ಎರಡನೆ ಬಾರಿ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಶಿಪ್ ಗೆದ್ದು ಇತಿಹಾಸ ನಿರ್ಮಿಸಿದ ಭಾರತದ ಕೊನೆರು ಹಂಪಿ
ನ್ಯೂಯಾರ್ಕ್: ರವಿವಾರ ಇಲ್ಲಿ ನಡೆದ ವಿಶ್ವ ರ‍್ಯಾಪಿಡ್ ಚೆಸ್ ಚಾಂಪಿಯನ್ ಶಿಪ್ ಪಂದ್ಯದಲ್ಲಿ ಇಂಡೋನೇಶಿಯಾದ ಐರೀನ್ ಸುಕಂದರ್ ರನ್ನು ಪರಾಭವಗೊಳಿಸುವ ಮೂಲಕ ಎರಡನೆ ಬಾರಿ ಈ ಪ್ರಶಸ್ತಿಯನ್ನು ಗೆದ್ದು ಭಾರತದ ಕೊನೆರು ಹಂಪಿ ಇತಿಹಾಸ ನಿರ್ಮಿಸಿದ್ದಾರೆ.
ಇದಕ್ಕೂ ಮುನ್ನ, 2019ರಲ್ಲಿ ಜಾರ್ಜಿಯಾದಲ್ಲಿ ಕೊನೆರು ಹಂಪಿ ಈ ಪ್ರಶಸ್ತಿಯನ್ನು ಜಯಿಸಿದ್ದರು. ಈ ಗೆಲುವಿನೊಂದಿಗೆ ಚೀನಾದ ಜು ವೆಂಜುನ್ ನಂತರ ಒಂದಕ್ಕಿಂತ ಹೆಚ್ಚು ಬಾರಿ ಈ ಪ್ರಶಸ್ತಿಯನ್ನು ಜಯಿಸಿದ ಎರಡನೆ ಆಟಗಾರ್ತಿ ಎಂಬ ಶ್ರೇಯಕ್ಕೆ ಕೊನೆರು ಹಂಪಿ ಭಾಜನರಾದರು.
37 ವರ್ಷದ ಕೊನೆರು ಹಂಪಿ, 11 ಅಂಕಗಳ ಪೈಕಿ 8.5 ಅಂಕಗಳನ್ನು ಪಡೆಯುವ ಮೂಲಕ ಈ ಕ್ರೀಡಾಕೂಟವನ್ನು ಮುಕ್ತಾಯಗೊಳಿಸಿದರು.
ಇತ್ತೀಚೆಗೆ ಸಿಂಗಪೂರ್ ನಲ್ಲಿ ಮುಕ್ತಾಯಗೊಂಡ ವಿಶ್ವ ಚೆಸ್ ಚಾಂಪಿಯನ್ ಶಿಪ್ ನ ಕಲಾತ್ಮಕ ಮಾದರಿಯಲ್ಲಿ ಚೀನಾದ ಡಿಂಗ್ ಲಿರೆನ್ ರನ್ನು ಭಾರತದ ಗ್ರ್ಯಾಂಡ್ ಮಾಸ್ಟರ್ ಡಿ.ಗುಕೇಶ್ ಪರಾಭವಗೊಳಿಸಿದ ನಂತರ, ಭಾರತದ ಪಾಲಿಗೆ ಹಂಪಿಯ ಗೆಲುವು ಈ ವರ್ಷದ ಮತ್ತೊಂದು ರೋಮಾಂಚಕ ಸಾಧನೆಯಾಗಿದೆ. ಇದಕ್ಕೂ ಮುನ್ನ, ಸೆಪ್ಟೆಂಬರ್ ತಿಂಗಳಲ್ಲಿ ಬುಡಾಪೆಸ್ಟ್ ನಲ್ಲಿ ನಡೆದಿದ್ದ ಮುಕ್ತ ಹಾಗೂ ಮಹಿಳೆಯರ ವಿಭಾಗದಲ್ಲಿ ಭಾರತವು ತನ್ನ ಪ್ರಪ್ರಥಮ ಚಿನ್ನದ ಪದಕ ಗೆದ್ದಿತ್ತು.
“ನಾನು ಮೊದಲ ಸುತ್ತಿನಲ್ಲಿ ಪರಾಭವಗೊಂಡ ನಂತರ, ನಾನು ಪ್ರಶಸ್ತಿ ಜಯಿಸುತ್ತೇನೆ ಎಂದುಕೊಂಡಿರಲಿಲ್ಲ” ಎಂದು ಕೊನೆರು ಹಂಪಿ ಹೇಳಿದ್ದಾರೆ.