ಪ್ಯಾರಿಸ್ ಪ್ಯಾರಾಲಿಂಪಿಕ್ಸ್ ನಲ್ಲಿ ಭಾರತಕ್ಕೆ ಮತ್ತೊಂದು ಚಿನ್ನ

Update: 2024-09-02 15:19 GMT
Photo: X

ಪ್ಯಾರಿಸ್ : ಭಾರತೀಯ ಶಟ್ಲರ್ ನಿತೇಶ್ ಕುಮಾರ್ ಸೋಮವಾರ ಪ್ಯಾರಾಲಿಂಪಿಕ್ ಗೇಮ್ಸ್‌ನ ಪುರುಷರ ಸಿಂಗಲ್ಸ್ ಎಸ್‌ಎಲ್‌3 ವಿಭಾಗದಲ್ಲಿ ಚಿನ್ನದ ಪದಕ ಜಯಿಸುವ ಮೂಲಕ ಇತಿಹಾಸ ನಿರ್ಮಿಸಿದರು.

ಒಂದು ಗಂಟೆ, 20 ನಿಮಿಷಗಳ ಕಾಲ ನಡೆದ ಫೈನಲ್ ಹಣಾಹಣಿಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ 29 ರ ಹರೆಯದ ನಿತೇಶ್ ಕುಮಾರ್ ಗ್ರೇಟ್ ಬ್ರಿಟನ್‌ನ ಡೇನಿಯಲ್ ಬೆಥೆಲ್‌ರನ್ನು 21-14, 18-21, 23-21 ಗೇಮ್‌ಗಳ ಅಂತರದಿಂದ ಮಣಿಸಿದರು.

ಟೋಕಿಯೊ ಗೇಮ್ಸ್‌ನಲ್ಲಿ ಬೆಳ್ಳಿ ಪದಕ ವಿಜೇತ ಬೆಥೆಲ್ ವಿರುದ್ಧ ಮೊದಲ ಗೇಮ್ ಅನ್ನು 21-14 ಅಂತರದಿಂದ ಗೆದ್ದುಕೊಂಡರು. ಬೆಥೆಲ್ ಎರಡನೇ ಗೇಮ್ ಅನ್ನು 21-18 ಅಂತರದಿಂದ ಗೆದ್ದುಕೊಂಡು ತಿರುಗೇಟು ನೀಡಿದರು. ಅಂತಿಮ ಗೇಮ್‌ನಲ್ಲಿ ಇಬ್ಬರು ಅಟಗಾರರ ನಡುವೆ ತೀವ್ರ ಪೈಪೋಟಿ ಕಂಡುಬಂದಿದ್ದು ಒತ್ತಡದ ಪರಿಸ್ಥಿತಿಯಲ್ಲೂ ಕಠಿಣ ಹೋರಾಟ ನೀಡಿದ ನಿತೇಶ್ 23-21 ಅಂತರದಿಂದ ಜಯಶಾಲಿಯಾದರು.

ನಿತೇಶ್ ಪ್ರಸಕ್ತ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಜಯಿಸಿದ ಎರಡನೇ ಭಾರತೀಯ ಕ್ರೀಡಾಪಟುವಾಗಿದ್ದಾರೆ. ಅವನಿ ಲೇಖರ ಮಹಿಳೆಯರ 10 ಮೀ. ಏರ್ ರೈಫಲ್ ಶೂಟಿಂಗ್ ಸ್ಪರ್ಧೆಯಲ್ಲಿ ಐತಿಹಾಸಿಕ ಚಿನ್ನ ಜಯಿಸಿದ್ದರು.

ತನ್ನ 15ನೇ ವಯಸ್ಸಿನಲ್ಲಿ ರೈಲು ದುರಂತದಲ್ಲಿ ತನ್ನ ಎಡಗಾಲನ್ನು ಕಳೆದುಕೊಂಡಿದ್ದ ನಿತೇಶ್ ವೃತ್ತಿಜೀವನದಲ್ಲಿ ಇದು ಮಹತ್ವದ ಮೈಲಿಗಲ್ಲಾಗಿದೆ. ದುರಂತದಿಂದ ಆದ ಎಲ್ಲ ಅಡೆತಡೆಗಳನ್ನು ಮೀರಿ ನಿಂತ ನಿತೇಶ್ ಇದೀಗ ಪ್ಯಾರಾ ಬ್ಯಾಡ್ಮಿಂಟನ್‌ನಲ್ಲಿ ಪ್ಯಾರಾಲಿಂಪಿಕ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ.

ನಿತೇಶ್ ಗೆಲುವಿನೊಂದಿಗೆ ಭಾರತವು ಪುರುಷರ ಸಿಂಗಲ್ಸ್ ಎಸ್‌ಎಲ್‌3 ಪ್ಯಾರಾಲಿಂಪಿಕ್ಸ್ ಪ್ರಶಸ್ತಿ ತನ್ನಲ್ಲೇ ಉಳಿಸಿಕೊಂಡಿದೆ. 3 ವರ್ಷಗಳ ಹಿಂದೆ ಪ್ರಮೋದ್ ಭಗತ್ ಪುರುಷರ ಸಿಂಗಲ್ಸ್ ಎಸ್‌ಎಲ್ 3 ವಿಭಾಗದಲ್ಲಿ ಚಿನ್ನದ ಪದಕ ಜಯಿಸಿದ್ದರು.

► ಐಐಟಿ ಪದವೀಧರ ನಿತೇಶ್ ಕುಮಾರ್

ನಿತೇಶ್ ಕುಮಾರ್ 2009ರಲ್ಲಿ ವಿಶಾಖಪಟ್ಟಣದಲ್ಲಿ ನಡೆದಿದ್ದ ರೈಲು ದುರಂತದಲ್ಲಿ ಎಡಗಾಲು ಕಳೆದುಕೊಂಡಿದ್ದರು. ಹೀಗಾಗಿ ಅವರು ತಿಂಗಳುಗಳ ಕಾಲ ಹಾಸಿಗೆಯಲ್ಲಿ ಕಳೆದಿದ್ದರು. ಆದರೆ ತನ್ನ ಸಮಯವನ್ನು ಭಾರತೀಯ ತಂತ್ರಜ್ಞಾನ ಸಂಸ್ಥೆ(ಐಐಟಿ)ಯ ಪ್ರವೇಶ ಪರೀಕ್ಷೆಗಾಗಿ ತಯಾರಿಗಾಗಿ ಬಳಸಿದರು. ಇದಕ್ಕಾಗಿ 1 ವರ್ಷದ ರಜೆಯನ್ನೂ ತೆಗೆದುಕೊಂಡರು.

ನಿತೇಶ್ 2013ರಲ್ಲಿ ಐಐಟಿ ಮಂಡಿಗೆ ಸೇರ್ಪಡೆಯಾದರು. ಸಂಸ್ಥೆಯಲ್ಲಿದ್ದ ಅವಧಿಯಲ್ಲಿ ನಿತೇಶ್ ಬ್ಯಾಡ್ಮಿಂಟನ್‌ನತ್ತ ಆಸಕ್ತಿ ಬೆಳೆಸಿಕೊಂಡರು. ಹರ್ಯಾಣದ ತಂಡದ ಪರ ಪ್ಯಾರಾ ನ್ಯಾಶನಲ್ ಚಾಂಪಿಯನ್‌ಶಿಪ್‌ನಲ್ಲಿ ಭಾಗವಹಿಸುವ ಮೂಲಕ ನಿತೇಶ್ 2016ರಲ್ಲಿ ತನ್ನ ಪ್ಯಾರಾ ಬ್ಯಾಡ್ಮಿಂಟನ್ ವೃತ್ತಿಜೀವನ ಆರಂಭಿಸಿದರು.

2017ರಲ್ಲಿ ಐರಿಶ್ ಪ್ಯಾರಾ-ಬ್ಯಾಡ್ಮಿಂಟನ್ ಇಂಟರ್‌ನ್ಯಾಶನ್‌ನಲ್ಲಿ ಮೊದಲ ಅಂತರರಾಷ್ಟ್ರೀಯ ಪ್ರಶಸ್ತಿ ಗೆದ್ದರು. ಬಿಡಬ್ಲ್ಯುಎಫ್ ಪ್ಯಾರಾ ಬ್ಯಾಡ್ಮಿಂಟನ್ ವಲ್ಡ್ ಹಾಗೂ ಏಶ್ಯನ್ ಪ್ಯಾರಾ ಗೇಮ್ಸ್‌ಗಳಲ್ಲಿ ಹಲವು ಪ್ರಶಸ್ತಿ ಜಯಿಸಿದರು.

ಪ್ಯಾರಾ ಬ್ಯಾಡ್ಮಿಂಟನ್ ವೃತ್ತಿಜೀವನದಲ್ಲಿ ಉತ್ತಮ ಸಾಧನೆಯ ಜೊತೆಗೆ ಹರ್ಯಾಣದ ಕ್ರೀಡಾ ಹಾಗೂ ಯುವ ವ್ಯವಹಾರಗಳ ಇಲಾಖೆಯಲ್ಲಿ ಹಿರಿಯ ಬ್ಯಾಡ್ಮಿಂಟನ್ ಕೋಚ್ ಆಗಿಯೂ ಕೆಲಸ ಮಾಡುತ್ತಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ashfaq

contributor

Byline - ವಾರ್ತಾಭಾರತಿ

contributor

Similar News