ಕೊಟ್ಟು 5 ವಿಕೆಟ್‌ಗಳನ್ನು ಉರುಳಿಸಿದ ಜಡೇಜ ಮತ್ತು 81 ರನ್‌ಗಳನ್ನು ನೀಡಿ 4 ವಿಕೆಟ್‌ಗಳನ್ನು ಕಿತ್ತ ಸುಂದರ್ ತಮ್ಮ ಪಾತ್ರಗಳನ್ನು ಸಮರ್ಥವಾಗಿ ನಿಭಾಯಿಸಿದರು. ಆದರೆ, ಭಾರತದ ಬ್ಯಾಟಿಂಗ್ ದೌರ್ಬಲ್ಯಗಳು ಮುಂದುವರಿದವು. ಎಂಟು ಎಸೆತಗಳ ಅಂತರದಲ್ಲಿ ಭಾರತದ ಮೂರು ವಿಕೆಟ್‌ಗಳು ಉರುಳಿದವು.

ಇದು ಟೆಸ್ಟ್ ಕ್ರಿಕೆಟ್‌ನಲ್ಲಿ ಜಡೇಜರ 14ನೇ ಐದು ವಿಕೆಟ್ ಗೊಂಚಲಾಗಿದೆ.

ಈವರೆಗೆ ಜಡೇಜ ಪಡೆದಿರುವ ಟೆಸ್ಟ್ ವಿಕೆಟ್‌ಗಳ ಸಂಖ್ಯೆ 314ಕ್ಕೇರಿದೆ. ಗರಿಷ್ಠ ಟೆಸ್ಟ್ ವಿಕೆಟ್‌ಗಳನ್ನು ಪಡೆದವರ ಪಟ್ಟಿಯ ಅಗ್ರ ಸ್ಥಾನದಲ್ಲಿ 417 ವಿಕೆಟ್‌ಗಳನ್ನು ಪಡೆದುಕೊಂಡಿರುವ ಹರ್ಭಜನ್ ಸಿಂಗ್ ಇದ್ದಾರೆ.

ಭಾರತವು ಬೆಂಗಳೂರಿನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 8 ವಿಕೆಟ್‌ಗಳಿಂದ ಸೋತರೆ, ಪುಣೆಯಲ್ಲಿ ನಡೆದ ಎರಡನೇ ಟೆಸ್ಟ್‌ನಲ್ಲಿ 113 ರನ್‌ಗಳ ಪರಾಜಯ ಅನುಭವಿಸಿದೆ. ಹಾಗಾಗಿ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಸ್ಥಾನ ಪಡೆಯುವ ಸ್ಪರ್ಧೆಯಲ್ಲಿ ಇರಲು ಭಾರತವು ಈ ಪಂದ್ಯವನ್ನು ಗೆಲ್ಲುವುದು ಅಗತ್ಯವಾಗಿದೆ.

ನಾಲ್ಕು ರನ್ ಗಳಿಸಿರುವ ವಿರಾಟ್ ಕೊಹ್ಲಿ ದಿನದಾಟದ ಕೊನೆಯಲ್ಲಿ ಅನಗತ್ಯ ರನ್‌ಗಾಗಿ ಓಡಿ ರನೌಟಾದರು. ಈ ಮೂಲಕ ಭಾರತವು ಅಗಾಧ ಸವಾಲನ್ನು ಎದುರಿಸುತ್ತಿದೆ. ನಾಯಕ ರೋಹಿತ್ ಶರ್ಮಾ ಕೂಡ (18) ಇನಿಂಗ್ಸ್‌ಗೆ ಕೊಡುಗೆ ನೀಡುವಲ್ಲಿ ವಿಫಲವಾದರು.

ಆರಂಭಿಕ ಯಶಸ್ವಿ ಜೈಸ್ವಾಲ್ (30) ಮತ್ತು ಶುಭಮನ್ ಗಿಲ್ (31 ಅಜೇಯ) ಎರಡನೇ ವಿಕೆಟ್‌ಗೆ ನಿಭಾಯಿಸಿದ 53 ರನ್‌ಗಳ ಭಾಗೀದಾರಿಕೆಯು ಭಾರತೀಯ ಇನಿಂಗ್ಸ್‌ನ ಮುಖ್ಯಾಂಶವಾಗಿತ್ತು. ಜೈಸ್ವಾಲ್ ನಿರ್ಗಮಿಸುವವರೆಗೆ ಅವರ ಭಾಗೀದಾರಿಕೆಯು ಭಾರತೀಯ ಇನಿಂಗ್ಸ್‌ಗೆ ಚೇತರಿಕೆ ಒದಗಿಸಿತು.

ಇದಕ್ಕೂ ಮೊದಲು, ನ್ಯೂಝಿಲ್ಯಾಂಡ್‌ನ ಮೊದಲದ ಇನಿಂಗ್ಸ್‌ನಲ್ಲಿ ಭಾರತೀಯ ಸ್ಪಿನ್ನರ್‌ಗಳಾದ ಜಡೇಜ ಮತ್ತು ವಾಶಿಂಗ್ಟನ್ ಸುಂದರ್ ದಾಂಧಲೆಗೈದರು.

ನ್ಯೂಝಿಲ್ಯಾಂಡ್ ನಾಯಕ ಟಾಮ್ ಲ್ಯಾತಮ್ (28) ಮತ್ತು ಉತ್ತಮ ಫಾರ್ಮ್‌ನಲ್ಲಿರುವ ರಚಿನ್ ರವೀಂದ್ರ (5)ರ ವಿಕೆಟ್‌ಗಳನ್ನು ಉರುಳಿಸುವ ಮೂಲಕ ವಾಶಿಂಗ್ಟನ್ ಸುಂದರ್ ಭಾರತೀಯ ಪಾಳಯದಲ್ಲಿ ಭರವಸೆ ತುಂಬಿದರು.

ಆದರೆ, ಸ್ಪಿನ್-ಸ್ನೇಹಿ ಪಿಚ್‌ನಲ್ಲಿಯೂ ಲೀಲಾಜಾಲವಾಗಿ ಬ್ಯಾಟಿಂಗ್ ಮಾಡಿದ ವಿಲ್ ಯಂತ್ (71) ಮತ್ತು ಡ್ಯಾರಿಲ್ ಮಿಚೆಲ್ (82) ನ್ಯೂಝಿಲ್ಯಾಂಡ್‌ನ ಮೊದಲ ಇನಿಂಗ್ಸನ್ನು ಬೃಹತ್ ಮೊತ್ತದತ್ತ ಒಯ್ಯುವ ಸೂಚನೆಯನ್ನು ನೀಡಿದರು. ಆದರೆ, ಜಡೇಜ ತನ್ನ ಸ್ಪಿನ್ ಕೌಶಲದ ಮೂಲಕ ಐದು ವಿಕೆಟ್‌ಗಳನ್ನು ಉರುಳಿಸಿ ಪ್ರವಾಸಿಗರ ಯೋಜನೆಯನ್ನು ವಿಫಲಗೊಳಿಸಿದರು.

ಒಂದು ಹಂತದಲ್ಲಿ ಮೂರು ವಿಕೆಟ್‌ಗಳ ನಷ್ಟಕ್ಕೆ 159 ರನ್ ಗಳಿಸಿದ್ದ ನ್ಯೂಝಿಲ್ಯಾಂಡ್, ಜಡೇಜ ದಾಳಿಗೆ ತತ್ತರಿಸಿ 235 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡಿತು.

ದಿನದಾಟದ ಕೊನೆಗೆ, 31 ರನ್ ಗಳಿಸಿರುವ ಶುಭಮನ್ ಗಿಲ್ ಮತ್ತು ಒಂದು ರನ್ ಗಳಿಸಿರುವ ರಿಶಭ್ ಪಂತ್ ಕ್ರೀಸ್‌ನಲ್ಲಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News